ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ 6 ವರ್ಷಗಳಿಂದ ಕಾಡಾನೆಗಳ ಮೇವಿಗೆ ಉಂಟಾಗಿದ್ದ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಹುಣಸೂರು ವನ್ಯಜೀವಿ ವಿಭಾಗವು ಪ್ರಥಮ ಬಾರಿಗೆ ಬಿದಿರಿನ ಬೀಜದ ನಾಟಿಗೆ ಮುಂದಾಗಿದೆ. ಈ ಮೂಲಕ ಕಾಡಾನೆಗಳ ಮೇವಿನ ಬರ ನೀಗಿಸುವ ಪ್ರಯತ್ನ ನಡೆಸಿದೆ.
6 ವರ್ಷದ ಹಿಂದೆ ಬಿದಿರು ನಾಶವಾಗಿತ್ತು: 2012ರಲ್ಲಿ ಇಡೀ ಉದ್ಯಾನದಲ್ಲಿ ಬಿದಿರು ಹೂವು ಬಿಟ್ಟು ಸಂಪೂರ್ಣ ನಾಶವಾಗಿತ್ತು. ಜೊತೆಗೆ ಇದೇ ವರ್ಷದ ಏಪ್ರಿಲ್ ಹಾಗೂ ಮೇನಲ್ಲಿ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದಾಗಿ ಬಿದಿರಿನ ಹಡ್ಲು ಸಂಪೂರ್ಣ ನಾಶವಾಗಿತ್ತು.
3 ಟನ್ ಬಿದಿರು ಬಿತ್ತನೆ: ಉದ್ಯಾನವನದಾದ್ಯಂತ ಸಾಕಷ್ಟು ಮಳೆ ಬಿದ್ದಿದೆ. ಭೂಮಿ ತೇವಾಂಶದಿಂದ ಕೂಡಿದ್ದು, ಬಿದಿರು ಬೀಜದ ಬಿತ್ತನೆಗೆ ಪ್ರಶಸ್ತವಾಗಿರುವುದನ್ನು ಗಂಬೀರವಾಗಿ ಪರಿಗಣಿಸಿದ ನಾಗರಹೊಳೆ ಕ್ಷೇತ್ರ ನಿರ್ದೇಶಕ ಆರ್.ರವಿಶಂಕರ್ ಕಾಡಾನೆಗಳ ಮೇವಿಗೆ ಪ್ರಮುಖ ಆಧ್ಯತೆ ನೀಡಿದ್ದಾರೆ. ಉದ್ಯಾನವನದಾದ್ಯಂತ ಸ್ವಾಭಾವಿಕವಾಗಿ ಬಿದಿರು ಬೆಳೆಸಲು ಸುಮಾರು 3 ಟನ್ ಬಿದಿರಿನ ಬೀಜವನ್ನು ಉದ್ಯಾನದ ಎಲ್ಲೆಡೆ ಬಿತ್ತನೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾಡಾನೆಗಳ ಮೇವಿನ ಹೂರಣವಾಗಿದ್ದ ಬಿದಿರು ಬೆಳೆಯು ಇದರಿಂದ ಇಡೀ ಅರಣ್ಯ ಪ್ರದೇಶದಲ್ಲಿ ಬಿದಿರು ಒಣಗಿ ಅಸ್ಥಿಪಂಜರದಂತೆ ಗೋಚರಿಸುತಿತ್ತು. ಉತ್ತಮ ಮಳೆಯಾಗಿದ್ದು ಇದೀಗ ಬಿತ್ತನೆ ಮಾಡಿರುವುದರಿಂದ ಕೆಲವೇ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.
ಒಂದೆಡೆ ಕಾಡಾನೆಗಳ ಆನೆಗಳ ಮೇವು, ಮತ್ತೂಂದೆಡೆ ಅರಣ್ಯಕ್ಕೆ ಮುಕುಟದಂತಿದ್ದ ಬಿದಿರು ಕಾಣೆಯಾಗಿದ್ದರಿಂದ ಆನೆಗಳ ಮೇವಿಗೂ ಪರದಾಟ ಜೊತೆಗೆ ಅರಣ್ಯದಲ್ಲಿಯೂ ಮಳೆ ಹೊಯ್ದಾಟ(ತೊಡಕು)ವಾಗಿತ್ತು.
ಎಲ್ಲಿ ಬಿತ್ತನೆ ಮಾಡಲಾಗುತ್ತದೆ: ಇದನ್ನು ಗಂಭೀರವಾಗಿ ಪರಿಗಣಿಸಿದ ಹುಣಸೂರು ವನ್ಯಜೀವಿ ವಿಭಾಗವು ಬೆಂಗಳೂರಿನ ಅರಣ್ಯ ಸಂಶೋಧನಾ ಮಹಾವಿದ್ಯಾಲಯ ಹಾಗೂ ದಾಂಡೇಲಿಯಿಂದಲೂ ಹೆಬ್ಬಿದಿರಿನ ಬಿತ್ತನೆ ಬೀಜವನ್ನು ತರಿಸಿದೆ. ಇದೀಗ ನಾಗರಹೊಳೆಯೊಳಗಿರುವ ಸಾರಥಿ, ನಾಗರಹೊಳೆ, ತಾರಕ, ಕಬಿನಿ, ಲಕ್ಷ್ಮಣತೀರ್ಥ ಹೊಳೆಗಳ ಅಂಚಿನಲ್ಲಿ, ಕೆರೆ- ತೊರೆ ಸುತ್ತ, ತೋಡು, ಹಡ್ಲು ಹಾಗೂ ಹೆಚ್ಚು ನೀರಿರುವ ಕಡೆಗಳಲ್ಲಿ ಬಿತ್ತನೆ ಕಾರ್ಯ ಸಾಗುತ್ತಿದೆ.
ಕೆಲವೆಡೆ ಹಳೇ ಬಿದಿರಿನ ಬೀಜದಿಂದ ಹುಟ್ಟಿಕೊಂಡಿರುವ ಬಿದಿರಿನ ಸಸಿಗಳು ಕಾಣಿಸಿಕೊಂಡಿವೆ. ಇವುಗಳನ್ನು ಆನೆ ಮತ್ತಿತರ ಪ್ರಾಣಿಗಳು ತಿನ್ನಬಾರದೆಂಬ ಉದ್ದೇಶದಿಂದ ಲಾಂಟಾನ ಬಳ್ಳಿಗಳನ್ನು ಬಳಸಿ ಮುಚ್ಚಲಾಗಿದೆ.
ಆನೆ ಆಹಾರಕ್ಕಾಗಿ ಬಿತ್ತನೆ: ಸಾಮಾನ್ಯವಾಗಿ 40 ವರ್ಷಗಳಿಗೊಮ್ಮೆ ಬಿದಿರು ಹೂ ಬಿಟ್ಟು ನಾಶವಾಗುತ್ತದೆ. ಕಾಡಾನೆಗಳು ಹೆಚ್ಚಿರುವ ನಾಗರಹೊಳೆ ಉದ್ಯಾನವನಲ್ಲಿ ಬಿದಿರು ಅತೀ ಮಹತ್ವದ್ದು, ಇದರಿಂದ ಬಿದಿರಿನ ಆಹಾರವನ್ನೇ ಅವಲಂಬಿಸಿರುವ ವನ್ಯಜೀವಿಗಳು ಪರದಾಡುವಂತಾಗಿ ಕಾಡಿನಿಂದ ಹೊರಬರುವುದನ್ನು ಮನಗಂಡ ತಾವು, ಗಂಭೀರವಾಗಿ ಪರಿಗಣಿಸಿ ವಿವಿಧೆಡೆಗಳಿಂದ ಬಿತ್ತನೆ ಬೀಜತರಿಸಿ ಬಿತ್ತನೆ ಮಾಡಲಾಗುತ್ತಿದೆ. ಈಗಾಗಲೆ ಬೆಳೆದಿರುವ ಬಿದಿರಿನ ಸಸಿಗಳನ್ನು ರಕ್ಷಿಸಲಾಗಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಿ.ಎಫ್.ಆರ್.ರವಿಶಂಕರ್ ತಿಳಿಸಿದ್ದಾರೆ.
* ಸಂಪತ್ ಕುಮಾರ್ ಹುಣಸೂರು