Advertisement

ಎಲಿಬಿಚ್ಚಾಲಿಯಲ್ಲೊಂದು ಏಕೋಪಾಧ್ಯಾಯ ಶಾಲೆ!

02:26 PM Oct 05, 2018 | |

ರಾಯಚೂರು: ಒಂದೆಡೆ ಮಕ್ಕಳ ಕೊರತೆ ನೆಪವೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದಾಗಿ ಮಾತನ್ನಾಡುವ ಸರ್ಕಾರ; ಮತ್ತೂಂದೆಡೆ ವಿದ್ಯಾರ್ಥಿಗಳಿದ್ದರೂ ಶಿಕ್ಷಕರನ್ನು ನಿಯೋಜಿಸದೆ ಹೇಗೆ ಅಸಡ್ಡೆ ತೋರುತ್ತಿದೆ ಎನ್ನುವುದಕ್ಕೆ ಇಲ್ಲಿ ಉತ್ತಮ ನಿದರ್ಶನ.

Advertisement

ರಾಯಚೂರು ಜಿಲ್ಲೆಯಿರುವುದೇ ಗಡಿ ಭಾಗದಲ್ಲಿ. ಎರಡೂ ಭಾಗದಲ್ಲಿ ತೆಲಂಗಾಣ, ಸೀಮಾಂಧ್ರ ಸುತ್ತುವರಿದಿವೆ. ತಾಲೂಕಿನ ಎಲೆಬಿಚ್ಚಾಲಿ ಕೂಡ ಗಡಿ ಗ್ರಾಮವಾಗಿದ್ದು, ಅಲ್ಲಿನ ಸರ್ಕಾರಿ ಪ್ರೌಢಶಾಲೆ ಕೂಡ ಈಗ ಅಂಥ ಗಂಭೀರ ಸ್ಥಿತಿ ಎದುರಿಸುತ್ತಿದೆ. ಒಟ್ಟು ಆರು ಶಿಕ್ಷಕರ ಹುದ್ದೆ ಮಂಜೂರಾಗಿದ್ದರೂ 193 ವಿದ್ಯಾರ್ಥಿಗಳಿಗೆ ಇರುವುದು ಒಬ್ಬರೇ ಒಬ್ಬರು ಶಿಕ್ಷಕರು. 

2009ರಲ್ಲಿ ನೆರೆ ಬಂದು ಇಡೀ ಗ್ರಾಮ ಕೊಚ್ಚಿ ಹೋದಾಗ ಸಿಸ್ಕೋ ಕಂಪನಿಯು ಇಲ್ಲಿ ಸುಸಜ್ಜಿತ ಶಾಲೆ ನಿರ್ಮಿಸಿತ್ತು. ಅದು ಪ್ರಾಥಮಿಕ ಶಾಲೆಗೆ ಎಂದು ನೀಡಿದ ಕಟ್ಟಡವಾದರೂ ಅದರಲ್ಲೇ ಐದು ಕೋಣೆಗಳನ್ನು ಪ್ರೌಢಶಾಲೆಗಳಿಗೆ
ನೀಡಲಾಗಿದೆ. ಸುತ್ತಲಿನ ನಾಲ್ಕಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಇಲ್ಲಿಗೆ ಕಲಿಯಲು ಬರುತ್ತಿದ್ದಾರೆ.

ಎರವಲು ಸೇವೆಯೇ ಗತಿ: ಇಲ್ಲಿನ ಶಿಕ್ಷಕರ ಸಮಸ್ಯೆ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸೋತು ಹೋಗಿದ್ದಾರೆ. ಒತ್ತಡಕ್ಕೆ ಮಣಿದ ಅಧಿಕಾರಿಗಳು ಪಕ್ಕದ ಊರಿನಿಂದ ಒಬ್ಬ ಶಿಕ್ಷಕರನ್ನು
ವಾರದಲ್ಲಿ ಮೂರು ದಿನದ ಮಟ್ಟಿಗೆ ಎರವಲು ಸೇವೆ ನೀಡಿದ್ದಾರೆ. ಅದರ ಜತೆಗೆ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಒಬ್ಬರನ್ನು ಇಲ್ಲಿಗೆ ನಿಯೋಜಿಸಿದ್ದಾರೆ. ಅದು ಕೂಡ ಅಲ್ಲಿನ ಸಿಆರ್‌ಪಿ ಮೌಖೀಕ ಸೂಚನೆ ಮೇರೆಗೆ ವಿನಃ ಮೇಲಧಿಕಾರಿಗಳ ಲಿಖೀತ ಆದೇಶದಿಂದಲ್ಲ. ಎರವಲು ಶಿಕ್ಷಕರು ಇಲ್ಲಿಗೆ ಬಂದು ಪಾಠ ಮಾಡಿದಾಗಲೇ ವ್ಯಾಸಂಗ ಎನ್ನುವಂತಾಗಿದೆ.

ಪಾಠಕ್ಕೂ, ಕಚೇರಿ ಕೆಲಸಕ್ಕೂ: ಇನ್ನು ಈಗಿರುವ ಕಾಯಂ ಶಿಕ್ಷಕಿಗೆ ಅನಿವಾರ್ಯವಾಗಿ ಪ್ರಭಾರ ಮುಖ್ಯ ಶಿಕ್ಷಕರ ಹುದ್ದೆ ನೀಡಲಾಗಿದೆ. ಹೀಗಾಗಿ ಅವರು ಬಿಸಿಯೂಟ, ಇಲಾಖೆಯ ಸಭೆ, ಸಮಾರಂಭಗಳು, ಯೋಜನೆಗಳ ಅನುಷ್ಠಾನ, ಸರ್ಕಾರದ ಕಾರ್ಯಕ್ರಮಗಳು, ಪಾಲಕರು, ಮಕ್ಕಳ ಸಮಸ್ಯೆಗಳ ಆಲಿಕೆ, ಮೂಲ ಸೌಲಭ್ಯಗಳ ಮೇಲುಸ್ತುವಾರಿ ಮಾಡಿ ಸಮಯ ಉಳಿದರೆ ಪಾಠ ಮಾಡುವ ಸ್ಥಿತಿಯಿದೆ. ಅವರೇ ಹೇಳುವಂತೆ, ನನ್ನ ಕೈಲಾದ ಕೆಲಸ ಮಾಡುತ್ತೇನೆ. ಮಕ್ಕಳಿಗೆ ನಿರೀಕ್ಷಿತ ಮಟ್ಟದಲ್ಲಿ ಬೋಧಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

Advertisement

ಸೌಲಭ್ಯಗಳ ಕೊರತೆ: ಇಲ್ಲಿನ ಪ್ರೌಢಶಾಲೆಗೆ ಸ್ವಂತ ಕಟ್ಟಡ ಇಲ್ಲ. ಪಕ್ಕದಲ್ಲೇ ಸ್ಥಳ ನಿಗದಿ ಮಾಡಿದ್ದರೂ ಸರ್ಕಾರ ಕಟ್ಟಡ ಮಂಜೂರು ಮಾಡಿಲ್ಲ. ಅದರ ಜತೆಗೆ ಈಗಿರುವ ಶಾಲೆಗಳಿಗೆ ಕಿಟಕಿಗಳು ಇವೆಯಾದರೂ ಅವಕ್ಕೆ ಬಾಗಿಲುಗಳಿಲ್ಲ. ಮಳೆ
ಬಂದರೆ ಇಡೀ ಕೋಣೆಗಳೆಲ್ಲ ನೀರಾಗುತ್ತದೆ. 

ಕಿಟಕಿಗಳಿಗೆ ಗಾಜುಗಳನ್ನು ಅಳವಡಿಸಿದ್ದರಿಂದ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಇನ್ನು ಈಚೆಗೆ ಕೆಲ ಡೆಸ್ಕ್ಗಳು ಬಂದಿದ್ದು, ಅವು ಕೇವಲ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರ ಸರಿ ಹೋಗಿದ್ದು, 9ನೇ ತರಗತಿ ವಿದ್ಯಾರ್ಥಿಗಳು ನೆಲದ ಮೇಲೆಯೇ ಕುಳಿತು ಪಾಠ ಕೇಳಬೇಕಿದೆ. ಇಷ್ಟಾದರೂ ಸೌಲಭ್ಯ ಕಲ್ಪಿಸಲು ಇಲಾಖೆ ಮುಂದಾಗಿಲ್ಲ.

ಗಡಿ ಭಾಗದಲ್ಲಿ ಮಕ್ಕಳು ಕನ್ನಡ ಕಲಿಕೆಗೆ ಹೆಚ್ಚಿನ ಉತ್ಸಾಹ ತೋರುತ್ತಿರುವುದೇ ದೊಡ್ಡ ವಿಚಾರ. ಅಂಥ ಕಡೆಯೂ ಸರ್ಕಾರ ಸೂಕ್ತ ಶಿಕ್ಷಕರನ್ನು ನಿಯೋಜಿಸದಿದ್ದರೆ ಕನ್ನಡ ಶಾಲೆಗಳ ಸುಧಾರಣೆ ಹೇಗೆ ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.

ಎಲೆಬಿಚ್ಚಾಲಿ ಶಾಲೆಗೆ ಸುತ್ತಲಿನ ನಾಲ್ಕಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಆದರೆ, ಇಲ್ಲಿ 193 ವಿದ್ಯಾರ್ಥಿಗಳಿದ್ದರೂ ಒಬ್ಬರೇ ಕಾಯಂ ಶಿಕ್ಷಕರಿದ್ದಾರೆ. ಹೆಚ್ಚಿನ ಶಿಕ್ಷಕರ ನಿಯೋಜನೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಇಲಾಖೆ ಅಧಿಕಾರಿಗಳು ಮಾತ್ರ ಸ್ಪಂದಿಸುತ್ತಿಲ್ಲ. ಹೀಗಾದರೆ ಮಕ್ಕಳ ಭವಿಷ್ಯದ ಗತಿಯೇನು..? 
 ಎಂ.ನಾಗೇಶ ಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷರು, ಎಲೆಬಿಚ್ಚಾಲಿ

ಎಲೆಬಿಚ್ಚಾಲಿ ಶಾಲೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಕೂಡಲೇ ಸಂಬಂಧಿಸಿದ ಬಿಇಒ ಗಮನಕ್ಕೆ ತಂದು ಕ್ರಮಕ್ಕೆ ಸೂಚಿಸಲಾಗುವುದು. ತಕ್ಷಣಕ್ಕೆ ಶಿಕ್ಷಕರ ವ್ಯವಸ್ಥೆ ಮಾಡಲಾಗುವುದು. ಮೂಲ ಸೌಲಭ್ಯಗಳ ಬಗ್ಗೆ ಗಮನ
ಹರಿಸಲಾಗುವುದು.
 ಬಿ.ಕೆ.ನಂದನೂರು, ಡಿಡಿಪಿಐ, ರಾಯಚೂರು

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next