Advertisement

ಅಮ್ಮನಿಲ್ಲದೇ ಮರುಗಿದ ಮರಿಯಾನೆ!

11:46 AM Apr 09, 2018 | |

ಸುಳ್ಯ : ಅದರ ಮುಖದಲ್ಲಿ ಅಮ್ಮನಿಲ್ಲದ ದುಗುಡವಿತ್ತು. ನಿತ್ರಾಣದಿಂದ ಬಳಲಿದ್ದರೂ ಅಮ್ಮನಿಲ್ಲದೆ ತುತ್ತು ಮುಟ್ಟಲಿಲ್ಲ. ಆರು ತಿಂಗಳ ಆ ಮರಿಯಾನೆ ಆನೆಗಳ ಹಿಂಡಿನಿಂದ ಕಳಚಿ ಮೂಕ ರೋದನಗೈಯುತ್ತಿದ್ದರೆ, ಆ ಕ್ಷಣ ಭಸ್ಮಡ್ಕದ ಪಯಸ್ವಿನಿ ನದಿ ತೀರದಲ್ಲಿ ನೆರೆದಿದ್ದವರ ಮನ ಕಲಕಿತ್ತು..!

Advertisement

ಬಾಕಿಯಾದ ಮರಿಯಾನೆ
ಮೂರು ದಿನಗಳ ಹಿಂದೆ ಮೇದಿನಡ್ಕ ಸಂರಕ್ಷಿತ ಅರಣ್ಯ ಪ್ರದೇಶದಿಂದ ಭಸ್ಮಡ್ಕದ ಪಯಸ್ವಿನಿ ನದಿ ಕಿನಾರೆಗೆ ಎಂಟು ಆನೆಗಳ ಹಿಂಡೊಂದು ಲಗ್ಗೆ ಇಟ್ಟಿತ್ತು. ಮೂರು ಮರಿ ಆನೆಗಳೊಂದಿಗೆ, ಐದು ದೊಡ್ಡ ಆನೆಗಳು ಜಲಕ್ರೀಡೆಯಲ್ಲಿ ತೊಡಗಿದ್ದವು. ಅವುಗಳು ನಗರಕ್ಕೆ ಲಗ್ಗೆ ಇಟ್ಟರೆ ಅಪಾಯ ತಪ್ಪಿದ್ದಲ್ಲ ಎಂದು ಅರಣ್ಯ ಇಲಾಖೆ ಸಿಬಂದಿ, ಸಾರ್ವಜನಿಕರು ಆನೆ ಹಿಂಡನ್ನು ಕಾಡಿಗೆ ಅಟ್ಟುವ ಯತ್ನ ನಡೆಸಿದ್ದರು. ಶನಿವಾರ ಸಂಜೆ ವೇಳೆ ಆರು ತಿಂಗಳ ಪ್ರಾಯದ ಗಂಡಾನೆಯೊಂದು ಉಳಿದು, ಮಿಕ್ಕವೆಲ್ಲ ಕಾಡು ಸೇರಿದ್ದವು. ಬಾಕಿಯಾಗಿದ್ದ ಮರಿಯಾನೆ ತಾಯಿಗಾಗಿ ಕಾಡಿನತ್ತ ನೋಡುತ್ತ ಆರ್ತನಾದಕ್ಕೆ ಶುರು ಮಾಡಿದ್ದು, ಒಂದು ಕ್ಷಣ ಆನೆ ದಾಳಿಯಿಂದ ಹೈರಾಣಾಗಿದ್ದ ಕೃಷಿಕರು, ನಗರ ವಾಸಿಗಳೂ ಈ ದೃಶ್ಯ ನೋಡಿ ಮಮ್ಮಲ ಮರುಗಿದರು.

ನಿತ್ರಾಣಗೊಂಡ ಮರಿಯಾನೆ
ಈ ಪರಿಸರದಲ್ಲಿ ಆಹಾರ ಹುಡುಕುತ್ತಾ ನದಿ ಕಿನಾರೆಗೆ ಇಳಿವ ಆನೆಗಳ ಚಟುವಟಿಕೆ ಮಾಮೂಲಾಗಿದ್ದರೂ, ಈ ಬಾರಿ ನದಿಗೆ ಇಳಿದ ಆನೆ ಹಿಂಡು ಕಾಡಿನತ್ತ ಮುಖ ಮಾಡಿರಲಿಲ್ಲ. ಕಾರಣ ಮರಿಯಾನೆಯ ಅನಾರೋಗ್ಯ. ಆನೆಯ ದೇಹದಲ್ಲಿ ನೀರಿನ ಅಂಶ ಮತ್ತು ಆಹಾರದ ಕೊರತೆಯಿದ್ದರಿಂದ ನಿತ್ರಾಣ ಸ್ಥಿತಿಯಲ್ಲಿದ್ದು, ಅದನ್ನು ಬಿಟ್ಟು ಮತ್ತೆ ಕಾಡು ಸೇರಲು ಉಳಿದ ಆನೆಗಳಿಗೆ ಮನಸ್ಸು ಬಂದಿರಲಿಲ್ಲ.

ಎರಡು ದಿನ ತಾಯಿ ಆನೆ ಮರಿಯನ್ನು ಮೇಲೆತ್ತಲು ವಿಫ‌ಲ ಯತ್ನ ನಡೆ ಸಿತ್ತು. ಶನಿವಾರ ಕಾಡಾನೆಗಳನ್ನು ಅಟ್ಟಲು ಸಿಡಿ ಮದ್ದು, ಬೆಂಕಿ ಪ್ರಯೋಗ ನಡೆಸಲಾಗಿದ್ದು, ಅದಕ್ಕೆ ಅಂಜಿ ಕಾಡಿನ ಬದಿಗೆ ತಾಯಿ ಓಡಿದ್ದರೂ, ಮರಿಯನ್ನು ನೆನೆದು ಮತ್ತೆ ದೌಡಾಯಿಸುತ್ತಲೇ ಇತ್ತು. ಗುಂಪಿನಲ್ಲಿದ್ದ ಇನ್ನೊಂದು ಮರಿ ಆನೆ ನಿತ್ರಾಣದಲ್ಲಿದ್ದ ಮರಿ ಆನೆ ಬಳಿ ಬಂದು ಮೈದಡವಿ ಮೇಲೆತ್ತಲು ಯತ್ನಿಸುತ್ತಿದ್ದದ್ದು, ಭಾವನಾತ್ಮಕವಾಗಿತ್ತು.

ನದಿ ದಾಟಿದ ಮರಿಯಾನೆ
ರವಿವಾರ ಬೆಳಗ್ಗೆ ಮರಿಯಾನೆ ಭಸ್ಮಡ್ಕದ ಕುರುಂಜಿಕಾರ್‌ ಫಾರ್ಮ್ಸ್ ನ ಪಂಪ್‌ ಶೆಡ್‌ ನದಿ ಬದಿಯಲ್ಲಿ ಮರವೊಂದರ ಕೆಳಗಿನ ನೀರಿನ ಹೊಂಡದಲ್ಲಿ ಮಲಗಿತ್ತು. ಮೇಲೆ ನಿಲ್ಲಲಾಗದೇ ಪದೇ-ಪದೇ ಕುಸಿದು ಬೀಳುತ್ತಿತ್ತು.

Advertisement

ಜನದಟ್ಟನೆ ಹೆಚ್ಚಾದಂತೆ, ಮರದ ಬಳಿಯಿಂದ ಅಣತಿ ದೂರದಲ್ಲಿದ್ದ ನೀರು ನಿಂತ ಸ್ಥಳಕ್ಕೆ ತೆರಳಿದೆ. ಮೇಲ್ಭಾಗದಲ್ಲಿ ಬಿದಿರ ಪೊದೆ ಆವರಿಸಿದ್ದರಿಂದ ಅರಣ್ಯ ಸಿಬಂದಿ ಮರಿಯಾನೆಯನ್ನು ಅಲ್ಲಿಂದ ಮರಳಿ ಮರದ ಬಳಿ ತರಲು ತಾಸುಗಟ್ಟಲೇ ಪ್ರಯತ್ನ ಮುಂದುವರಿಸಿದ್ದರು. ಕೊನೆಗೂ ಮರಿಯಾನೆ ಆರಂಭದಲ್ಲಿದ್ದ ಸ್ಥಳಕ್ಕೆ ಮರಳಿ ಬಂದಿತ್ತು.

ಆಹಾರ ಮುಟಲಿಲ್ಟ ..!
ಅರಣ್ಯ ಇಲಾಖೆ ಸಿಬಂದಿಗಳು, ಸ್ಥಳೀಯರು ಮರಿಯಾನೆಗೆ ಕಲ್ಲಂಗಡಿ ಹಣ್ಣು ಮೊದಲಾದ ಆಹಾರ ತಿನಿಸಲು ಯತ್ನಿಸಿದ್ದರೂ, ಅದು ಮುಟ್ಟಲಿಲ್ಲ. ವೈದ್ಯರ ಅಭಿಪ್ರಾಯದ
ಪ್ರಕಾರ, ಮರಿಯನೆ ತಾಯಿ ಆನೆ ಕೊಟ್ಟ ಆಹಾರ ಸೇವಿಸುವಷ್ಟು ಮಾತ್ರ ಪ್ರಬುದ್ಧವಾಗಿದೆ. ಅನಂತರ ಮರಿಯಾನೆಯನ್ನು ಹಗ್ಗ ಬಳಸಿ, ನದಿ ತಟಕ್ಕೆ ತಂದು ಮರವೊಂದಕ್ಕೆ ಕಟ್ಟಿ ಹಾಕಿ ವೈದ್ಯರು ಚಿಕಿತ್ಸೆ ನೀಡಿದರು. ಗ್ಲೂಕೋಸ್‌ ಇಂಜೆಕ್ಷನ್‌ ಮೂಲಕ ನೀಡಲಾಯಿತು. ಆರಂಭದಲ್ಲಿ ಒಂದಷ್ಟು ಕೊಸರಾಡಿದರೂ, ಬಳಿಕ ಚಿಕಿತ್ಸೆಗೆ ಒಗ್ಗಿಕೊಂಡಿತ್ತು.

ಮನಸ್ಸು ಕರಗಿತು
ಮರಿಯಾನೆಯನ್ನು ಮುಟ್ಟಲು ಎಲ್ಲರೂ ಹಿಂಜರಿದರು. ಮಧ್ಯಾಹ್ನ 12 ಗಂಟೆ ತನಕ ಅದು ನಿತ್ರಾಣದಿಂದ ಮೇಲಕ್ಕೆ ಏಳಲಾಗದೇ ಬಿದ್ದಿತ್ತು. ತಾಯಿಯಿಂದ ಕಳಚಿ ಒಂಟಿಯಾದ ಅದರ ನೋವು ಕಂಡಾಗ, ಮನಸ್ಸು ಕರಗಿತ್ತು.
– ಲಕ್ಷ್ಮೀಶ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next