ಜಾಂಬಿಯಾ: ಭಯಾನಕ ಘಟನೆಯೊಂದರಲ್ಲಿ, ಆನೆಯೊಂದು ಸಫಾರಿ ಡ್ರೈವ್ ನಲ್ಲಿದ್ದ ನ್ಯೂ ಮೆಕ್ಸಿಕೋದ ಯುಎಸ್ ಪ್ರವಾಸಿಯೊಬ್ಬರ ಮೇಲೆ ದಾಳಿ ಮಾಡಿದ ಘಟನೆ ಜಾಂಬಿಯಾದಲ್ಲಿ ನಡೆದಿದೆ. ಘಟನೆಯಲ್ಲಿ ಆನೆ ದಾಳಿಗೊಳಗಾದ ಮಹಿಳೆ ಸಾವನ್ನಪ್ಪಿದ್ದಾರೆ.
ಆನೆಯು ಜೂಲಿಯಾನಾ ಗ್ಲೆ ಟೂರ್ನೊ (64) ಅವರನ್ನು ವಾಹನದಿಂದ ಹೊರಗೆಳೆದು ತುಳಿದಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಲಿವಿಂಗ್‌ಸ್ಟೋನ್ ನ ಮರಾಂಬ ಸಾಂಸ್ಕೃತಿಕ ಸೇತುವೆ ಬಳಿ ಆನೆ ಹಿಂಡಿನ ಕಾರಣದಿಂದ ಸಫಾರಿ ಗುಂಪು ವಾಹನ ನಿಲ್ಲಿಸಿದಾಗ ಘಟನೆ ಸಂಭವಿಸಿದೆ.
ಗಾಯಗೊಂಡ ಮೋಸಿ-ಓ-ತುನ್ಯಾ ರಾಷ್ಟ್ರೀಯ ಉದ್ಯಾನವನದ ಕ್ಲಿನಿಕ್ ಗೆ ಕರೆದೊಯ್ಯಲಾಯಿತು. ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಪೊಲೀಸ್ ಹೇಳಿಕೆಯ ಪ್ರಕಾರ, ಆಕೆಯ ಬಲ ಭುಜ ಮತ್ತು ಹಣೆಯ ಮೇಲೆ ಆಳವಾದ ಗಾಯಗಳಾಗಿದೆ, ಎಡ ಪಾದ ಮುರಿತವಾಗಿದೆ.
ಉಗ್ರಗೊಂಡ ಆನೆಯ ದಾಳಿಯಿಂದ ಬೇರೆ ಯಾವುದೇ ಪ್ರವಾಸಿಗರು ಗಾಯಗೊಂಡಿದ್ದಾರೆಯೇ ಎನ್ನುವ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಈ ದುರಂತ ಘಟನೆಯು ಈ ವರ್ಷ ಜಾಂಬಿಯಾದಲ್ಲಿ ಯುಎಸ್ ಪ್ರವಾಸಿಗರ ಮೇಲೆ ಎರಡನೇ ಮಾರಣಾಂತಿಕ ಆನೆ ದಾಳಿಯಾಗಿದೆ. ಮಾರ್ಚ್ ನಲ್ಲಿ ಮಿನ್ನೇಸೋಟದ ಗೇಲ್ ಮ್ಯಾಟ್ಸನ್ ಎಂಬ 79 ವರ್ಷದ ಮಹಿಳೆ ಜಾಂಬಿಯಾದ ಕಾಫ್ಯೂ ನ್ಯಾಷನಲ್ ಪಾರ್ಕ್‌ನಲ್ಲಿ ಗೇಮ್ ಡ್ರೈವ್ ನಲ್ಲಿ ಇದೇ ರೀತಿಯ ಘಟನೆಯಲ್ಲಿ ಸಾವನ್ನಪ್ಪಿದ್ದರು. ಆನೆಯೊಂದು ದಾಳಿ ಮಾಡಿ ಟ್ರಕನ್ನು ಉರುಳಿಸಿತ್ತು.