Advertisement
ವಿದ್ಯಾರ್ಥಿ ಭರತ್ (14) ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿಯ ಮನೆಗೆ ಹೋಗಿದ್ದಾಗ ಕಾಡಾನೆಗೆ ಬಲಿಯಾಗಿದ್ದಾನೆ. ಭರತ್ ಹಾಸನದ ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ತನ್ನ ಅಜ್ಜಿ ಜಯಮ್ಮ ಎಂಬುವರಮನೆಯ ಹಿತ್ತಲಿನಲ್ಲಿ ಬೆಳಗ್ಗೆ 8 ಗಂಟೆ ಹೊತ್ತಿನಲ್ಲಿ ಹಸುವನ್ನು ಕಟ್ಟಿಹಾಕುತ್ತಿದ್ದ ಸಂದರ್ಭದಲ್ಲಿ ಮನೆಯ ಬಳಿ ದಿಢೀರನೆ ಬಂದ ಕಾಡಾನೆ ಭರತ್‌ನನ್ನು ಸುಮಾರು 150 ಮೀಟರ್ ದೂರ ಎಳೆದೊಯ್ದು, ಸೊಂಡಲಿನಿಂದ ನೆಲಕ್ಕೆ ಅಪ್ಪಳಿಸಿ, ಕಾಲಿನಿಂದ ತಲೆಯನ್ನು ತುಳಿದು ಸಾಯಿಸಿದೆ.
ಆರಂಭದಲ್ಲಿ ಸಂಕಾಂತಿಯ ಹಬ್ಬದ ದಿನವೇ ಜೀವ ಹಾನಿ ಮಾಡಿದೆ. ಭರತ್ ಈ ವರ್ಷ ಕಾಡಾನೆಗಳಿಗೆ ಮೊದಲ ಬಲಿಯಾಗಿದ್ದಾನೆ. ಕಾಡಾನೆ ಭರತ್‌ನನ್ನು ಸಾಯಿಸಿದ ಕೂಗಳತೆಯಲ್ಲಿಯೇ 7-8 ಜನರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ಮನೆಯತ್ತ ಓಡಿಹೋಗಿ ಪ್ರಾಣ ಉಳಿಸಿಕೊಂಡರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಾಸನದ ತಣ್ಣೀರುಹಳ್ಳ ಬಡಾವಣೆಯ ನಿವಾಸಿ ಚಂದ್ರಮತಿಯ ಪುತ್ರ. ಮೃತ ಬಾಲಕನ ತಂದೆ ಸುರೇಶ್ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನೌಕರನಾಗಿದ್ದ ಸುರೇಶ್ ಸೇವೆಯಲ್ಲಿದ್ದಾಗಲೇ ಮೃತಪಟ್ಟಿದ್ದರಿಂದ ಪತ್ನಿ ಚಂದ್ರಮತಿಗೆ ಅನುಕಂಪ ಆಧಾರದ ನೌಕರಿ ಸಿಕ್ಕಿತ್ತು. ಮಗ ಭರತ್ ಮತ್ತು ಚಿಕ್ಕ ಮಗಳೊಂದಿಗೆ ಹಾಸನದಲ್ಲಿ ಚಂದ್ರಮತಿ ವಾಸವಿದ್ದು, ಸಂಕ್ರಾಂತಿ ಹಬ್ಬಕ್ಕೆ ಮಗನನ್ನು ತಾಯಿಯ ಮನೆಗೆ ಕಳುಹಿಸಿದ್ದರು. ಸಂಕ್ರಾಂತಿಯ ಹಬ್ಬದ ಸಡಗರ ಆಚರಿಸಬೇಕಾಗಿದ್ದ ಭರತ್ ಕಾಡಾನೆಗೆ ಬಲಿಯಾಗಿದ್ದು, ಆತನ ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ.
Related Articles
Advertisement
ಸಚಿವರ ನಿರ್ಲಕ್ಷ್ಯ: ಸ್ಥಳಕ್ಕಾಗಮಿಸಿದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರೂ ಅರಣ್ಯ ಇಲಾಖೆ ಮೇಲೆಕಿಡಿ ಕಾರಿದರು. ಆಲೂರು ಮತ್ತು ಸಕಲೇಶಪುರ ತಾಲೂಕಿನಲ್ಲಿ ಕಾಡಾನೆಗಳ ಉಪಟಳ ತಡೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕೆಂದು ಹಲವು ಬಾರಿ ಅರಣ್ಯ ಸಚಿವರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅರಣ್ಯ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ಈ ಭಾಗದ ಜನರು ಕಾಡಾನೆಗಳಿಗೆ ಬಲಿಯಾಗುತ್ತಿದ್ದಾರೆ. ಕಾಡಾನೆಗಳ ಹಾವಳಿ ತಡೆಗೆ ಹಾಗೂ ಆನೆ ಕಾರಿಡಾರ್ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರದ ಬಳಿ ನಿಯೋಗ ಕರೆದೊಯ್ಯವುದಾಗಿ ನೀಡಿದ ಭರವಸೆಯನ್ನೂ ಸಚಿವರ ಈಡೇರಿಸಿಲ್ಲ. ಕಳೆದ ತಿಂಗಳು ಇಬ್ಬರು ಬಲಿಯಾದ ಸಂದರ್ಭ ಆಲೂರು ತಾಲೂಕು ನಾಗವಾರ ಬಳಿ ಆನೆಧಾಮ ಸ್ಥಾಪನೆ ಆರಂಭಿಸಿದ ಅರಣ್ಯ ಇಲಾಖೆ, ಈಗ ಕಾಮಗಾರಿಯನ್ನೂ ಸ್ಥಗಿತಗೊಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಾಸನ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಪ್ರತಿಭಟನಾಕಾರನ್ನು ಸಮಾಧಾನಪಡಿಸಿ, ಮೃತ ಬಾಲಕನ ಶವದ ಮರಣೋತ್ತರ ಪರೀಕ್ಷೆಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಬಾಲಕನನ್ನು ಬಲಿ ತೆಗೆದುಕೊಂಡ ಪುಂಡಾನೆಯನ್ನು ಹಿಡಿಯುವ ಕಾರ್ಯಾಚರಣೆಯನ್ನು ನಾಳೆಯಿಂದಲೇ ಆರಂಭಿಸಲಾಗುವುದು. ಇದಕ್ಕಾಗಿ ಸಾಕಾನೆಗಳನ್ನು ತರುವುದಾಗಿ ಭರವಸೆ ನೀಡಿದರು. ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮೋಹನ್ ಸಕಲೇಶಪುರ ಉಪ ವಿಭಾಗಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಆಲೂರು ತಹಶೀಲ್ದಾರ್ ಶಾರದಾಂಬ ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ನಂತರ ಬಾಲಕನ ಶವದ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಯಿತು.