Advertisement

ರೈಲ್ವೆ ಮಾರ್ಗ ವಿದ್ಯುದ್ದೀಕರಣ; ಪ್ರಾಯೋಗಿಕ ಸಂಚಾರ ಆರಂಭ

02:55 PM Jul 20, 2019 | Team Udayavani |

ಹುಬ್ಬಳ್ಳಿ: ಬಳ್ಳಾರಿ- ತೋರಣಗಲ್ಲು ರೈಲ್ವೆ ಮಾರ್ಗ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹದ್ದಿನಗುಂಡು- ತೋರಣಗಲ್ಲು ನಡುವೆ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿಯಾಗಿ ನೆರವೇರಿತು.

Advertisement

ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜೇಶ ಮೋಹನ ಪೂಜೆ ಸಲ್ಲಿಸಿ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು. 33 ಕಿಮೀ ಅಂತರದ ವಿದ್ಯುದ್ದೀಕರಣಗೊಂಡ ಮಾರ್ಗದಲ್ಲಿ ರೈಲು ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿತು. ಬಳ್ಳಾರಿ- ಹೊಸಪೇಟೆ- ತೋರಣಗಲ್ಲು- ರೆಂಜಿತಪುರ (92) ರೈಲು ಮಾರ್ಗವನ್ನು 139.34 ಕೋಟಿ ರೂ. ವೆಚ್ಚದಲ್ಲಿ ವಿದ್ಯುದ್ದೀಕರಣಗೊಳಿಸಲು ರೈಲ್ವೆ ಮಂಡಳಿ 2012-13ರಲ್ಲಿ ಮಂಜೂರು ಮಾಡಿತ್ತು. ಸುಮಾರು 69 ಕಿಮೀ ಉದ್ದದ ಬಳ್ಳಾರಿ- ಹೊಸಪೇಟೆ ಮಾರ್ಗದ ವಿದ್ಯುದ್ದೀಕರಣ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಒಂದಿಷ್ಟು ಕಾಮಗಾರಿ ಪ್ರಗತಿಯಲ್ಲಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ತೋರಣಗಲ್ಲು- ಹೊಸಪೇಟೆ ಹಾಗೂ ಹೊಸಪೇಟೆ- ಗದಗ ಮಾರ್ಗವನ್ನು ವಿದ್ಯುದ್ದೀಕರಣ ಗೊಳಿಸಲು ಉದ್ದೇಶಿಸಲಾಗಿದೆ. ಇತರೆ ಮಾರ್ಗಗಳನ್ನು ವಿದ್ಯುದ್ದೀಕರಣ ಗೊಳಿಸುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ರೈಲ್ವೆ ಮಾರ್ಗ ಉತ್ತಮವಾಗಲಿದೆ. ಇಂಧನ ಉಳಿತಾಯ ಹಾಗೂ ಪರಿಸರದ ರಕ್ಷಣೆಯಾಗಲಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next