ಬೆಳ್ಳಿಕಾನ ಕೋರಿಕಂಡ ನಿವಾಸಿ ಕೂಲಿ ಕಾರ್ಮಿಕ ಪ್ರಭಾಕರ ಅವರ ಪುತ್ರ, ಕಾಸರಗೋಡು ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಪ್ರಮೋದ್ (18) ಬಾವಿಗೆ ಬಿದ್ದ ಯುವಕ.
Advertisement
ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟಿದ್ದು, ಗುರುವಾರ ರಾತ್ರಿ ಏಕಾಏಕಿ ಳಿಡುತ್ತಾ ಪ್ರಮೋದ್ ಇದ್ದಲ್ಲಿಗೆ ಧಾವಿಸಿ ಬಂದವು. ಓಡುವ ರಭಸದಲ್ಲಿ ಅವರು ಪಾಳುಬಾವಿಗೆ ಬಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಲ್ಪಚ್ಚೇರಿ- ಚಂದ್ರಬಯಲು ಕೋರಿಕಂಡ ಕಾಲನಿಯ ಅರಣ್ಯ ದಂಚಿನಲ್ಲಿ ಕಳೆದ ಎರಡು ದಿನಗಳಿಂದ ಠಿಕಾಣಿ ಹೂಡಿದ್ದ 7 ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಚರಣೆ ಅರಣ್ಯಾಧಿಕಾರಿಗಳ ವಿಶೇಷ ದಳ ಹಾಗೂ ನಾಗರಿಕರಿಂದ ನಡೆಯುತ್ತಿದೆ. ಗುರುವಾರದ ಹಗಲು ಹೊತ್ತಿನಲ್ಲಿ ಪ್ರಯತ್ನಿಸಿದ್ದರೂ ರಾತ್ರಿ ತನಕ ಪ್ರಯೋಜನವಾಗಲಿಲ್ಲ. ಸಂಜೆ ವೇಳೆಗೆ ಪಟಾಕಿ ಸಿಡಿಸಿ, ಬೆಂಕಿ ಹಚ್ಚಿ ಆನೆಗಳನ್ನು ಓಡಿಸುವ ಪ್ರಯತ್ನದಲ್ಲಿ ರೊಚ್ಚಿಗೆದ್ದ ಕಾಡಾನೆಗಳು ಘೀಳಿಡುತ್ತಾ ಜನರತ್ತ ದಾಳಿ ನಡೆಸಲು ಮುಂದಾದವು. ಈ ಸಂದರ್ಭ ಬಾವಿಗೆ ಬಿದ್ದ ಪ್ರಮೋದ್‌ರನ್ನು ರಕ್ಷಿಸಿದ ನಾಗರಿಕರು ಹಾಗೂ ಅರಣ್ಯಾಧಿಕಾರಿಗಳು ಮೇಲಕ್ಕೆತ್ತಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿ ದರು. ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಸೊಂಟದ ಎಲುಬು ತುಂಡಾಗಿದ್ದು ತುರ್ತು ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶನಿವಾರ ಶಸ್ತ್ರಚಿಕಿತ್ಸೆ ನಡೆಯಲಿದೆ. ಇದಕ್ಕೆ ಸುಮಾರು 1.50 ಲ.ರೂ. ಅಗತ್ಯವಿದೆ ಎಂದು ಪ್ರಮೋದ್ ಅವರ ಸಹೋದರ ಪ್ರಶಾಂತ್ ತಿಳಿಸಿದ್ದು, ಬಡಕುಟುಂಬ ಚಿಂತೆಗೀಡಾಗಿದೆ. ಇಲಾಖೆಯಿಂದ ಲಭಿಸುವ ಎಲ್ಲ ಸಹಾಯಗಳನ್ನು ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಎನ್. ಅನಿಲ್ ಕುಮಾರ್ ‘ಉದಯವಾಣಿ’ಗೆ ತಿಳಿಸಿದ್ದಾರೆ.