ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸುತ್ತ ತೋಟಕ್ಕೆ ನುಗ್ಗಿದ ಆನೆಗಳ ಹಿಂಡೊಂದರ ಆನೆಮರಿ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದಲ್ಲಿ ಶುಕ್ರವಾರ ಬೆಳಿಗ್ಗೆ ಕಂಡುಬಂದಿದೆ.
ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ಸಂಪೂರ್ಣ ನಾಶ ಮಾಡಿದೆ.
ತೋಟದಿಂದ ಕಾಡಿಗೆ ಹೋಗುವ ಸಮಯದಲ್ಲಿ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಉಳಿದಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ತೋಟದ ಮಾಲಕರು ಹೋದಾಗ ವಿಷಯ ತಿಳಿದು ಬಂದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸುದ್ದಿ ತಿಳಿದು ಅದನ್ನು ನೋಡಲು ಜನ ಸೇರುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ತ್ಯಾಗರಾಜ್ ಮತ್ತು ಸಿಬಂದಿಗಳು ಧಾವಿಸಿದ್ದಾರೆ.
2 ತಿಂಗಳ ಆನೆ ಮರಿಯಾಗಿದ್ದು, ಆನೆಗಳ ಹಿಂಡು ಬಂದು ಮತ್ತೆ ಕರೆದೊಯ್ಯುವ ಸಾಧ್ಯತೆ ಇರುವುದರಿಂದ ಸ್ಥಳಕ್ಕೆ ಯಾರನ್ನೂ ತೆರಳದಂತೆ ಅರಣ್ಯ ಇಲಾಖೆ ಸೂಚಿಸಿದೆ.
ಮರಿಯನ್ನು ಹಿಡಿಯುವುದರಿಂದ ಬದುಕುಳಿಯದೆ ಇರುವ ಸಾಧ್ಯತೆ ಇದೆ ಎಂದು ಉಪವಲಯ ಅರಣ್ಯಧಿಕಾರಿ ತ್ಯಾಗರಾಜ್ ತಿಳಿಸಿದ್ದಾರೆ. ಹೀಗಾಗಿ ಆನೆ ಮರಿಯನ್ನು ಕಾಡಿಗೆ ಮತ್ತೆ ಬಿಡುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಚಿಂತಿಸಿದ್ದಾರೆ.