Advertisement

ಸುವರ್ಣಗಡ್ಡೆಯಿಂದ ಬಾಳು ಬಂಗಾರ

06:50 AM May 20, 2018 | |

ಕುಂದಾಪುರ: ತಾಲೂಕಿನ ಪ್ರಗತಿಪರ ರೈತ ಹಾಲಾಡಿ ಸಮೀಪದ ಗೊರಾಜೆ ನಿವಾಸಿ ಶಂಕರ ಪ್ರಭು ಈ ಭಾಗದಲ್ಲಿ ತೀರಾ ಅಪರೂಪವೆನಿಸಿದ ಸುವರ್ಣಗಡ್ಡೆ ಬೆಳೆಯುವ ಮೂಲಕ ಕೃಷಿ ಕ್ಷೇತ್ರದಲ್ಲಿ ಸೆ„  ಎನಿಸಿಕೊಂಡಿದ್ದಾರೆ. 
ಅಂದಾಜು 20 ಸೆಂಟ್ಸ್‌ ಜಾಗದಲ್ಲಿ ಸುವರ್ಣಗಡ್ಡೆ ಕೃಷಿ ಮಾಡಿದ್ದಾರೆ. ಜೂನ್‌ ತಿಂಗಳಲ್ಲಿ ನಾಟಿ ಮಾಡಿದ್ದು ಈಗ ಫಸಲು ನೀಡಿದೆ. ವಾರ್ಷಿಕ 5 ಕ್ವಿಂಟಾಲ್‌ ಸುವರ್ಣಗಡ್ಡೆ ಪಡೆಯುತ್ತಿದ್ದು ಸ್ಥಳೀಯ  ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. 
 
ಅಧ್ಯಯನ ಪ್ರವಾಸದಿಂದ ಪ್ರೇರಣೆ
ಪ್ರಯೋಗಶೀಲರಾದ 54ರ ಹರೆಯದ ಶಂಕರ ಪ್ರಭು ತನ್ನ ಪಾಲಿಗೆ ಬಂದ 1.5 ಎಕ್ರೆ ಜಾಗದಲ್ಲಿ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ. 2 ವರ್ಷದ ಹಿಂದೆ  ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ ಅಧ್ಯಯನ ಪ್ರವಾಸದ  ಮೂಲಕ ಶಿವಮೊಗ್ಗಕ್ಕೆ ತೆರಳಿದ್ದ ಪ್ರಭು ಸುವರ್ಣಗಡ್ಡೆ ಕೃಷಿ ತೋಟ ನೋಡಿ ಆಸಕ್ತರಾಗಿದ್ದರು. ಅಲ್ಲಿಂದ ಹಿಂದಿರುವಾಗ ಸುವರ್ಣಗಡ್ಡೆ ತಂದು ನೆಟ್ಟರು. 

Advertisement

5 ತಿಂಗಳಲ್ಲಿ ಗಿಡ ಕಿತ್ತಾಗ 5 ಕೆಜಿ. ತೂಕದ ಸುವರ್ಣಗಡ್ಡೆ  ಸಿಕ್ಕಿತ್ತು. ಇದರಿಂದ ಪ್ರೇರಿತರಾಗಿ 2 ವರ್ಷಗಳಿಂದ ಸುವರ್ಣಗಡ್ಡೆ ಬೆಳೆದು ಯಶಸ್ವಿಯಾಗಿದ್ದಾರೆ.  ಮರಸಣ ಗಡ್ಡೆ, ಗೆಣಸು, ಮರಗೆಣಸು  ಈ ಭಾಗದಲ್ಲಿ ಹೆಚ್ಚು ಬೆಳೆಯುತ್ತಿದ್ದು, ಸುವರ್ಣಗಡ್ಡೆ ತೀರಾ ಅಪರೂಪ. ವಿರಳವಾದರೂ ಈ ಬೆಳೆಯಲ್ಲಿಯೂ  ಯಶಸ್ಸು ಕಂಡ  ಶಂಕರ 
ಪ್ರಭು ಇತರ ರೈತರಿಗೂ ಪ್ರೇರಣೆಯಾಗಿದ್ದಾರೆ. 
 
ಸಾವಯವ ಗೊಬ್ಬರ ಬಳಕೆ
ಕೃಷಿಗೆ ಸಾವಯವಗೊಬ್ಬರ ಬಳಕೆ ಮಾಡುತ್ತಾರೆ. ಹಟ್ಟಿಗೊಬ್ಬರ, ಎರೆಹುಳ ಗೊಬ್ಬರವನ್ನೇ ಬಳಸುತ್ತಾರೆ. 12 ಅಡಿ ಉದ್ದ 3 ಅಡಿ ಅಗಲದ ವಿನೂತನ ಮಾದರಿಯ ಎರೆಹುಳ ತೊಟ್ಟಿ ನಿರ್ಮಿಸಿ ತರಗೆಲೆ, ಸಗಣಿ ಮಿಶ್ರಿತ ಸಾವಯವ ಗೊಬ್ಬರ ಪಡೆಯುತ್ತಾರೆ. ಎಲ್ಲ ಸದಸ್ಯರು ಕೃಷಿಯಲ್ಲಿ ನಿರತರಾಗಿದ್ದಾರೆ.  

ಬಹುವಿಧ ಕೃಷಿ ಸಾಧಕ
ಗ್ರಾಮಾಭಿವೃದ್ಧಿ  ಯೋಜನೆಯ ವಿಷ್ಣುಮೂರ್ತಿ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರಾಗಿರುವ ಶಂಕರ ಪ್ರಭು ಅವರು  ವಾರದ ಶ್ರಮ ವಿನಿಮಯದ  ಮೂಲಕ ಕೃಷಿ ಕೆಲಸ ನಿರ್ವಹಿಸುತ್ತಿದ್ದಾರೆ. ಗದ್ದೆಯ ಒಂದು ಭಾಗದಲ್ಲಿ 
ಮುಂಗಾರು ಕೃಷಿ ಬಳಿಕ ತರಕಾರಿ ಬೆಳೆಯುವ ಇವರು, ಅಡಿಕೆ, ತೆಂಗು ಅದ್ಭುತವಾಗಿ ಬೆಳೆದಿದ್ದಾರೆ. ಸುವರ್ಣಗಡ್ಡೆಯೊಂದಿಗೆ ಊರ ತಳಿಯ ವೀಳ್ಯದೆಲೆ, ವಿಶೇಷ ಜಾತಿಯ ಬೆಂಡೆ, ಶುಂಠಿ ಅರಸಿನ, ಅಲಸಂಡೆ, ಬಸಳೆ, ಪಪ್ಪಾಯಿ ಬಾಳೆ ಮೊದಲಾದ ಹಲವು ವಿಧದ ಬೆಳೆಗಳನ್ನು ಬೆಳೆದಿದ್ದಾರೆ. 

ಬಹು ವಿಧ ಕೃಷಿ
ಭತ್ತ ಪ್ರಮುಖ  ಬೆಳೆಯಾಗಿದ್ದರೂ ಬಹುವಿಧ ಕೃಷಿ ಮಾಡುತ್ತಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿ ಮಾಹಿತಿ ಪಡೆದು ಅದನ್ನು ಸದುಪಯೋಗ ಮಾಡುತ್ತಿದ್ದಾರೆ. 
– ಚೇತನ್‌ಕುಮಾರ್‌, ಯೋಜನೆಯ ಕೃಷಿ ಅಧಿಕಾರಿ  

ಮಾಹಿತಿಯಿಂದ ಸಾಧನೆ
ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲ ಕಾರ್ಯಕ್ರಮ ಗಳಲ್ಲಿ ಆಸಕ್ತಿಯಿಂದ  ಭಾಗ ವಹಿಸಿ ಮಾಹಿತಿ ಪಡೆ ದಿರುವುದರಿಂದ ಕೃಷಿಯಲ್ಲಿ ಈ ಸಾಧನೆ ಮಾಡಲು ಸಾಧ್ಯವಾಯಿತು. 
– ಶಂಕರ ಪ್ರಭು ,ಕೃಷಿಕ

Advertisement

– ಲಕ್ಷ್ಮೀ ಮಚ್ಚಿನ 

Advertisement

Udayavani is now on Telegram. Click here to join our channel and stay updated with the latest news.

Next