Advertisement

ಭತ್ತದ ಗದ್ದೆಗೆ ಗಜಪಡೆ ! ಆನೆ ನಡೆದ ದಾರಿ ಸಂರಕ್ಷಿಸಲು ಅರಣ್ಯ ಇಲಾಖೆ ಜಾಗೃತಿ

04:48 PM Oct 04, 2020 | sudhir |

ಶಿರಸಿ: ಆನೆ ನಡೆದ ದಾರಿ ಸಂರಕ್ಷಿಸಲು ಅರಣ್ಯ ಇಲಾಖೆ ವನ್ಯಜೀವಿ ಸಪ್ತಾಹದ ಭಾಗವಾಗಿ ಜಾಗೃತಿ ಹೆಜ್ಜೆ ಇಟ್ಟಿದೆ. ಉತ್ತರ ಕನ್ನಡದ ಆನೆಗಳು ಇನ್ನೇನು ಭತ್ತದ ಪೈರು ಬರುವ ವೇಳೆಗೆ ಹಾಲು ಭತ್ತ ತಿನ್ನಲು ಗದ್ದೆಗೆ ದಾಂಗುಡಿ ಇಡುತ್ತವೆ. ಆಹಾರದ ಕೊರತೆ ಕಾಡಿನಲ್ಲಿ ಆದಾಗ ತೋಟಗಳಿಗೂ ನುಗ್ಗಿ ಹಾನಿ ಮಾಡುತ್ತವೆ. ಕಳೆದ ವರ್ಷವಂತೂ ಶಿರಸಿ, ಸಿದ್ದಾಪುರ ವಲಯದಲ್ಲೂ ದಾಂಧಲೆ ನಡೆಸಿತ್ತು. ಮುಂಡಗೋಡ, ಯಲ್ಲಾಪುರ, ಜೋಯಿಡಾ, ಹಳಿಯಾಳ, ಬನವಾಸಿ ಭಾಗದಲ್ಲಿ ಆನೆ ದಾಳಿ ಸಾಮಾನ್ಯ.

Advertisement

ಆನೆಗಳ ಹಿಂಡು ಸಂಚರಿಸುವ ಸ್ಥಳಕ್ಕೆ ಕಾರಿಡಾರ್‌ ಎನ್ನುತ್ತಾರೆ. ಈ ಕಾರಿಡಾರ್‌ ಉಳಿಸಲು ಈ ಬಾರಿ ಅರಣ್ಯ ಇಲಾಖೆ ವನ್ಯಜೀವಿ ಸಪ್ತಾಹದ ಭಾಗವಾಗಿ ಸಂರಕ್ಷಣಾ ಅಭಿಯಾನ ನಡೆಸಿದೆ. 18ನೇ ಶತಮಾನದಲ್ಲಿ ಮೈಸೂರು ಅರಣ್ಯ ಭಾಗದಿಂದ ಪ್ರತಿವರ್ಷ ದಾಂಡೇಲಿ ಅರಣ್ಯ ಭಾಗಕ್ಕೆ ಸೊರಬ, ಬನವಾಸಿ, ಮುಂಡಗೋಡ, ಯಲ್ಲಾಪುರ, ಭಗವತಿ ಮಾರ್ಗವಾಗಿ ಆನೆಗಳ ಹಿಂಡು ಮಳೆಗಾಲದ ಬಳಿಕ ಬರುತ್ತಿದ್ದವು. ದಾಂಡೇಲಿ ಕಾಡು ಅವರ ಪಾಲಿನ ರೆಸಾರ್ಟ್‌ ಆಗಿದ್ದವು. ಆನೆಗಳ ಮೊಮ್ಮಕ್ಕಳಿಗೂ ಅವರು ನಡೆದು ಬಂದ ದಾರಿ ನೆನಪು ಇರುತ್ತವಂತೆ!

ಇದನ್ನೂ ಓದಿ :ರಾಮಮಂದಿರಕ್ಕೆ ಅರ್ಪಿಸಲಿರುವ ಬೆಳ್ಳಿ ಇಟ್ಟಿಗೆ ಅ.6ರಂದು ದಾವಣಗೆರೆಗೆ ಆಗಮನ

ಕಟ್ಟಾಯ್ತು ಕಾರಿಡಾರ್‌!: ಸ್ವಾತಂತ್ರ್ಯ ನಂತರವಂತೂ ಆನೆ ಕಾರಿಡಾರ್‌ ಕಟ್ಟಾಯಿತು. ನದಿಗಳಿಗೆ ಅನೇಕಟ್ಟುಗಳು ಬಂದವು. ರಸ್ತೆಗಳು ಆದವು. ನಗರಗಳು ಬೆಳೆದವು. ಆನೆ ಓಡಾಡುತ್ತಿದ್ದ ಮಾರ್ಗದಲ್ಲಿ ಮನುಷ್ಯನ ಓಡಾಟ, ಮೋಟಾರು ಸದ್ದುಗಳು ಗುಂಯ್‌ ಗುಟ್ಟವು. ಆನೆಯ ಇಷ್ಟದ ತಗ್ಗಿನ ಜಾಗಗಳು ಕೃಷಿ ಭೂಮಿಗಳಾದವು. ಇದರ ಪರಿಣಾಮ ಆನೆಗಳು ಸಂಚಾರ ಮಾಡಿದರೆ ಜನ ಓಡಿಸಲು ಆರಂಭಿಸಿದರು. ಎಲ್ಲಿ ಓಡಿದರೂ, ಅಡ್ಡಾಡಿದರೂ ಜಾಗಟೆ, ಪಟಾಕ್ಷಿ ಹೊಡೆದು ಬೆದರಿಸಿದರು. ಗಜಗಳು ನಡೆದಾಡುತ್ತಿದ್ದ ಸ್ವತ್ಛಂದ ದಾರಿ ಕಟ್ಟಾಗಿ ಹೋಯಿತು.

ಕುಲ ಸಂಜಾತರ ಬಯಕೆ? ದಾಂಡೇಲಿ ಕಾಡಿನ ಆನೆಗಳ ದಾಳಿ ಹೆಚ್ಚಾದಾಗ, ಭತ್ತದ ಗದ್ದೆಗೆ ಬಂದು ನುಗ್ಗಿದಾಗ, ಅಡಕೆ ತೋಟ ಧ್ವಂಸ ಮಾಡಿದಾಗ ಯಾಕೆ ಹೀಗೆ ಮಾಡುತ್ತಿವೆ ಎಂಬ ಪ್ರಶ್ನೆ ಎದ್ದಿತು. ಆಗ ದಿ| ಪಿ.ಡಿ. ಸುದರ್ಶನ್‌ ಎರಡು ನೂರು ವರ್ಷ ಕಳೆದರೂ ಆನೆಗಳಿಗೆ ತಮ್ಮ ಕುಲ ಸಂಜಾತರ ಜೊತೆ ಸೇರುವ ಬಯಕೆ ಆಗಿರಬೇಕು ಎಂದು ಹೇಳಿದ್ದರು.

Advertisement

ಇದನ್ನೂ ಓದಿ :ದೇವೇಗೌಡರ ಕಾಲದಿಂದಲೂ ಕಣ್ಣೀರು ನಾಟಕವಾಡಿ ಜನರನ್ನು ಸೆಳೆಯುವ ಜೆಡಿಎಸ್: ಸಿದ್ದರಾಮಯ್ಯ

ಕುಲ ಸಂಜಾತರ ಜೊತೆ ಸೇರಿಸಲು ಈಗ ಕಾರಿಡಾರ್‌ ಉಳಿದಿಲ್ಲ. ಆ ಮಾರ್ಗದಲ್ಲಿ ಮರಳಿ ಬರಲು ಹೋದರೆ ಆನೆಗಳ ಮಾರ್ಗ ಕಟ್ಟಾಗಿದೆ. ಜನರೂ ಹೋಗಲು ಬಿಡುತ್ತಿಲ್ಲ. ಈಗಿರುವ ಆನೆಗಳ ಹಿಂಡನ್ನು ಹಿಡಿದು ಸಾಗಾಟ ಮಾಡುವುದೂ ಸುಲಭದ ಮಾತಲ್ಲ. ಈ ಕಾರಣದಿಂದ ದಾಂಡೇಲಿ ಆನೆ ದಾಂಡೇಲಿಯ ದಟ್ಟ ಕಾಡು, ಸಾಗವಾನಿ ನಡುತೋಪಿನ ಪ್ರದೇಶ ಹಾಗೂ ದೂರದ ಶಿರಸಿ ಅರಬರೆ ಕಾಡಿಗೂ ಬಂದು ಹೋಗುತ್ತಿವೆ. ಭತ್ತದ ಗದ್ದೆ, ತೋಟಕ್ಕೆ ಬಂದು ದಾಳಿ ಮಾಡುವ ಕೂಲವೂ ಹತ್ತಿರ ಆಗುತ್ತಿದೆ ಎಂಬ ಆತಂಕ ಕೂಡ ರೈತರಲ್ಲಿ ಕಾಡುತ್ತಿದೆ.

ಎಲ್ಲೆಲ್ಲಿದೆ ಕಾರಿಡಾರ್‌?: ಆನೆಗಳ ಸಂತಾನೋತ್ಪತ್ತಿ ಹಾಗೂ ಅವುಗಳ ಆರೋಗ್ಯ ವರ್ಧನೆ ಕಾರಣದಿಂದ ಅವುಗಳ ಕಾರಿಡಾರ್‌ ಉಳಿಸಿಕೊಳ್ಳಬೇಕಿದೆ. ಇದಕ್ಕಾಗಿ ಅರಣ್ಯ ಇಲಾಖೆ ಕಾರಿಡಾರ್‌ ಸಂರಕ್ಷಣೆಗೆ ಮುಂದಾಗಿದೆ. ಇದಕ್ಕಾಗಿ 138 ವಿವಿಧ ರಾಜ್ಯದೊಳಗಿನ, 28 ಅಂತರ್‌ ರಾಜ್ಯದ, 17 ಅಂತಾರಾಷ್ಟ್ರೀಯ ಆನೆ ಕಾರಿಡಾರ್‌ ಗುರುತಿಸಲಾಗಿದೆ. ಪ್ರತಿವರ್ಷ ಆನೆ ಮಾನವ ಸಂಘರ್ಷದಲ್ಲಿ 50ಕ್ಕೂ ಹೆಚ್ಚು ಜೀವ ಹಾನಿ ಆಗುತ್ತಿದೆ. ಆನೆಗಳನ್ನು ಉಳಿಸಿ, ಮನುಷ್ಯ ಕೂಡ ಸಹಜೀವನ ನಡೆಸಲು ಆನೆ ಕಾರಿಡಾರ್‌ ಉಳಿಸುವದೊಂದೇ ಮಾರ್ಗವಾಗಿದೆ!

– ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next