ಬೆಂಗಳೂರು: “ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಪೂರೈಕೆಯ ಅಂಕಿ-ಅಂಶಗಳ ಪ್ರಕಾರ ಬೇಡಿಕೆಗಿಂತ ವಿದ್ಯುತ್ ಪೂರೈಕೆ ಹೆಚ್ಚಿದ್ದು, ಜನ ಚಿಂತಿಸುವ ಅಗತ್ಯವಿಲ್ಲ’ ಎಂದು ಇಂಧನ ಸಚಿವ ವಿ. ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿ, “ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಗೆ ಯಾವುದೇ ಅಡಚಣೆ ಆಗಿಲ್ಲ.
ಸದ್ಯ ಕೋಲ್ ಇಂಡಿಯಾ ಲಿಮಿಟೆಡ್ ಹಾಗೂ ಎಸ್ ಸಿಸಿಎಲ್‌ನಿಂದ ನಿತ್ಯ 12-13 ರೇಕ್ ಕಲ್ಲಿದ್ದಲು ಪೂರೈಕೆ ಆಗುತ್ತಿದ್ದು, ಬೇಡಿಕೆ ಪೂರೈಸಲು ಸಾಧ್ಯವಾಗಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆಯಿಂದ ಯಾವುದೇ ಸಮಸ್ಯೆಯಾಗಿಲ್ಲ’ ಎಂದು ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್)ದಿಂದ ಮೂರು ವಿದ್ಯುತ್ ಸ್ಥಾವರಗಳಾದ ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಉಷ್ಣ ವಿದ್ಯುತ್ ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ 8 ಘಟಕಗಳಿದ್ದು, 1,720 ಮೆ.ವಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ;- ಬುದ್ಧನ ಕಂಚಿನ ಮೂರ್ತಿ ಪ್ರತಿಷ್ಠಾಪನೆ
ಬಳ್ಳಾರಿಯ 3 ಘಟಕಗಳಲ್ಲಿ 1,700 ಮೆ. ವಾ. ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಇನ್ನು ಯರಮರಸ್ ಸ್ಥಾವರದ ಎರಡು ಘಟಕಗಳು 1,600 ಮೆ.ವಾ. ವಿದ್ಯುತ್ ಉತ್ಪಾದನಾ ಶಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ 3 ಸ್ಥಾವರಗಳ 13 ಘಟಕಗಳ ಒಟ್ಟು ಉತ್ಪಾದನೆ 5,020 ಮೆ.ವ್ಯಾ. ಗಳಾಗಿದ್ದು. ಈ ಪೈಕಿ ಎಂಟು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ ಐದು ಘಟಕಗಳು ಬೇಡಿಕೆ ಕಡಿಮೆ ಇರುವುದರಿಂದ ಸ್ಥಗಿತಗೊಂಡಿವೆ. ನಿತ್ಯ ಕೆಪಿಸಿಎಲ್ 12-13 ರೇಕ್ ಸ್ವೀಕರಿಸುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಅಭಾವ ಆಗದಂತೆ ಗಮನಹರಿಸಲಾಗಿದೆ ಎಂದು ತಿಳಿಸಿದರು.