Advertisement

ಪ್ರವಾಸಿಗರೇ ಎಚ್ಚರ : ಚಿಕ್ಕಮಗಳೂರಿನ ಎತ್ತಿನಭುಜ ಪ್ರವಾಸಿ ತಾಣದಲ್ಲಿವೆ ಕಾಡಾನೆ ಹಿಂಡು

04:55 PM Oct 28, 2021 | Team Udayavani |

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ. ಏಕೆಂದರೆ, ಈ ಭಾಗದಲ್ಲಿ ಆಗಾಗ್ಗೆ ಕಾಡಾನೆಗಳು ಹಿಂಡು ಗೋಚರವಾಗುತ್ತಿರೋದು ಸ್ಥಳಿಯರು ಹಾಗೂ ಕೆಲ ಪ್ರವಾಸಿಗರಲ್ಲಿ ಆತಂಕ ತಂದಿದೆ.

Advertisement

ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮ ವಾರ್ಷಿಕ ದಾಖಲೆ ಮಳೆ ಬೀಳೋ ಪ್ರದೇಶ. ಇಲ್ಲಿ ವಾರ್ಷಿಕ 200-300 ಇಂಚು ಮಳೆ ಸುರಿಯುತ್ತೆ. ದಟ್ಟ ಕಾನನ. ಇಲ್ಲಿನ ದಟ್ಟ ಶೋಲಾ ಕಾಡುಗಳು ವರ್ಷಪೂರ್ತಿ ನೀರನ್ನ ಹಿಡಿದಿಟ್ಟು ಹರಿಸುವುದರಿಂದ ಇಲ್ಲಿನ ಕಾಡು ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತೆ. ಹಾಗಾಗಿ, ಈ ಭಾಗದಲ್ಲಿ ಸದಾ ಕಾಡುಪ್ರಾಣಿಗಳು ಯತೇಚ್ಛವಾಗಿರುತ್ತವೆ.

ಇದೀಗ, ಈ ಬೈರಾಪುರ ಗ್ರಾಮದ ಸುತ್ತಮುತ್ತ ಕಾಡಾನೆಗಳು ಹಿಂಡು ಸ್ಥಳಿಯರಲ್ಲಿ ಭಯ ತರಿಸಿದೆ. ಎತ್ತಿನಭುಜಕ್ಕೆ ಭೇಟಿ ನೀಡಿದ್ದ ಪ್ರವಾಸಿಗರಿಗೆ ಕಾಡಾನೆಗಳು ದರ್ಶನ ನೀಡಿವೆ. ಹಾಗಾಗಿ, ಸ್ಥಳೀಯರು ಈ ಭಾಗಕ್ಕೆ ಬರುವ ಪ್ರವಾಸಿಗರು ಎಚ್ಚರದಿಂದಿರಬೇಕು ಎಂದು ಮನವಿ ಮಾಡಿದ್ದಾರೆ. ಇನ್ನೂ ಮೂಡಿಗೆರೆ ತಾಲೂಕಿನ, ಬೈರಾಪುರ, ಸಾರಾಗೋಡು, ಕುಂದೂರು, ಗೌಡಹಳ್ಳಿ, ಕೋಗಿಲೆ, ಮೂಲರಹಳ್ಳಿ, ಗುತ್ತಿ, ಬೈರಾಪುರ, ಊರಬಗೆ ಸೇರಿದಂತೆ ಹತ್ತಾರು ಹಳ್ಳಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದೆ. ಪ್ರತಿ ವರ್ಷ ಲಕ್ಷಾಂತರ ಮೌಲ್ಯದ ಬೆಳೆ ಕಾಡಾನೆ ಪಾಲಾಗುತ್ತಿದೆ.

ಹಾಗಾಗಿ, ಈ ಭಾಗದ ಜನ, ಕಾಡಾನೆಗಳನ್ನ ಸ್ಥಳಾಂತರಿಸಿ, ಇಲ್ಲ ನಮಗೆ ಪರ್ಯಾಯ ಭೂಮಿ ನೀಡಿ, ನಾವೇ ಬೇರೆಡೆ ಹೋಗಿ ಬದುಕು ಕಟ್ಟಿಕೊಳ್ಳುತ್ತೇವೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಅತ್ತ ಆನೆ ಸಮಸ್ಯೆಯನ್ನೂ ನೀಗಿಸುತ್ತಿಲ್ಲ. ಇತ್ತ ಪರ್ಯಾಯ ಭೂಮಿ ಬಗ್ಗೆಯೂ ಯೋಚಿಸಿಲ್ಲ. ಜನ ಅನಿವಾರ್ಯವಾಗಿ ಆನೆ ಭಯದಲ್ಲೇ ಬದಕುತ್ತಿದ್ದಾರೆ.

ಎರಡ್ಮೂರು ದಿನ ಹೊಲ-ಗದ್ದೆ, ತೋಟಗಳಲ್ಲಿ ಬೀಡು ಬಿಡೋ ಕಾಡಾನೆಗಳ ಹಿಂಡು ದಾಂದಲೆ ನಡೆಸುತ್ತಿದ್ದು, ಅರ್ಧ ಬೆಳೆ ಮಳೆಯಿಂದ ನಾಶವಾದರೆ, ಇನ್ನರ್ಧ ಕಾಡಾನೆಯಿಂದ ನಾಶವಾಗುವಂತಹಾ ಸ್ಥಿತಿ ಮಲೆನಾಡಲ್ಲಿದೆ. ಹಾಗಾಗಿ, ಜನ ಒಂದೋ ಕಾಡಾನೆ ಸ್ಥಳಾಂತರಿಸಿ ಇಲ್ಲ, ನಮ್ಮನ್ನೇ ಸ್ಥಳಾಂತರಿಸಿ ಎಂದು ಬೇಡಿಕೊಳ್ತಿದ್ದಾರೆ. ಸಾಲದಕ್ಕೆ ಈಗಾಗಲೇ ಕಳೆದ ಮೂರ್ನಾಲ್ಕು ವರ್ಷದಲ್ಲಿ ನಾಲ್ಕೈದು ಜನ ಕಾಡಾನೆ ದಾಳಿಯಿಂದ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಇಷ್ಟು ದಿನ ಹೊಲಗದ್ದೆ, ತೋಟಗಳಲ್ಲಿದ್ದ ಆನೆಗಳು ಈಗೀಗ ನಾಡಿಗೂ ಬರುತ್ತಿರುವುದರಿಂದ ಹಳ್ಳಿಗರು ಭಯಗೊಂಡಿದ್ದಾರೆ. ಕಾಡಾನೆ ಹಾವಳಿ ನಿಂತಿಲ್ಲ. ಸರ್ಕಾರದಿಂದ ಸಮಪರ್ಕಕ ಪರಿಹಾರವೂ ಬರುತ್ತಿಲ್ಲ. ಇದು ಹೀಗೆ ಮುಂದುವರೆದರೆ ನಾವು ಬದುಕುವುದಾದರೂ ಹೇಗೆಂದು ಹಳ್ಳಿಗರು ಪ್ರಶ್ನಿಸಿದ್ದಾರೆ. ಈ ಮಧ್ಯೆ ಹಳ್ಳಿಗರಿಗೆ ಕಾಡುಪ್ರಾಣಿಗಳ ಚಲನ-ವಲನದ ಬಗ್ಗೆ ಗೊತ್ತಿರುತ್ತೆ. ಅವರು ಎಚ್ಚರದಿಂದ ಇರುತ್ತಾರೆ. ಈಗೀಗ, ಪ್ರವಾಸಿ ತಾಣಗಳಲ್ಲೂ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಹಾಗಾಗಿ, ಪ್ರವಾಸಿಗರು ಎಚ್ಚರದಿಂದ ಇರಬೇಕೆಂದು ಸ್ಥಳಿಯರು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next