Advertisement

ಆನೆ ತಡೆಗೆ ಅರಣ್ಯ ಭಾಗದಲ್ಲಿ  ಆನೆ ಅಗರ್‌

03:44 PM Dec 18, 2017 | Team Udayavani |

ಸುಳ್ಯ :ಕಾಡಂಚಿನಿಂದ ಕೃಷಿ ತೋಟಕ್ಕೆ ನುಗ್ಗುತ್ತಿರುವ ಗಜರಾಜನ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ 40 ಕಿ.ಮೀ. ಉದ್ದದ ಕಂದಕ ನಿರ್ಮಿಸಿದೆ!

Advertisement

ಸುಳ್ಯ ವಲಯದಲ್ಲಿ 17.5 ಕಿ.ಮೀ., ಸುಬ್ರಹ್ಮಣ್ಯ ವಲಯದಲ್ಲಿ 19 ಕಿ.ಮೀ. ಮತ್ತು ಪಂಜ ವಲಯದಲ್ಲಿ 3.5 ಕಿ.ಮೀ. ಉದ್ದದ ಕಂದಕ ನಿರ್ಮಿಸಲಾಗಿದೆ. ಕಳೆದ ವರ್ಷ 35 ಕಿ.ಮೀ. ಉದ್ದದ ಕಂದಕ ನಿರ್ಮಿಸಲಾಗಿತ್ತು. ರಾಜ್ಯ ಸರಕಾರ ಆನೆ ದಾಳಿ ತಡೆಗೆ ನೀಡುವ ಅನುದಾನದಲ್ಲಿ ಆನೆ ನಿರೋಧಕ ಕಂದಕ ನಿರ್ಮಿಸಲಾಗುತ್ತದೆ.

2 ವರ್ಷಗಳ ಹಿಂದೆ ಮಂಡೆ ಕೋಲು ಅರಣ್ಯ ಮತ್ತು ಆಲೆಟ್ಟಿ ಪಶ್ಚಿಮ ಭಾಗದಲ್ಲಿ ಸುಮಾರು 18.65 ಕಿ.ಮೀ. ದೂರ ಆನೆ ಅಗರ್‌ ನಿರ್ಮಿಸಲಾಗಿತ್ತು. ಕಳೆದ, ಈ ಬಾರಿ ಸೇರಿ ಒಟ್ಟು 85 ಕಿ.ಮೀ. ಉದ್ದದ ಕಂದಕ ನಿರ್ಮಾಣ ಮಾಡಲಾಗಿದೆ.

ಹೇಗಿದೆ ಕಂದಕ ?
ಆನೆ ನಿರೋಧಕ ಕಂದಕ ಮೇಲ್ಭಾಗದಲ್ಲಿ 3 ಮೀ. ಅಗಲ, ತಳಭಾಗದಲ್ಲಿ 1.5 ಮೀಟರ್‌ ಅಗಲ ಇದೆ. ಮೇಲ್ಭಾಗದಿಂದ ಕೆಳಭಾಗದ ತನಕ 2 ಮೀ. ಆಳ ಇದೆ. ಆನೆ ಇದನ್ನು ದಾಟಲು ಪ್ರಯತ್ನಿಸಿದರೆ, ಕಂದಕದೊಳಗೆ ಬೀಳುತ್ತದೆ. ಕಂದಕ ಕಂಡಾಗ ಆನೆ ದಾಟಲು ಪ್ರಯತ್ನಿಸದೆ ಮರಳಿ ಹೋಗುವುದು ಹೆಚ್ಚು. ಇದರಿಂದ ಕಾಡಿನ ಭಾಗದಿಂದ ಆನೆ ಸರಾಗವಾಗಿ ಕೃಷಿ ತೋಟಕ್ಕೆ ಲಗ್ಗೆ ಹಾಕುವುದು ನಿಯಂತ್ರಣಕ್ಕೆ ಬರುತ್ತದೆ. ಇನ್ನೊಂದು ಪ್ರಯೋಜನವೆಂದರೆ, ಕಂದಕದ ಮೂಲಕ ಅರಣ್ಯ ಭಾಗಕ್ಕೂ ಶಾಶ್ವತ ಗಡಿ ಗುರುತು ಸಿಕ್ಕಾಂತಾಗುತ್ತದೆ. ಇದರಿಂದ ಅರಣ್ಯ ಭೂಮಿ ಒತ್ತುವರಿಯನ್ನು ತಡೆಗಟ್ಟಲು ಸಾಧ್ಯ.

ಎಲ್ಲೆಲ್ಲಿ ನಿರ್ಮಾಣ
ಸುಳ್ಯ ವಲಯದ ವ್ಯಾಪ್ತಿಯ ಕನ್ಯಾಡಿ ತೋಡು, ಆಲೆಟ್ಟಿ ಗ್ರಾಮದ ಚೆರ್ನೂರು, ಕುಂಭಕ್ಕೋಡು, ಕುಡೆಂಬಿ, ಬಿಲ್ಲಾರಮೂಲೆ, ಕಲ್ಲೆಂಬಿ, ಮೇದಿನಡ್ಕ, ಭಸ್ಮಡ್ಕ, ರಂಗತ್ತಮಲೆ, ಸಂಪಾಜೆ, ತೊಡಿಕಾನ ಮೊದಲಾದೆಡೆ 17.5 ಕೀ.ಮೀ. ಉದ್ದದ, ಸಂಪಾಜೆ ಮೀಸಲು ಅರಣ್ಯದ ಜೋಡಿಪಣೆ ಎನ್‌ಕ್ಲೋಸರ್‌ನಲ್ಲಿ 2.20 ಕಿ.ಮೀ., ಕಿನಾಲೆ ಎನ್‌ಕ್ಲೋಸರ್‌ನಲ್ಲಿ 1 ಕಿ.ಮೀ., ಮೇದಿನಡ್ಕ ಪಶ್ಚಿಮ ಮೀಸಲು ಅರಣ್ಯದಲ್ಲಿ 2 ಕಿ.ಮೀ., ಆಲೆಟ್ಟಿ ಪಶ್ಚಿಮ ಮೀಸಲು ಅರಣ್ಯದ ಕುಡೆಂಬಿಯಲ್ಲಿ 2ಕೀ. ಮೀ., ಗುಳಿಗನ ಕಟ್ಟೆಯಿಂದ ಕಲ್ಲೇಂಬಿ ತನಕ 2 ಕಿ.ಮೀ., ಮೇದಿನಡ್ಕ ಪಶ್ಚಿಮ ಮೀಸಲು ಅರಣ್ಯದಲ್ಲಿ ತುದಿಯಡ್ಕ ದಿಂದ ಭಸ್ಮಡ್ಕದ ತನಕ 2.85 ಕಿ.ಮೀ., ಆಲೆಟ್ಟಿ ಪೂರ್ವ ಮೀಸಲು ಅರಣ್ಯದ ಕುಂಭಕ್ಕೋಡು – ಬಿಲ್ಲರಮಜಲು 1ಕಿ.ಮೀ., ಸಂಪಾಜೆ ಮೀಸಲು ಅರಣ್ಯದ ಊರುಪಂಜ ಎನ್‌ ಕ್ಲೋಸರ್‌ 1.50 ಕಿ.ಮೀ. ಆಲೆಟ್ಟಿ ಪಶ್ಚಿಮ ಕನ್ನಡಿತೋಡು – ಶ್ರೀಮಲೆ-ಕೊಚ್ಚಿ-ಚೆರ್ನೂರು 2 ಕಿ.ಮೀ., ಕನ್ನಡಿತೋಡು – ಚೂಡಂಗಲ್ಲು – ದೇಶಮಲೆ – ದರ್ಬಡ್ಕ – ಚಾಕಟೆ 2 ಕಿ.ಮೀ., ಸುಬ್ರಹ್ಮಣ್ಯ ವಲಯದ ಕೋಣಾಜೆ ಅರಣ್ಯದ ಕಡಂಬಲ, ಕಿಲಾರ್‌ಮಲೆ ಅರಣ್ಯದ ಗೋಲ್ಯಾಡಿ - ಮೆಂಟಕಜೆ ಮೊದಲಾದೆಡೆ 19 ಕಿ.ಮೀ. ಹಾಗೂ ಪಂಜ ವಲಯದಲ್ಲಿ 3.5 ಕಿ.ಮೀ. ಉದ್ದದ ಕಂದಕ ನಿರ್ಮಿಸಲಾಗಿದೆ. 

Advertisement

ಹಿಂಡಾನೆ ಕಾಟ
ಕೃಷಿ ತೋಟಕ್ಕೆ ಹಿಂದೆ ಒಂಟಿಯಾನೆ ದಾಳಿ ನಡೆಸುತ್ತಿತ್ತು. ಈಗ ಹಿಂಡಾನೆಗಳು ಲಗ್ಗೆ ಇಡುತ್ತಿವೆ. ಪಶ್ಚಿಮಘಟ್ಟದಿಂದ ಇಳಿದು ಬರುತ್ತಿವೆ. ಕೇರಳ ಭಾಗದ ಅರಣ್ಯ ಪ್ರದೇಶ, ದೇಸಮಲೆ, ಪೂಮಾಲೆ ಭಾಗದಿಂದ ಆನೆಗಳು ಕರ್ನಾಟಕದ ಗಡಿಗ್ರಾಮಗಳಿಗೆ ಒಳನುಸುಳುತ್ತವೆ ಎನ್ನುವುದು ಕೃಷಿಕರ ಅಂಬೋಣ. ಹಗಲಿನಲ್ಲಿ ಕಾಡಲ್ಲಿ ಇರುವ ಆನೆ ಸಂಜೆಯಾದಂತೆ ಕೃಷಿ ತೋಟಕ್ಕೆ ನುಸುಳುತ್ತಾನೆ. ಇದರಿಂದ ಅರಣ್ಯ ಇಲಾಖೆಗೆ ಕಾರ್ಯಾಚರಣೆ ಅಷ್ಟು ಸಲೀ ಸಲ್ಲ. ಏನೇ ತಂತ್ರ ಮಾಡಿದರೂ ಈಗೀಗ ಆನೆಗಳನ್ನು ದೊಡ್ಡ ಕಾಡಿಗೆ ಅಟ್ಟುವುದು ತ್ರಾಸದಾಯಕ ಸಂಗತಿ. ಹಾಗಾಗಿ ಕಂದಕ ನಿರ್ಮಾಣಕ್ಕೆ, ಕಂದಕ ಪ್ರಯೋಜನ ಇಲ್ಲದ ಕಡೆ ರಕ್ಷಣಾ ಬೇಲಿ ಅಳವಡಿಕೆಗೆ ಅರಣ್ಯ ಇಲಾಖೆ ಆದ್ಯತೆ ನೀಡಿದೆ.

ಕಡಿವಾಣ
ಆನೆ ಉಪಟಳ ತಡೆಗೆ ಸಂಬಂಧಿಸಿ ಆನೆ ಅಗರ್‌ ನಿರ್ಮಿಸಲಾಗುತ್ತಿದೆ. ಪಂಜದಲ್ಲಿ ಈ ವರ್ಷ 3.5 ಕಿ.ಮೀ. ಉದ್ದದ ಕಂದಕ ನಿರ್ಮಿಸಲಾಗಿದೆ.
 ಪ್ರವೀಣ್‌ ಕುಮಾರ್‌ ಶೆಟ್ಟಿ ,
   ವಲಯ ಅರಣ್ಯಾಧಿಕಾರಿ, ಪಂಜ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next