Advertisement

ಮಂಡೆಕೋಲು:  ಕಾಡಾನೆ ಹಿಂಡು

09:42 AM Dec 15, 2018 | Team Udayavani |

ಮಂಡೆಕೋಲು: ಕರ್ನಾಟಕ-ಕೇರಳ ಗಡಿಭಾಗದ ಮಂಡೆಕೋಲು ಗ್ರಾಮದ ವಿವಿಧೆಡೆ ಕಾಡಾನೆಗಳು ಬೀಡುಬಿಟ್ಟಿದ್ದು, ನಿರಂತರ ಕೃಷಿಕರ ತೋಟಗಳಿಗೆ ದಾಳಿ ಮಾಡುತ್ತ ಪರಿಸರದಲ್ಲಿ ಭೀತಿ ಸೃಷ್ಟಿಸುತ್ತಿವೆ.
ವಾರದ ಹಿಂದೆ ಮಂಡೆಕೋಲು ಗ್ರಾಮದಿಂದ ಪಯಸ್ವಿನಿ ನದಿದಾಟಿ ಕೇರಳದ ದೇಲಂಪಾಡಿ ಪರಿಸರದ ಪಂಜಿಕಲ್ಲು ಕಾಡಿಗೆ 9 ಆನೆಗಳು ಪ್ರವೇಶಿಸಿದ್ದವು. ಹಗಲಲ್ಲಿ  ಮಂಡೆ ಕೋಲು ಅರಣ್ಯ ಭಾಗದಲ್ಲಿ ಬೀಡು ಬಿಟ್ಟಿದ್ದು, ರಾತ್ರಿ ವೇಳೆ ತೋಟಗಳಿಗೆ ನುಗ್ಗುತ್ತಿವೆ.

Advertisement

ವ್ಯಾಪಕ ಹಾನಿ
ಎರ್ಕಲ್ಪಾಡಿಯ ಸುಬ್ರಹ್ಮಣ್ಯ ಭಟ್‌ ಅವರ ತೋಟದ 25ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಉರುಳಿಸಿವೆ. ಹತ್ತಾರು ತೆಂಗು-ಬಾಳೆ ಗಿಡಗಳನ್ನು ನಾಶಪಡಿಸಿವೆ. ರಾಧಾಕೃಷ್ಣ ಹೆಬ್ಟಾರ್‌ ಅವರ ತೋಟಕ್ಕೆ 7 ಆನೆಗಳು ದಾಳಿಯಿಟ್ಟು 20ಕ್ಕೂ ಹೆಚ್ಚು ರಬ್ಬರ್‌  ಮರಗಳು ಹಾಗೂ ಐದು ಅಡಿಕೆ ಮರಗಳನ್ನು ನಾಶಪಡಿಸಿವೆ. ಅರಣ್ಯಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಂಡೆಕೋಲು-ಅಜ್ಜಾವರ ಭಾಗದಲ್ಲಿ ಕಾಡು ಪ್ರದೇಶ ಹೆಚ್ಚಿರುವುದರಿಂದ ಆನೆ- ಚಿರತೆಗಳ ಹಾವಳಿ ಸಾಮಾನ್ಯವಾಗಿವೆ. ಸಾಕುಪ್ರಾಣಿಗಳು ಚಿರತೆಗಳ ಪಾಲಾದರೆ, ಕೃಷಿ ಫ‌ಸಲು ಆನೆಗಳ ಪಾಲಾಗುತ್ತಿವೆ. ರಾತ್ರಿ ವೇಳೆ ಸಂಚರಿಸಲು ಹೆದರಿಕೆಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಶಾಶ್ವತ ಪರಿಹಾರಕ್ಕೆ ಆಗ್ರಹ
ಆನೆಗಳ ಹಾವಳಿ ವ್ಯಾಪಕವಾಗಿ ಇರುವಲ್ಲಿ ಅರಣ್ಯ ಇಲಾಖೆ ಕಂದಕವನ್ನು ನಿರ್ಮಿಸಿದ್ದರೂ ಅನೆಗಳು ಕಂದಕವನ್ನು ದಾಟಿ ಬರುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರ  ಬೇಕು ಎಂದು ಅಜ್ಜಾವರ ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್‌ ಅತ್ಯಾಡಿ ಆಗ್ರಹಿಸಿದ್ದಾರೆ. 

ಆನೆಗಳು ದಾಳಿ ಮಾಡಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಆನೆ ಹಾವಳಿ ಹೆಚ್ಚಾಗಿರುವ ಭಾಗಗಳಲ್ಲಿ ಪಿಲ್ಲರ್‌ ಅಳವಡಿಸಲು ಯೋಜಿಸಲಾಗಿದೆ. ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಮಂಜುನಾಥ್‌, ವಲಯ ಅರಣ್ಯಾಧಿಕಾರಿ, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next