ಮೆಲ್ಬರ್ನ್: ಕಳೆದೊಂದು ವರ್ಷದಿಂದೀಚೆ ಅಮೋಘ ಪ್ರದರ್ಶನ ನೀಡುತ್ತ ಬಂದಿದ್ದ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಕೊನೆಗೂ ಸೋಲಿಗೆ ಶರಣಾಗಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾéಮ್ 4ನೇ ಸುತ್ತಿನ ಹಣಾಹಣಿಯಲ್ಲಿ ವಿಂಬಲ್ಡನ್ ಚಾಂಪಿಯನ್ ಎಲೆನಾ ರಿಬಕಿನಾ ಕೈಯಲ್ಲಿ ನೇರ ಸೆಟ್‌ಗಳ ಹೊಡೆತ ಅನುಭವಿಸಿ ಕೂಟದಿಂದ ಹೊರಬಿದ್ದರು.
ಇನ್ನೊಂದೆಡೆ ಅಮೆರಿಕದ ಭರವಸೆಯ ಆಟಗಾರ್ತಿ ಕೊಕೊ ಗಾಫ್ ಕೂಡ ಆಟ ಮುಗಿಸಿದ್ದಾರೆ. ಗಾಫ್ ಅವರ ಗ್ರಾಫ್ ಏರದಂತೆ ಮಾಡಿದವರು 2017ರ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ. ರಿಬಕಿನಾ ಮತ್ತು ಒಸ್ಟಾಪೆಂಕೊ ಕ್ವಾರ್ಟರ್ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಕಳೆದ ವರ್ಷದಿಂದ ನಿನ್ನೆಯ ತನಕ 2 ಗ್ರ್ಯಾನ್ ಸ್ಲ್ಯಾಮ್ ಟ್ರೋಫಿ ಸೇರಿದಂತೆ 8 ಪ್ರಶಸ್ತಿಗಳೊಂದಿಗೆ ಸತತ 37 ಪಂದ್ಯಗಳ ಗೆಲುವಿನ ಓಟ ಬೆಳೆಸಿದ್ದ ಐಗಾ ಸ್ವಿಯಾಟೆಕ್ ಅವರನ್ನು ಕಝಕಸ್ತಾನದ ಎಲೆನಾ ರಿಬಕಿನಾ 6-4, 6-4 ಅಂತರದಿಂದ ಪರಾಭವಗೊಳಿಸಿದರು.
ಇನ್ನೊಂದು ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಲಾಟ್ವಿಯದ ಜೆಲೆನಾ ಒಸ್ಟಾಪೆಂಕೊ 7-5, 6-3ರಿಂದ ಕೊಕೊ ಗಾಫ್ಗೆ ಸೋಲಿನ ರುಚಿ ತೋರಿಸಿದರು. ನಾನು ಆಕೆಯನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾದೆ ಎಂಬುದು ಒಸ್ಟಾಪೆಂಕೊ ಪ್ರತಿಕ್ರಿಯೆ. ಐಗಾ ಸ್ವಿಯಾಟೆಕ್ ಸೋಲಿನೊಂದಿಗೆ ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವನಿತೆಯರ ಹಾಗೂ ಪುರುಷರ ಮೊದಲೆರಡು ಶ್ರೇಯಾಂಕದ ಆಟಗಾರರು ಕ್ವಾರ್ಟರ್ ಫೈನಲ್‌ನಲ್ಲಿ ಆಡುವ ಅವಕಾಶದಿಂದ ದೂರ ಉಳಿದಂತಾಯಿತು. ಸ್ವಿಯಾಟೆಕ್‌ಗಿಂತ ಮೊದಲು ದ್ವಿತೀಯ ಶ್ರೇಯಾಂಕದ ಆಟಗಾರ್ತಿ ಆನ್ಸ್ ಜೇಬರ್, ಪುರುಷರ ವಿಭಾಗದ ಮೊದಲೆರಡು ಶ್ರೇಯಾಂಕಿತ ಆಟಗಾರರಾದ ರಫಾಯೆಲ್ ನಡಾಲ್ ಮತ್ತು ಕ್ಯಾಸ್ಪರ್ ರೂಡ್ ಪರಾಭವಗೊಂಡಿದ್ದರು.
ವನಿತಾ ವಿಭಾಗದ ಇತರ ಫಲಿತಾಂಶಗಳಲ್ಲಿ ನಂ.3 ಆಟಗಾರ್ತಿ, ಅಮೆರಿಕದ ಜೆಸ್ಸಿಕಾ ಪೆಗುಲಾ ಕ್ವಾರ್ಟರ್ ಫೈನಲ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 2021ರ ಫ್ರೆಂಚ್ ಓಪನ್ ಪ್ರಶಸ್ತಿ ವಿಜೇತೆ ಬಾಬೋìರಾ ಕ್ರೆಜಿಕೋವಾಗೆ 7-5, 6-2 ಅಂತರದ ಸೋಲುಣಿಸಿದರು.
ಪುರುಷರ ವಿಭಾಗ: ಪುರುಷರ ಸಿಂಗಲ್ಸ್‌ನಲ್ಲಿ ಅಮೆರಿಕದ 22 ವರ್ಷದ ಸೆಬಾಸ್ಟಿಯನ್ ಕೋರ್ಡ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾéಮ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು ಪೋಲೆಂಡ್‌ನ ಹ್ಯೂಬರ್ಟ್ ಹುರ್ಕಾಝ್ ವಿರುದ್ಧ 5 ಸೆಟ್‌ಗಳ ಭಾರೀ ಹೋರಾಟ ನಡೆಸಿ 3-6, 6-3, 6-2, 1-6, 7-6 (10-7) ಅಂತರದಿಂದ ಗೆದ್ದು ಬಂದರು. ಸೆಬಾಸ್ಟಿಯನ್ ಕೋರ್ಡ 1998ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಪೀಟರ್ ಕೋರ್ಡ ಅವರ ಮಗ ಎಂಬುದು ಉಲ್ಲೇಖನೀಯ.
ಶ್ರೇಯಾಂಕರಹಿತ ಚೆಕ್ ಆಟಗಾರ ಜಿರಿ ಲೆಹೆಕ 6ನೇ ಶ್ರೇಯಾಂಕದ ಕೆನಡಿಯನ್ ಟೆನಿಸಿಗ ಫೆಲಿಕ್ಸ್ ಆಗರ್ ಅಲಿಯಾಸಿಮ್ ಅವರಿಗೆ ಸೋಲುಣಿಸಿ ಏರುಪೇರಿನ ಫಲಿತಾಂಶ ದಾಖಲಿಸಿದರು. ಅಂತರ 4-6, 6-3, 7-6 (2), 7-6 (3). ರಷ್ಯಾದ ಕರೆನ್ ಕಶನೋವ್ ಜಪಾನ್‌ನ ಯೊಶಿಹಿಟೊ ನಿಶಿಯೋಕ ಅವರನ್ನು 6-0, 6-0, 7-6 (4)ರಿಂದ ಹಿಮ್ಮೆಟ್ಟಿಸಿದರು. ಕೋರ್ಡ-ಕಶನೋವ್, ಲೆಹೆಕ-ಸ್ಟೆಫನಸ್ ಸಿಸಿಪಸ್ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಗಲಿದ್ದಾರೆ.