Advertisement

Muddebihala:ಕಬ್ಬಿನ ತೂಕದಲ್ಲಿ ಮೋಸ ತಡೆಯಲು ಇಲೆಕ್ಟ್ರಾನಿಕ್ ವೇಯಿಂಗ್ ಮೆಷಿನ್: ಸಚಿವ ಪಾಟೀಲ

02:49 PM Oct 29, 2023 | Team Udayavani |

ಮುದ್ದೇಬಿಹಾಳ: ಕೆಲವು ಸಕ್ಕರೆ ಕಾರ್ಖಾನೆಯವರು ರೈತರು ಕಾರ್ಖಾನೆಗೆ ತರುವ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ಬಗ್ಗೆ ದೂರು ಕೇಳಿಬರುತ್ತಿದೆ. ರೈತರು ಈ ಬಗ್ಗೆ ಆಧಾರ ಸಮೇತ ದೂರು ಸಲ್ಲಿಸಿದರೆ ಅಂಥ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಮುಂದಿನ ವರ್ಷದಿಂದ ಈ ಅಕ್ರಮ ತಡೆಯಲು ಸರ್ಕಾರದ ವತಿಯಿಂದಲೇ ಇಲೆಕ್ಟ್ರಾನಿಕ್ ವೇಯಿಂಗ್ ಮಷಿನ್ ಅಳವಡಿಸಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

Advertisement

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ಆ.29ರ ರವಿವಾರ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಡಾ. ಚನ್ಮವೀರ ದೇವರ ಪಟ್ಟಾಧಿಕಾರ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಕ್ಕರೆ ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ಇಥೆನಾಲ್ ಸೇರಿ ಎಲ್ಲ ಉಪ ಉತ್ಪನ್ನಗಳ ಲಾಭಾಂಶ ರೈತರಿಗೆ ಹಂಚಿಕೆ ಮಾಡಬೇಕು. ಸರ್ಕಾರ ನಿಗದಿಪಡಿಸಿದ ಎಂ.ಆರ್.ಪಿ. ದರದಂತೆ ಕಬ್ಬು ಖರೀದಿಸಬೇಕು. ರೈತರಿಗೆ ಉಪಯುಕ್ತವಾಗಿ ಕೆಲಸ ಮಾಡಬೇಕು. ಈ ಬಗ್ಗೆ ಸರ್ಕಾರ ಹೊರಡಿಸಿರುವ ಆದೇಶ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ವಿಜಯಪುರ ಜಿಲ್ಲೆಗೆ ಬಸವ ಜಿಲ್ಲೆ, ಬಸವ ನಾಡು ಎನ್ನುವ ಹೆಸರು ಇಡಲು ಚರ್ಚೆ ನಡೆದಿರುವುದು ರಾಜಕೀಯ ಲಾಭದ ಹೊರತಾಗಿರಬೇಕು ಎಂದು ಪುನರುಚ್ಚರಿಸಿದ ಅವರು ನಾನೂ ಬಸವಾಭಿಮಾನಿ, ಬಸವ ನಾಡಿನ ಬಸವಭಕ್ತ. ರಾಜಕೀಯ ಕಾರಣಕ್ಕಾಗಿ ಹೆಸರು ಬದಲಾವಣೆ ವಿಷಯ ಮುನ್ನಲೆಗೆ ತರುವುದು ಶೋಭೆ ತರುವಂಥದ್ದಲ್ಲ ಎಂದರು.

ಡಿಸಿಸಿ ಬ್ಯಾಂಕ್ ಗೆ ಅವಿರೋಧ ಸಂತಸ: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಗೆ ಮತ್ತೆ ನನ್ನನ್ನು ಅದ್ಯಕ್ಷನನ್ನಾಗಿ ಅವಿರೋಧ ಆಯ್ಕೆ ಮಾಡಿರುವುದು ಸಂತಸ ತರುವಂಥದ್ದು. ಬ್ಯಾಂಕಿನ ಶತಮಾನೋತ್ಸವ ಸಂಭ್ರಮದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಆದರೆ ಬ್ಯಾಂಕ್ ನ ನಿರ್ದೇಶಕರ ಅವಿರೋಧ ಆಯ್ಕೆಗೆ ಮುದ್ದೇಬಿಹಾಳ ಪಿಕೆಪಿಎಸ್ ಮತಕ್ಷೇತ್ರ ಸ್ಪರ್ಧೆ ನೀಡಿ ಅವಿರೋಧ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದು ವಿಷಾಧನೀಯ ಎಂದರು.

Advertisement

ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಇದ್ದರು. ಇದಕ್ಕೂ ಮುನ್ನ ಸಚಿವರು ಸಂಗಮನಾಥ ಮತ್ತು ಬಸವಣ್ಣನ ದರ್ಶನಾಶಿರ್ವಾದ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next