Advertisement

ಮಲಗಿದ್ದ ಕಾರ್ಮಿಕರ ಮೇಲೆ ಆನೆ ದಾಳಿ: ಓರ್ವ  ಸಾವು

07:00 AM Mar 08, 2018 | |

ಕಡಬ: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸೇತುವೆಗಳ ದುರಸ್ತಿ ಕಾರ್ಮಿಕನಾಗಿದ್ದ ತಮಿಳುನಾಡಿದ ಮಧುರೈ ಮೂಲದ ರಂಜಿತ್‌ (48) ಅವರು ಆನೆ ತುಳಿತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಕೊಂಬಾರು ಗ್ರಾಮದ ಅನೆಕಲ್‌ ಕಟ್ಟೆ ಬಳಿ ಸಂಭವಿಸಿದೆ.

Advertisement

ಕಾಮಗಾರಿ  ಸ್ಥಳದ ಸಮೀಪದಲ್ಲೇ  ಕಾರ್ಮಿಕರು ತಂಗಿದ್ದ ಶೆಡ್‌ನ‌ ಹೊರಗೆ  ನಿದ್ರಿಸುತ್ತಿದ್ದ  ರಂಜಿತ್‌ನ ತೊಡೆ ಭಾಗಕ್ಕೆ ಆನೆ ತುಳಿದಿದೆ.   ಪಕ್ಕದಲ್ಲಿ ಮಲಗಿದ್ದ ಅವರ  ಊರಿನವರೇ ಆಗಿದ್ದ  ಕಾರ್ಮಿಕರಾದ ಷಣ್ಮುಗ (40) ಹಾಗೂ ಲಕ್ಷ್ಮಣ (40) ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.  

ಆಂಧ್ರ ಮೂಲದ ಗುತ್ತಿಗೆದಾರ ರಂಗರಾಜ್‌  ನೇತೃತ್ವದಲ್ಲಿ   ಇವರು ಕೆಲಸ ನಿರ್ವಹಿಸುತ್ತಿದ್ದರು.  ರಾತ್ರಿ  ಶೆಡ್‌ನ‌ಲ್ಲಿ ಸೆಕೆ  ಅತಿಯಾಗಿದ್ದರಿಂದ  ಹೊರಗೆ ಮಲಗಿದ್ದರು. ತಡರಾತ್ರಿ ಕಾಡಾನೆ ಬರುತ್ತಿರುವ ಸದ್ದು ಕೇಳಿ ಎಚ್ಚರಗೊಂಡ ಷಣ್ಮುಗ ಅವರು ರಂಜಿತ್‌ ಹಾಗೂ ಲಕ್ಷ್ಮಣ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ.  ಲಕ್ಷ್ಮಣ  ಎದ್ದು ಓಡುವ ಯತ್ನದಲ್ಲಿದ್ದಾಗ ಆನೆಗೆ ತಾಗಿ  ಬಿದ್ದರಾದರೂ ಅಲ್ಲಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.  ಷಣ್ಮುಗನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ರಂಜಿತ್‌ ಎಚ್ಚರಗೊಳ್ಳುವ ಮೊದಲೇ  ಅಲ್ಲಿಗೆ ತಲುಪಿದ್ದ ಆನೆ ಅವರ ಮೇಲೆ ದಾಳಿ ನಡೆಸಿದೆ.  ಲಕ್ಷ್ಮಣನನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಷಣ್ಮುಗನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳಿಸಲಾಗಿದೆ.

ಪಿಕಪ್‌ ವಾಹನಕ್ಕೂ ಹಾನಿ
ಆನೆಗಳು ಬರುವುದನ್ನು ತಡೆಯಲು ಕಾಡಿನಿಂದ ಆ ಭಾಗಕ್ಕೆ ಬರುವ ರಸ್ತೆಗಡ್ಡೆವಾಗಿ ಪಿಕಪ್‌ ವಾಹನವನ್ನು ನಿಲ್ಲಿಸಲಾಗಿತ್ತು. ಆದರೆ ಆನೆ ಕಾಡಿನಿಂದ ಬಂದದ್ದಲ್ಲ. ಅದು ಊರಿನಿಂದ ಕಾಡಿಗೆ ಹೋಗುವ ದಾರಿ ಮೂಲಕ ಬಂದಿದೆ ಎಂದು ಕಾರ್ಮಿಕರು ತಿಳಿಸಿದ್ದಾರೆ. ಆನೆ ಈ ಪಿಕಪ್‌ ವಾಹನವನ್ನೂ  ಸ್ವಲ್ಪ ದೂರ ದೂಡಿಕೊಂಡು ಹೋಗಿದೆ. 

ವಿಳಾಸ ಸ್ಪಷ್ಟವಿಲ್ಲ
ಮೃತ ವ್ಯಕಿ ತಮಿಳುನಾಡಿನ ಮಧುರೈ ಸಶಾಸ್ತಿನಗರ ತಾಡಿಕುಂಟ ಗ್ರಾಮದವರೆಂದು ಆತನ ಸಹ ಕಾರ್ಮಿಕನ ನೋಟ್‌ ಪುಸ್ತಕದಲ್ಲಿ ದಾಖಲಿಸಲಾಗಿದೆ. ಆದರೆ  ಸರಿಯಾದ ವಿಳಾಸ ಇನ್ನೂ ದೃಢಪಟ್ಟಿಲ್ಲ. ಮೃತರ ಸಂಬಂಧಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಗುತ್ತಿದ್ದು,  ಮೃತದೇಹವನ್ನು ಮಂಗಳೂರಿನ ವೆನಾÉಕ್‌ ಆಸ್ಪತ್ರೆಯಲ್ಲಿ ಇರಿಸಲಾಗು ವುದು ಎಂದು ಕಡಬ ಎಸ್‌ಐ ಪ್ರಕಾಶ್‌ ದೇವಾಡಿಗ ತಿಳಿಸಿದ್ದಾರೆ.

Advertisement

ಸ್ಥಳಕ್ಕೆ ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್‌ ಎನ್‌.ಎಚ್‌.  ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್‌, ಕಡಬ ಆರಕ್ಷಕ ಠಾಣೆಯ ಸಹಾಯಕ ಉಪನಿರೀಕ್ಷಕ ರವಿ, ಕೊಂಬಾರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಸುಬ್ರಹ್ಮಣ್ಯ ವಲಯದ ಕೊಂಬಾರು ಶಾಖಾ ಉಪ ವಲಯ ಅರಣ್ಯಾಧಿಕಾರಿ ನವೀನ್‌ ಕುಮಾರ್‌, ಸುಬ್ರಹ್ಮಣ್ಯ ಶಾಖಾಧಿಕಾರಿ ಶಿವಶಂಕರ್‌, ಪರಿಸರ ಸಂರಕ್ಷಕ   ಭುವನೇಶ್‌  ಕೈಕಂಬ, ಎಪಿಎಂಸಿ ನಿರ್ದೇಶಕ ರಾಮಕೃಷ್ಣ ಹೊಳ್ಳಾರು ಮುಂತಾದವರಿದ್ದರು.

5 ಲ.ರೂ. ಪರಿಹಾರ: ಎಸಿಎಫ್‌
ಕಾಮಗಾರಿ ನಡೆಸಲು ಅರಣ್ಯ ಇಲಾಖೆಯಿಂದ ಗುತ್ತಿಗೆದಾರರು ಅನುಮತಿ ಪಡೆದಿದ್ದರು. ಈಗ ಕಾರ್ಮಿಕರು ಬೆಳಗ್ಗೆ ಕೆಲಸದ ಸ್ಥಳಕ್ಕೆ ತೆರಳಿ  ಕತ್ತಲಾಗುವ ಮೊದಲು ಅರಣ್ಯ ಪ್ರದೇಶದಿಂದ ಜನವಸತಿ ಇರುವ ಸ್ಥಳಕ್ಕೆ ಹಿಂದಿರುಗಬೇಕು ಎಂದು ಸದ್ರಿ ಅನುಮತಿಯನ್ನು ಪರಿಷ್ಕರಿಸಿ ಸೂಚನೆ ನೀಡಲಾಗಿದೆ. ಮೃತರ ಕುಟುಂಬಕ್ಕೆ ಇಲಾಖೆ ವತಿಯಿಂದ 5 ಲ.ರೂ. ಪರಿಹಾರ ನೀಡಲಾಗುವುದು.  ಎಂದು ಸುಳ್ಯ ವಿಭಾಗದ ಎಸಿಎಫ್‌ ಜಗನ್ನಾಥ್‌  ಎಚ್‌.ಎಸ್‌.  ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next