ಕೊಚ್ಚಿ: ಕಾಡಾನೆ ದಾಳಿಗೆ ಆಟೋ ರಿಕ್ಷಾ ಚಾಲಕನೊಬ್ಬ ಬಲಿಯಾಗಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಪ್ರವಾಸಿ ಪಟ್ಟಣ ಮುನ್ನಾರ್ ನಲ್ಲಿ ಸೋಮವಾರ(ಫೆ.26 ರಂದು) ರಾತ್ರಿ ನಡೆದಿರುವುದು ವರದಿಯಾಗಿದೆ. ತಿಂಗಳೊಳಗೆ ಕಾಡಾನೆ ದಾಳಿಗೆ ಬಲಿಯಾದ ಮೂರನೇ ಘಟನೆ ಇದಾಗಿದೆ.
ಕನ್ನಿಮಾಲಾ ಎಸ್ಟೇಟ್‌ನಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಆಟೋರಿಕ್ಷಾ ಚಾಲಕ ಸುರೇಶ್ ಕುಮಾರ್ (44) ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಘಟನೆ ನಡೆದ ಸಂದರ್ಭದಲ್ಲಿ ಸುರೇಶ್ ಅವರು ತನ್ನ ಆಟೋದಲ್ಲಿ ನಾಲ್ವರನ್ನು ಕೂರಿಸಿಕೊಂಡು ಬಾಡಿಗೆಯೊಂದನ್ನು ಮಾಡುತ್ತಿದ್ದರು. ಒಬ್ಬ ಮಹಿಳೆ ಮತ್ತು ಆಕೆಯ ಮಗಳು ಮತ್ತು ಇಬ್ಬರು ಕಾರ್ಮಿಕರು ಆಟೋದಲ್ಲಿ ಇದ್ದರು.
ಆಟೋ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯಲ್ಲೇ ನಿಂತಿದ್ದ ಆನೆ ಆಟೋ ರಿಕ್ಷಾವನ್ನು ಉರುಳಿಸಿ ಜನರನ್ನು ಅದರ ಕೆಳಗೆ ಸಿಲುಕಿಸಿದೆ. ಈ ಕ್ಷಣದಲ್ಲಿ ನಾಲ್ವರು ಸ್ವಲ್ಪದರಲ್ಲೇ ಪಾರಾಗಿದ್ದು, ಚಾಲಕ ಕುಮಾರ್ ಮೇಲೆ ಕಾಡಾನೆ ದಾಳಿ ಮಾಡಿದೆ. ಆನೆಯು ತನ್ನ ಸೊಂಡಿಲಿನಿಂದ ಕುಮಾರ್ ಅವರನ್ನು ಎತ್ತಿ ಕನಿಷ್ಠ ಮೂರು ಬಾರಿ ಎಸೆದಿದೆ ಎಂದು ಬದುಕುಳಿದ ಮಹಿಳೆ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ದಾಳಿಯಲ್ಲಿ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೇರಳದಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷದ ಪ್ರಕರಣಗಳನ್ನು ಕೊನೆಗೊಳಿಸುವಂತೆ ಎಲ್‌ಡಿಎಫ್ ಮುಷ್ಕರಕ್ಕೆ ಕರೆ ನೀಡಿದೆ.
ಫೆಬ್ರವರಿ 10 ರಂದು ವಯನಾಡ್‌ನಲ್ಲಿ ಮನೆಯ ಆವರಣಕ್ಕೆ ನುಗ್ಗಿದ ಕಾಡಾನೆ 42 ವರ್ಷದ ವ್ಯಕ್ತಿಯ ಮೇಲೆ ದಾಳಿ ಮಾಡಿತ್ತು. ಪರಿಣಾಮ ಆ ವ್ಯಕ್ತಿ ಬಲಿಯಾಗಿದ್ದರು. ಇದಾದ ಬಳಿಕ ಆರು ದಿನದ ನಂತರ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಕ ವಿ.ಪಾಲ್ ಚೆರಿಯಮಲ ಅರಣ್ಯದಲ್ಲಿ ಆನೆಯಿಂದ ದಾಳಿಗೊಳಗಾಗಿ ಮೃತಪಟ್ಟಿದ್ದರು.