ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದಿದ್ದ ಕಾಡಾನೆಗಳು ಕಾಡಂಚಿನ ಗ್ರಾಮಗಳಲ್ಲಿ ಮತ್ತೆ ದಾಂದಲೆ ಶುರುಮಾಡಿದ್ದು, ರೈತರ ಬೆಳೆದಬೆಳೆಗಳನ್ನು ತಿಂದು-ತುಳಿದು ನಾಶಪಡಿಸಿರುವ ಘಟನೆ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಉಡುವೇಪುರದ ಗೋವಿಂದ, ವೀರಭದ್ರೇಗೌಡ, ಕುಮಾರ್, ರಾಜಶೇಖರ್‌ರ ಜಮೀನುಗಳಿಗೆ ನುಗ್ಗಿದ ಕಾಡಾನೆ ಹಿಂಡು ಜಮೀನಿನಲ್ಲಿದ್ದ ರಾಗಿ ಬೆಳೆಯನ್ನು ತಿಂದು ತುಳಿದು ನಾಶಮಾಡಿವೆ.
ಬೀರೇಗೌಡ ಜಮೀನಿನಲ್ಲಿ ಅಳವಡಿಸಿದ್ದ ಸ್ಪಿಂಕ್ಲರ್ ಫೈಪು ಮತ್ತು ತಂತಿ ಬೇಲಿಯನ್ನು ಸಹ ತುಳಿದು ನಾಶಪಡಿಸಿವೆ. ಅಲ್ಲದೆ ಪಕ್ಕದ ಕಾಳಬೋಚನಹಳ್ಳಿಯ ಸಿ.ಎನ್.ಬೀರೇಗೌಡರ ಸೇರಿದ ಮೂರು ಎಕರೆ ಮುಸುಕಿನ ಜೋಳ, ದಾಸಯ್ಯರ ಸೇರಿದ ರಾಗಿಬೆಳೆಯನ್ನು ನಾಮಾವಶೇಷಗೊಳಿಸಿದ್ದು ಸುಮಾರು 3 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ.
ಕಳೆದೊಂದು ತಿಂಗಳಿಂದಲೂ ಎಡಬಿಡದೆ ಹೆಬ್ಟಾಳ, ಕಲ್ಲುಗುಂಡಿ, ಹಾಗೂ ಸಣ್ಣಮ್ಮನಕುಂಚಿಯ ಅರಣ್ಯದ ಮಾರ್ಗವಾಗಿ ಹೊರಬರುವ ಕಾಡಾನೆಗಳ ಹಿಂಡು ನಿತ್ಯ ಲಗ್ಗೆ ಇಟ್ಟು ರೈತರು ಬೆಳೆದ ಬೆಳೆಗಳನ್ನು ತಿಂದು ನಾಶ ಪಡಿಸಿತ್ತಿವೆ. ಸ್ಥಳಕ್ಕೆ ಕಚುವಿನಹಳ್ಳಿ ಶ್ರೇಣಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರೈತರ ಆಗ್ರಹ: ಪ್ರತಿವರ್ಷ ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ವರೆಗೆ ವಿವಿಧ ಬೆಳೆಗಳು ಕಟಾವು ಮಾಡುವ ಸಂದರ್ಭದಲ್ಲೇ ಕಾಡಾನೆಗಳ ದಾಳಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಕಣ್ಮುಚ್ಚಿ ಕುಳಿತಿದೆ. ರೈತರು ಜಮೀನು, ತೋಳಗಳಲ್ಲಿ ಅಟ್ಟಣೆ ಹಾಕಿ ರಾತ್ರಿ ಕಾವಲು ಕಾದರೂ ನಿಯಂತ್ರಣಕ್ಕೆ ಬಂದಿಲ್ಲ. ರಣ್ಯ ಇಲಾಖೆಯವರು ಆನೆ ಹಾವಳಿ ನಿಯಂತ್ರಿಸಲು ಹೆಚ್ಚಿನ ಕಾವಲು ಪಡೆ ನಿಯೋಜಿಸಬೇಕು, ಬಾಕಿ ಉಳಿದಿರುವ ರೈಲುಕಂಬಿಯ ತಡೆಗೋಡೆಯನ್ನು ಪೂರ್ಣಗೊಳಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಪರಿಹಾರ ಸಿಕ್ಕಿಲ್ಲ: ಕಳೆದ ವರ್ಷ ನೇರಳಕುಪ್ಪೆಯ ಎ.ವಿ.ಬಾಲಕಷ್ಣ ಶಗ್ರಿತಾಯ, ಸಣ್ಣ ತಮ್ಮೇಗೌಡ ವಿ.ಸಿ.ಸಂಜೀವ, ಬಿಲ್ಲೇನ ಹೊಸಹಳ್ಳಿಯ ಜಾನ್ಸನ್, ಕೆ.ಜಿ.ಹೆಬ್ಬನಕುಪ್ಪೆಯ ಕಮಲ. ಕಾಳಬೋಚನಹಳ್ಳಿಯ ಹೊನ್ನೇಗೌಡ, ಬೀರೇಗೌಡ ಸೇರಿದಂತೆ ಹತ್ತಾರು ಜಮೀನುಗಳಿಗೆ ಕಾಡಾನೆಗಳ ಹಿಂಡು ದಾಳಿ ಮಾಡಿ ಬೆಳೆ ನಾಶ ಪಡಿಸಿದ್ದವು. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರ್ಷಕಳೆದರೂ ಇನ್ನು ಪರಿಹಾರ ದೊರಕಿಲ್ಲವೆಂದು ಈ ವೇಳೆ ಬೆಳೆ ನಾಶ ಹೊಂದಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.