ಮೈಸೂರು: ವಿಶ್ವ ಆನೆಗಳ ದಿನಾಚರಣೆ ಅಂಗವಾಗಿ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸೋಮವಾರ ಮೃಗಾಲಯದ ಆನೆ ಮನೆ ಬಳಿ, ಗಜಗಳ ಬಗೆಗಿನ ಮಾಹಿತಿ ಫಲಕ ಹಾಗೂ ಭಿತ್ತಿಪತ್ರ ಪ್ರದರ್ಶಿಸಿ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅವುಗಳ ಸಂರಕ್ಷಣೆ ಮತ್ತು ಬೆಳವಣಿಗೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕ್ಷೀಣಿಸುತ್ತಿರುವ ಅರಣ್ಯ ಪ್ರದೇಶದಿಂದ ಅವುಗಳ ವಾಸಸ್ಥಾನಕ್ಕೆ ಕುತ್ತು ಬರುತ್ತಿರುವುದರಿಂದ ಹಾಗೂ ಆನೆ ಮಾನವ ಸಂಘರ್ಷದಿಂದ ಅವುಗಳಿಗೆ ಉಂಟಾಗಿರುವ ಆಪತ್ತಿನ ಕುರಿತು ಮೃಗಾಲಯ ಅಧಿಕಾರಿಗಳು ಅರಿವು ಮೂಡಿಸಿದರು. ಮೃಗಾಲಯದ ಶಿಕ್ಷಣಾಧಿಕಾರಿ ಗುರುಪ್ರಸಾದ್ ಅವರು ಆನೆಗಳ ಜೀವನ ಶೈಲಿ, ಆಹಾರ ಸೇವನೆ, ಸಂತೋನ್ಪತಿ ಹಾಗೂ ಅದರ ನಡವಳಿಕೆ ಬಗ್ಗೆ ಮಾಹಿತಿ ಒದಗಿಸಿದರು.
ಆನೆಗಳಲ್ಲಿ ಆಫ್ರಿಕ ಮತ್ತು ಏಷ್ಯಾ ಆನೆಗಳೆಂಬ ಎರಡು ಪ್ರಭೇದಗಳಿವೆ. ಜಗತ್ತಿನಲ್ಲಿ ಸರಿ ಸುಮಾರು 4,50,000-7,00,000 ಆಫ್ರಿಕ ಆನೆಗಳು ಹಾಗೂ 35,000-40,000 ಏಷ್ಯಾ ಆನೆಗಳಿವೆ. ಭಾರತ ದೇಶದಲ್ಲಿ ಸುಮಾರು 27,312 ಆನೆಗಳಿದ್ದು, ಕರ್ನಾಟಕ ಸುಮಾರು 6,049 ಆನೆಗಳಿಗೆ ಆಶ್ರಯತಾಣವಾಗಿದೆ.
ಬೇಟೆಯಾಡುವುದು, ದಂತ ಮತ್ತು ಮಾಂಸಕ್ಕಾಗಿ ಹತ್ಯೆ ಮಾಡುವುದು, ಜನಸಂಖ್ಯೆ ವೃದ್ಧಿಯಿಂದ ಆಹಾರ ಕೊರತೆ, ಆವಾಸಸ್ಥಾನ ನಾಶ ಹಾಗೂ ಮಾನವ ಪ್ರಾಣಿಗಳ ಸಂಘರ್ಷ ಮುಂತಾದವುಗಳಿಂದಾಗಿ ಆನೆಗಳ ಸಂತತಿ ಕಡಿಮೆಯಾಗುತ್ತಿದೆ. ಹೀಗಾಗಿ ಆನೆಗಳ ಉಳಿವಿಗೆ ಹಾಗೂ ಆನೆಗಳ ಪೋಷಣೆ ಬಗ್ಗೆ ಅರಿವು ಅಗತ್ಯವಿದೆ ಎಂದು ತಿಳಿಸಿದರು.
ಆನೆ ಕರ್ನಾಟಕ, ಕೇರಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯದ ರಾಜ್ಯ ಪ್ರಾಣಿಯಾಗಿದ್ದು, ಈ ರಾಜ್ಯದಲ್ಲಿ ಹೆಚ್ಚು ಆನೆಗಳಿವೆ. ಆಫ್ರಿಕಾದ ಸವನ್ನಹ್ ಆನೆ, ಆಫ್ರಿಕಾದ ಕಾಡು ಆನೆ ಮತ್ತು ಏಷ್ಯಾದ ಆನೆ ಎಂದು ಮೂರು ಪ್ರಬೇಧದ ಆನೆಗಳಿದ್ದು, ಇವುಗಳನ್ನು ದೊಡ್ಡ ಕಿವಿ ಮತ್ತು ದಂತದಿಂದ ಗುರುತಿಸಲಾಗುತ್ತದೆ ಎಂದರು.
ಪ್ರಾಜೆಕ್ಟ್ ಎಲಿಫೆಂಟ್: ಆನೆ ಪಥದಲ್ಲಿ ಮನುಷ್ಯನ ಪ್ರವೇಶ ಹೆಚ್ಚಾಗುತ್ತಿರುವ ಕಾರಣ ಆನೆ ತಮ್ಮ ಅವಾಸಸ್ಥಾನ ಕಳೆದುಕೊಂಡು ಜನ ವಸತಿ ಪ್ರದೇಶಕ್ಕೆ ಮೇವು ಅರಸಿ ಬರುತ್ತಿವೆ. ಅವುಗಳ ಸಂರಕ್ಷಣೆಗಾಗಿಯೇ “ಪ್ರಾಜೆಕ್ಟ್ ಎಲಿಫೆಂಟ್’ ಆರಂಭವಾಗಿದ್ದರೂ ಆನೆಗಳನ್ನು ಉಳಿಸಿಕೊಳ್ಳುವಲ್ಲಿ ಮನುಷ್ಯನ ಹಸ್ತಕ್ಷೇಪ ಕಡಿಮೆಯಾಗಬೇಕು ಎಂದು ತಿಳಿಸಿದರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು, ವೀಕ್ಷಕರು ಹಾಗೂ ಮೃಗಾಲಯದ ಯೂತ್ ಕ್ಲಬ್ ಸದಸ್ಯರು ಮೃಗಾಲಯಕ್ಕೆ ಭೇಟಿ ನೀಡಿ ಆನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.