ಮಂಡ್ಯ: ನಗರದ ಗುತ್ತಲು ಬಡಾವಣೆ ನಿವಾಸಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್ ವಿದ್ಯುತ್ ಸ್ಪರ್ಶದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದು, ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ತೀವ್ರ ಹಿಂದಿರುವ ಕುಟುಂಬ ದವರು ಮಗನಿಗೆ ಚಿಕಿತ್ಸೆ ಕೊಡಿಸಲು ಪರದಾಡು ತ್ತಿದ್ದರೆ, ಮತ್ತೂಂದೆಡೆ ಸ್ನೇಹಿತನಿಗಾಗಿ ವಿದ್ಯಾರ್ಥಿ ಗಳು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ.
ಸಿ.ಪಿ.ಉಮೇಶ್ ನೆರವು: ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ವಿಶ್ವಾಸ್‌ನ ಚಿಕಿತ್ಸೆಗೆ 50 ಸಾವಿರ ರೂ. ನೆರವು ನೀಡಿದರು. ಗುರುವಾರ ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ಮಾಡಿ ನೆರವು ಕೋರಿದಾಗ ಸ್ಥಳದಲ್ಲಿಯೇ 50 ಸಾವಿರ ರೂ. ಚೆಕ್ ವಿತರಿಸಿ ಮಾನವೀಯತೆ ಮೆರೆದರು.
ಸಚ್ಚಿದಾನಂದ 25 ಸಾವಿರ ರೂ.: ಯುವ ಮುಖಂಡ ಇಂಡುವಾಳು ಎಸ್.ಸಚ್ಚಿದಾನಂದ 25 ಸಾವಿರ ರೂ. ಆರ್ಥಿಕ ನೆರವು ನೀಡಿದರು. ಇಂಡುವಾಳು ಗ್ರಾಮದ ನಿವಾಸಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ನೆರವು ನೀಡಿ ಮಾದರಿಯಾದರು. ಅಲ್ಲದೆ, ಆತ ಬೇಗ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಅವರು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವು ನೀಡುವಂತೆ ಮನವಿ ಮಾಡಿದರು.
ಶೇ.80ರಷ್ಟು ದೇಹಕ್ಕೆ ಗಾಯ: ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿ ಮಗ ವಿಶ್ವಾಸ್, ನಗರದ ಪಿಇಎಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ. ಓದಿನ ಜತೆಗೆ ಫುಟ್ಬಾಲ್ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡಿದ್ದಾನೆ. ಜು.1ರಂದು ಸ್ವರ್ಣ ಫುಟ್ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ 7 ಮಂದಿ ಆಟಗಾರರ ಫುಟ್ಬಾಲ್ ಕ್ರೀಡೆಯಲ್ಲಿ ಆಡಬೇಕಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್ ಜು.1ರಂದು ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದ ದುರಂತಕ್ಕೆ ಒಳಗಾಗಿದ್ದು, ಕೋಮಾ ಸ್ಥಿತಿಯಲ್ಲಿದ್ದಾನೆ.
ನೆರವಿಗೆ ಮನವಿ: ವಿಶ್ವಾಸ್ ಚಿಕಿತ್ಸೆಗೆ ದಿನವೊಂದಕ್ಕೆ ಸಾವಿರಾರು ರೂ. ವೆಚ್ಚ ತಗುಲುತ್ತಿದೆ. ಇತ್ತ ಕಾಲೇಜಿನ ವಿದ್ಯಾರ್ಥಿಗಳು ಹಣ ಸಂಗ್ರಹಿಸಿ ಚಿಕಿತ್ಸೆಗೆಂದು ನೀಡುತ್ತಿದ್ದಾರೆ. ಅಂತೆಯೇ ಪುಟ್ಬಾಲ್ ಕ್ಲಬ್‌ಗಳು ಕೂಡ ಆರ್ಥಿಕ ನೆರವು ಕೊಡುತ್ತಿವೆ. ಆದರೂ, ಇನ್ನಷ್ಟು ಹಣದ ಅವಶ್ಯಕತೆ ಇದೆ. ದಾನಿಗಳಿಂದ ಪೋಷಕರು ಆರ್ಥಿಕ ನೆರವು ಕೋರಿದ್ದಾರೆ. ಬ್ಯಾಂಕ್ ಖಾತೆ ಸಂಖ್ಯೆ-17202610002717 (ಐಎಫ್‌ಎಸ್‌ಸಿ ಕೋಡ್-SYNB0001720), ಫೋನ್ ಪೇ ಅಥವಾ ಗೂಗಲ್ ಪೇ ಸಂಖ್ಯೆ: 9900201307 (ಅಶ್ವಿನಿ) ಹಣ ಕಳುಹಿಸಬಹುದು. ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಪ್ರತಿಭಾವಂತ ಯುವ ಪ್ರತಿಭೆಗೆ ನೆರವಾಗ ಬೇಕೆಂದು ಕುಟುಂಬದವರು ಮನವಿ ಮಾಡಿದ್ದಾರೆ.