Advertisement

ಗರ್ಭಿಣಿ ಸಹಿತ ಎರಡು ಹೆಣ್ಣಾನೆ ಸಾವು

09:53 AM Nov 27, 2018 | Team Udayavani |

ತರೀಕೆರೆ/ಮಡಿಕೇರಿ: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಮತ್ತು ತರೀಕೆರೆ ತಾಲೂಕಿನ ಲಕ್ಕವಳ್ಳಿ
ಸಮೀಪ ಎರಡು ಕಾಡಾನೆಗಳು ಮೃತಪಟ್ಟಿವೆ.

Advertisement

ಮಾವಿನಹಳ್ಳದ ಭದ್ರಾ ಹಿನ್ನೀರಿನಲ್ಲಿ ಗರ್ಭ ಧರಿಸಿದ್ದ ಆನೆಯೊಂದರ ಮೃತದೇಹ ರವಿವಾರ ಪತ್ತೆಯಾಗಿದೆ. ಸೋಮವಾರ ಆನೆಯ ಶವ ಪರೀಕ್ಷೆ ನಡೆಸಿ ಅನಂತರ ಹೂಳಲಾಗಿದೆ. ರವಿವಾರ ಅರಣ್ಯ ಇಲಾಖೆ ಸಿಬಂದಿ ಗಸ್ತು ತಿರುಗುತ್ತಿದ್ದಾಗ ಭದ್ರಾ ಹಿನ್ನೀರಿನಲ್ಲಿ ಆನೆಯ ಶವ ತೇಲುತ್ತಿರುವುದು ಗೋಚರಿಸಿತ್ತು. ತತ್‌ಕ್ಷಣ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಸಿಬಂದಿ ಸ್ಥಳಕ್ಕೆ ತೆರಳಿ ಆನೆಯ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಅನಂತರ ಶವ ಪರೀಕ್ಷೆ ನಡೆಸಿದರು. ಈ ವೇಳೆ ಮೃತ ಆನೆ ಗರ್ಭಿಣಿಯಾಗಿದ್ದು, ಹೊಟ್ಟೆಯೊಳಗೆ 16ರಿಂದ 18 ತಿಂಗಳಿನ ಮರಿ ಇರುವುದು ಕಂಡುಬಂದಿದೆ. ಆನೆ ಸೋಂಕಿಗೆ ಒಳಗಾಗಿ ಮೃತಪಟ್ಟಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. 

ವೀರಾಜಪೇಟೆ: ಕಾಡಾನೆ ಸಾವು
ಮಡಿಕೇರಿ: ವೀರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾ. ಪಂ. ವ್ಯಾಪ್ತಿಯ ಬಾರಿಕಾಡಿನ ತೋಟದ ಬಳಿ ಹೆಣ್ಣಾನೆ ಸಾವನ್ನಪ್ಪಿದೆ. ಸೋಮವಾರ ಬೆಳಗ್ಗೆ 8.30ರ ಸಮಯದಲ್ಲಿ ಗ್ರಾಮಸ್ಥರು ಕೆಲಸಕ್ಕೆ ತೆರಳುವ ಸಂದರ್ಭ ಅದೇ ಗ್ರಾಮದ ತಾ.ಪಂ. ಸದಸ್ಯ ಮಾಳೇಟಿರ ಪ್ರಶಾಂತ್‌ ಉತ್ತಪ್ಪ ಅವರ ತೋಟದ ಬದಿಯಲ್ಲಿ ಆನೆಯೊಂದು ನರಳುತ್ತಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಮೃತ ಕಾಡಾನೆಗೆ ಸುಮಾರು 60 ವರ್ಷವಾಗಿರಬಹುದೆಂದು ಅಂದಾಜಿಸಲಾಗಿದೆ. ಆಹಾರ ಜೀರ್ಣವಾಗದೆ ಹೊಟ್ಟೆ ಊದಿಕೊಂಡಿದ್ದು, ಅಪರಾಹ್ನ ಒಂದುಗಂಟೆ ಸುಮಾರಿಗೆ ಆನೆ ಮೃತಪಟ್ಟಿದೆ. ವಲಯ ಅರಣ್ಯಧಿಕಾರಿ ಕೆ.ಪಿ. ಗೋಪಾಲ್‌, ವೃತ್ತ ನಿರೀಕ್ಷಕ ಎನ್‌. ಕುಮಾರ್‌ ಆರಾಧ್ಯ, ಠಾಣಾಧಿಕಾರಿ ಸುರೇಶ್‌ ಬೋಪಣ್ಣ ಹಾಗೂ ಇತರರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next