ಮೊರಿಗಾಂವ್( ಅಸ್ಸಾಂ): ಜಿಲ್ಲೆಯ ಜಾಗಿರೋಡ್ ರೈಲು ನಿಲ್ದಾಣದ ಬಳಿ ಬುಧವಾರ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ವಯಸ್ಕ ಗಂಡು ಕಾಡಾನೆ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದೆ. ಆನೆಯ ಕೊನೆಯ ಕ್ಷಣದ ಹೃದಯವಿದ್ರಾವಕ ದೃಶ್ಯಗಳನ್ನು ರೈಲಿನ ಪ್ರಯಾಣಿಕರೊಬ್ಬರು ಸೆರೆ ಹಿಡಿದಿದ್ದು, ವೈರಲ್ ಆಗಿದ್ದು ಪ್ರಾಣಿ ಪ್ರಿಯರು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ಹಿಂಡಿನಿಂದ ಬೇರ್ಪಟ್ಟ ಆನೆಗಳೆರಡು ಹಳಿ ದಾಟುತ್ತಿದ್ದಾಗ ಸಿಲ್ಚಾರ್ ಕಡೆಗೆ ಹೊರಟಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ತೆಗೇರಿಯಾದಲ್ಲಿ ಒಂದು ಆನೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಆನೆ ಹಳಿ ದಾಟುವಲ್ಲಿ ಯಶಸ್ವಿಯಾಯಿತು.
ರೈಲ್ವೆ ಸಿಬಂದಿ ಮತ್ತು ಸ್ಥಳೀಯರು ಮೃತದೇಹವನ್ನು ಹಳಿಗಳಿಂದ ತೆಗೆದ ಬಳಿಕ ರೈಲು ಸಂಚಾರ ಪುನರಾರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಅಪ್ಪಳಿಸಿದ ಪರಿಣಾಮ ಆನೆಯ ಕಾಲುಗಳೇ ಮುರಿದುಹೋಗಿದ್ದು, ಕೆಲ ಹೊತ್ತು ಪರದಾಡಿ ಇನ್ನೊಂದು ಹಳಿ ದಾಟಲೂ ಸಾಧ್ಯವಾಗದೆ ಕುಸಿದು ಅಂಗಾತ ಮಲಗಿ ಪ್ರಾಣ ಬಿಟ್ಟಿದೆ.
ಹೃದಯವಿದ್ರಾವಕ ಎಂದ ಕ್ರಿಕೆಟಿಗ
ಕ್ರಿಕೆಟಿಗ ಲೆಗ್ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರು ಆನೆಯ ಕೊನೆ ಗಳಿಗೆಯ ವಿಡಿಯೋ ಪೋಸ್ಟ್ ಮಾಡಿದ್ದು ‘ಇದು ಹೃದಯವಿದ್ರಾವಕ. ಅಧಿಕಾರದಲ್ಲಿರುವ ಯಾರಾದರೂ ದಯವಿಟ್ಟು ಇಂತಹ ಸಾವುಗಳಿಗೆ ಸಂಬಂಧಿಸಿದಂತೆ ಯಾವುದಾದರು ಪರಿಹಾರವನ್ನು ನೀಡಬಹುದೇ !! ಅಥವಾ ಈ ಸಮಸ್ಯೆಯನ್ನು ಪರಿಹರಿಸುವುದು ಅಸಾಧ್ಯವೇ..?? ಈ ವಿಷಯದ ಬಗ್ಗೆ ಯಾರಾದರೂ ನನಗೆ ತಿಳುವಳಿಕೆ ನೀಡಬಹುದೇ!!” ಎಂದು ಪ್ರಶ್ನಿಸುವ ಮೂಲಕ ನೋವು ಹೊರ ಹಾಕಿದ್ದಾರೆ.