Advertisement

Elephant : ರಾಜ್ಯದಲ್ಲಿ 3 ವರ್ಷಗಳಲ್ಲಿ ವಿದ್ಯುತ್‌ ಸ್ಪರ್ಶಕ್ಕೆ 44 ಆನೆಗಳು ಬಲಿ!

04:27 PM Jul 22, 2024 | Team Udayavani |

ಉದಯವಾಣಿ ಸಮಾಚಾರ
ಬೆಂಗಳೂರು: ಅರಣ್ಯ ಪ್ರದೇಶಗಳಲ್ಲಿ ಹಾದು ಹೋಗಿರುವ ವಿದ್ಯುತ್‌ ಮಾರ್ಗಗಳು ಆನೆಗಳ ಪಾಲಿಗೆ “ಯಮಸ್ವರೂಪಿ’ಯಾಗಿದ್ದು, ಕಳೆದ 3 ವರ್ಷಗಳಲ್ಲಿ ವಿದ್ಯುತ್‌ ತಗುಲಿ 44ಕ್ಕೂ ಹೆಚ್ಚು ಆನೆಗಳು ಮರಣ ಹೊಂದಿವೆ. ಅರಣ್ಯ ಪ್ರದೇಶ, ಸಂರಕ್ಷಿತ ಆನೆ ಧಾಮ, ಆನೆ ಕಾರಿಡಾರ್‌, ಆನೆ ಶಿಬಿರ ಮತ್ತಿತರ ಕಡೆ ಹಾಕಲಾಗುವ ವಿದ್ಯುತ್‌ ಮಾರ್ಗಗಳ ಅಳವಡಿಕೆಯಲ್ಲಿ ನಿಗದಿತ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ಹಾಗೂ ವಿದ್ಯುತ್‌ ಸರಬರಾಜು ಕಂಪೆನಿಗಳ ನಿರ್ಲಕ್ಷ್ಯವೇ ಇದಕ್ಕೆ ಬಹುಮುಖ್ಯ ಕಾರಣ ಎನ್ನಲಾಗಿದೆ.

Advertisement

ಕಳೆದ 3 ವರ್ಷಗಳಲ್ಲಿ ಬಂಡೀಪುರ, ನಾಗರಹೊಳೆ, ಬನ್ನೇರುಘಟ್ಟ ಅಭಯಾರಣ್ಯ ಪ್ರದೇಶಗಳು ಸೇರಿದಂತೆ ಹಾಸನ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 51ಕ್ಕೂ ಹೆಚ್ಚು ಆನೆಗಳ ಅಸ್ವಭಾವಿಕ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 44ಕ್ಕೂ ಹೆಚ್ಚು ಆನೆಗಳು ವಿದ್ಯುತ್‌ ಅವಘಡಕ್ಕೆ ಬಲಿಯಾಗಿವೆ. ಈ ವರ್ಷ ಇಲ್ಲಿವರೆಗೆ 5 ಆನೆಗಳು ವಿದ್ಯುತ್‌ ತಗುಲಿ ಮೃತಪಟ್ಟಿವೆ. ಆನೆ-ಮಾನವ ಸಂಘರ್ಷ ತಡೆಗಟ್ಟುವುದು ಸೇರಿದಂತೆ ವನ್ಯಪ್ರಾಣಿಗಳು ವಿದ್ಯುತ್‌ ಅವಘಡ, ಮತ್ತಿತರ ಅಸ್ವಾಭಾವಿಕ ಸಾವುಗಳನ್ನು ತಡೆಗಟ್ಟಲು ಸರ್ಕಾರ ಹತ್ತಾರು ಕ್ರಮಗಳನ್ನು ಕೈಗೊಂಡಿದೆ.

ವಿದ್ಯುತ್‌ ಅವಘಡಗಳಿಂದ ಆನೆಗಳನ್ನು ರಕ್ಷಿಸುವ ಸಂಬಂಧ ಅರಣ್ಯ ಇಲಾಖೆ ಮತ್ತು ಇಂಧನ ಇಲಾಖೆಯ ಪ್ರಯತ್ನಗಳು ಕೇವಲ ಕಾಗದದ ಮೇಲೆ ಇದ್ದಂತಿದೆ. ಎರಡೂ ಇಲಾಖೆಗಳ ನಡುವೆ ಪತ್ರ ವ್ಯವಹಾರ ಹೊರತುಪಡಿಸಿದರೆ ಸಮರ್ಪಕವಾದ
ಕ್ರಮಗಳು ಜಾರಿಗೆ ಬಂದಿಲ್ಲ.

ಇದೇ ವಿಚಾರ ಇತ್ತಿಚೆಗೆ ಹೈಕೋರ್ಟ್‌ನ ಗಮನಕ್ಕೂ ಬಂದಿದೆ. ಆನೆಗಳು ಸೇರಿದಂತೆ ಇತರ ವನ್ಯಜೀವಿಗಳ ಸಾವಿಗೆ ಅರಣ್ಯ
ಪ್ರದೇಶದಲ್ಲಿ ಮುಖ್ಯವಾಗಿ ವನ್ಯಜೀವಿ ಧಾಮ, ಆನೆ ಕಾರಿಡಾರ್‌ ಪ್ರದೇಶಗಳಲ್ಲಿ ಅಳವಡಿಸಲಾಗುವ ಅಸುರಕ್ಷಿತ ವಿದ್ಯುತ್‌
ಮಾರ್ಗಗಳು, ಅರಣ್ಯದಂಚಿನ ಪ್ರದೇಶಗಳ ರೈತರು ತಮ್ಮ ಕೃಷಿ ಜಮೀನುಗಳಿಗೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳುವುದು, ವಿದ್ಯುತ್‌ ತಂತಿ ಬೇಲಿಗಳನ್ನು ಅಳವಡಿಸುವುದು ಮುಖ್ಯ ಕಾರಣವಾಗಿದೆ.

Advertisement

ಕೆಪಿಟಿಸಿಎಲ್‌, ಎಸ್ಕಾಂಗಳಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಆದರೆ, ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಸ್ವತಃ ಅರಣ್ಯ ಇಲಾಖೆ
ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿದೆ. ಅದಕ್ಕಾಗಿ ಕೆಪಿಟಿಸಿಎಲ್‌ ಸೇರಿದಂತೆ ಎಲ್ಲ ಎಸ್ಕಾಂಗಳಿಗೆ ನೋಟಿಸ್‌
ನ್ಯಾಯಾಲಯ ಜಾರಿಗೊಳಿಸಿದೆ.

ಅಶ್ವತ್ಥಾಮನಿಗೆ ಕರೆಂಟ್‌ ಶಾಕ್‌
ಇತ್ತಿಚಿಗೆ ಮೃತಪಟ್ಟ ದಸರಾ ಆನೆ ಅಶ್ವತ್ಥಾಮ ಅನಾರೋಗ್ಯದಿಂದ ಸಾವಾಗಿದೆ ಎಂದು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಸೋಲಾರ್‌ ವಿದ್ಯುತ್‌ ತಂತಿ ತಗುಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಸುಪ್ರೀಂಕೋರ್ಟ್‌ ಆದೇಶದಂತೆ ಸೋಲಾರ್‌ ವಿದ್ಯುತ್‌ ತಡೆಗೋಡೆಯನ್ನು ಹಾಕಬಾರದು. ಹಾಗಿದ್ದರೂ ಆನೆಗಳು ತಮ್ಮ ಕಾರಿಡಾರ್‌, ಶಿಬಿರಗಳನ್ನು ಬಿಟ್ಟು ಹೊರಬರದಂತೆ ಸೋಲಾರ್‌ ತಂತಿ ಬೇಲಿಗಳನ್ನು ವ್ಯಾಪಕವಾಗಿ ಹಾಕಲಾಗುತ್ತಿದೆ.

3 ವರ್ಷಗಳಲ್ಲಿ 243 ಸಾವು

ವಿದ್ಯುತ್‌ ಸ್ಪರ್ಶ ಮತ್ತಿತರ ಅಸ್ವಾಭಾವಿಕ ಕಾರಣಗಳಿಗೆ ಕಳೆದ 3 ವರ್ಷಗಳಲ್ಲಿ 51 ಆನೆಗಳು ಬಲಿಯಾಗಿದ್ದರೆ, ಇದೇ ಅವಧಿಯಲ್ಲಿ ಸ್ವಾಭಾವಿಕ ಕಾರಣಗಳಿಗೆ 243 ಆನೆ ಸಾವನ್ನಪ್ಪಿವೆ. 2021- 22ರಲ್ಲಿ 73, 2022-23ರಲ್ಲಿ 57, 2023-24ರಲ್ಲಿ 87, ಈ ವರ್ಷ ಜೂನ್‌ವರೆಗೆ 26 ಆನೆಗಳು ಮೃತಪಟ್ಟಿವೆ. ಆನೆ ಗಣತಿ 2023ರ ಪ್ರಕಾರ ಇಡೀ  ದೇಶದಲ್ಲಿ ಕರ್ನಾಟಕದಲ್ಲಿ ಕಾಡಾನೆಗಳ ಸಂಖ್ಯೆ
ಹೆಚ್ಚಿದೆ. ಸದ್ಯ ರಾಜ್ಯದಲ್ಲಿ ಕಾಡಾನೆಗಳ ಸಂಖ್ಯೆ 6395 ಇದೆ. ಆರ್‌. ಸುಕುಮಾರ್‌ ಅವರ ಬರೆದು ಕೆಂಬ್ರಿಜ್‌ ವಿವಿ ಪ್ರಕಟಿಸಿರುವ “ದಿ ಏಷಿಯನ್‌ ಎಲಿಫೆಂಟ್‌: ಇಕಾಲಜಿ ಆ್ಯಂಡ್‌ ಮ್ಯಾನೇಜ್‌ ಮೆಂಟ್‌’ ಪುಸ್ತಕದ ಪ್ರಕಾರ ನೈಸರ್ಗಿಕವಾಗಿ ಆನೆಗಳ ಸಾವಿನ ಪ್ರಮಾಣವು ವರ್ಷಕ್ಕೆ ಶೇ.1.8ರಷ್ಟಿದ್ದು, 6395 ಆನೆಗಳಲ್ಲಿ ವರ್ಷಕ್ಕೆ ಸುಮಾರು 120 ಆನೆಗಳ ಸಾವು ಸ್ವಾಭಾವಿಕವಾಗಿದೆ.

■ ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next