Advertisement

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಗಜ ಗಣತಿ ಆರಂಭ

10:56 PM May 17, 2023 | Team Udayavani |

ಹುಣಸೂರು: ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ವರ್ಷದ ಹುಲಿ ಗಣತಿ ಕಾರ್ಯದ ನಂತರ ಇದೀಗ ಗಜಗಣತಿ ನಡೆಸಲಾಗುತ್ತಿದೆ.

Advertisement

ಮೂರು ದಿನಗಳ ಆನೆಗಣತಿ ಕಾರ್ಯಕ್ಕೆ ಬುಧವಾರದಂದು ಚಾಲನೆ ಸಿಕ್ಕಿದ್ದು, ಮೇ.19 ರವರೆಗೆ ಎಲ್ಲ 8 ವಲಯಗಳಲ್ಲೂ 300 ಸಿಬ್ಬಂದಿಗಳು ಗಣತಿ ಕಾರ್ಯ ನಡೆಸುವರು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಾಗರಹೊಳೆ, ವೀರನಹೊಸಹಳ್ಳಿ ಕಲ್ಲಹಳ್ಳ, ಹುಣಸೂರು, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ಮತ್ತಿಗೋಡು, ಅಂತರಸಂತೆ ವಲಯಗಳಲ್ಲಿ ಈಗಾಗಲೆ ಗಣತಿ ಕಾರ್ಯಕ್ಕಾಗಿ ಎರಡು ಹಂತದಲ್ಲಿ ತರಬೇತಿ ಪಡೆದಿರುವ ನುರಿತ 300ಕ್ಕೂ ಹೆಚ್ಚು ಸಿಬ್ಬಂದಿಗಳು ಉದ್ಯಾನದ 91 ಗಸ್ತುಗಳಲ್ಲಿ ಏಕ ಕಾಲಕ್ಕೆ ಗಣತಿ ಕಾರ್ಯ ಆರಂಭಿಸಿದರು.

ಉದ್ಯಾನದ ಶೇ. 50ರಷ್ಟು ಅಂದರೆ ಸುಮಾರು 500 ಚ.ಕಿ.ಮೀ ಅರಣ್ಯ ಪ್ರದೇಶವನ್ನು ಗಸ್ತು ಮೂಲಕ ನಿಗದಿ ಪಡಿಸಿದ ಭೂ ಪ್ರದೇಶ ಅಥವಾ ಸುಮಾರು ಐದು ಚ.ಕಿ.ಮೀ ಪ್ರದೇಶದಲ್ಲಿ ತಿರುಗಾಡಿ ಸ್ಯಾಂಪಲ್ ಬ್ಲಾಕ್ ಕೌಂಟ್ ವಿಧಾನದಲ್ಲಿ ನೇರವಾಗಿ ಕಾಣಿಸುವ ಆನೆಗಳ ಸಂಖ್ಯೆಯನ್ನು ದಾಖಲು ಮಾಡಿಕೊಂಡರು. ಗಣತಿ ವೇಳೆ ಸಾಕಷ್ಟು ಕಡೆ ಗಜಪಡೆಯ ದರ್ಶನವಾಗಿದೆ.

2017 ರಲ್ಲಿ ನಡೆದ ಆನೆ ಗಣತಿಯಲ್ಲಿ ದೇಶದಲ್ಲಿ ಸುಮಾರು 25 ಸಾವಿರ ಆನೆಗಳಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ 15 ಸಾವಿರ ಹಾಗೂ ಕರ್ನಾಟಕದಲ್ಲಿ 6049 ಆನೆಗಳು ಹಾಗೂ ನಾಗರಹೊಳೆ ಉದ್ಯಾನದಲ್ಲಿ 1550 ಆನೆಗಳಿವೆ ಎಂದು ಅಂದಾಜಿಸಲಾಗಿತ್ತು. ಇದು ಈ ನಾಡಿನ ಹೆಮ್ಮೆ ಎನಿಸಿದೆ.

ಎರಡನೇ ದಿನದ ಗುರುವಾರ ಸುಮಾರು ಎರಡು ಕಿ.ಮೀ.ಲೈನ್ ಟ್ರಾನ್ಸಾಕ್ಟ್ ನಲ್ಲಿ ಆನೆಗಳ ಲದ್ದಿ ಎಣಿಕೆ ಕಾರ್ಯ ನಡೆಸುವರು. ಮೂರನೇ ದಿನ ಶುಕ್ರವಾರದಂದು ಕೆರೆ-ಕಟ್ಟೆ ಬಳಿ ಕುಳಿತು. ನೀರು ಕುಡಿಯಲು ಬರುವ ಆನೆಗಳ ಗಣತಿ ನಡೆಸಲಿದ್ದಾರೆಂದು ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

Advertisement

ಪ್ರಾದೇಶಿಕ ವಿಭಾಗದಲ್ಲೂ ಗಣತಿ;
ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರದಲ್ಲಿ ಮೂರು ವಲಯಗಳಲ್ಲೂ ಎಸಿಎಫ್‌ಗಳು ನೇತೃತ್ವದಲ್ಲಿ ಆರ್.ಎಫ್.ಓ. ಡಿ.ಆರ್.ಎಫ್.ಓ.ಗಾರ್ಡ್ಗಳು ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆಂದು ಡಿಸಿಎಫ್ ಸೀಮಾ.ಪಿ.ಎ. ತಿಳಿಸಿದ್ದಾರೆ.

ಹುಣಸೂರು ವಲಯದಲ್ಲಿ 6 , ಪಿರಿಯಾಪಟ್ಟಣದಲ್ಲಿ 8 ಸಿಬ್ಬಂದಿ ಹಾಗೂ ಆಯಾ ವಲಯಗಳ ಆರ್.ಎಫ್.ಓ. ಮತ್ತು ಗಾರ್ಡ್ ಗಳನ್ನು ಗಣತಿ ಕಾರ್ಯದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಎಸಿಎಫ್ ಅನುಷಾ ತಿಳಿಸಿದರು.

ವಿಜ್ಞಾನ ಭವನದ ಮಾರ್ಗದರ್ಶನದಲ್ಲಿ ಗಣತಿ:
ಈ ಬಾರಿಯೂ ಗಣತಿ ಕಾರ್ಯಕ್ಕೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮಾರ್ಗದರ್ಶನದಲ್ಲಿ ವನ್ಯಜೀವಿ ತಜ್ಞರಾದ ಡಾ.ರಾಮನ್, ಡಾ.ನಿಶಾಂತ್ ಹಾಗೂ ಸುಕುಮಾರನ್ ರವರು ಆನೆಗಳ ತತ್ರಾಂಶ ಸಂಗ್ರಹ, ಕ್ಷೇತ್ರಕಾರ್ಯದಲ್ಲಿ ತೊಡಗುವವರಿಗೆ ಬೇಕಾದ ಮಾರ್ಗಸೂಚಿಗಳನ್ನು ಸಿದ್ದಪಡಿಸಿದ್ದಾರೆ.

ಕರ್ನಾಟಕದ ಜೊತೆಗೆ ತಮಿಳುನಾಡು, ಕೇರಳ, ಆಂದ್ರಪ್ರದೇಶ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಗಣತಿ ಕಾರ್ಯ ಆರಂಭವಾಗಿದ್ದು, ಇನ್ನೆರಡು ತಿಂಗಳಲ್ಲಿ ವರದಿ ಅಂತಿಮಗೊಳಿಸಿ. ಆನೆಗಳ ಮಾಹಿತಿ ಬಿಡುಗಡೆಗೊಳಿಸುವ ಯೋಜನೆ ಇದೆ .

೨೦೧೮ರ ಮಹಾಮಳೆ, ನಂತರದ ಕೊರೊನಾ ದಿಂದಾಗಿ ಅರಣ್ಯ ಪ್ರವೇಶಕ್ಕೆ ಹೊರಗಿನ ಪ್ರವಾಸಿಗರಿಗೆ ನಿರ್ಭಂಧ ವಿಧಿಸಲಾಗಿತ್ತು, ಈ ವೇಳೆ ವನ್ಯಪ್ರಾಣಿಗಳ ಸ್ವಚ್ಚಂದ ವಿಹಾರ, ಸಂತಾನೋತ್ಪತ್ತಿಗೂ ವಿಫುಲ ಅವಕಾಶ ಸಿಕ್ಕಿತ್ತು. ಹೀಗಾಗಿ ವನ್ಯಪ್ರಾಣಿಗಳೊಂದಿಗೆ ಗಜ ಸಂತತಿಯೂ ವೃದ್ದಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next