Advertisement

ಹಳೆ ಲೈನ್‌ ಬದಲಿಸಿದರೂ ವಿದ್ಯುತ್‌ ಕಡಿತಕ್ಕಿಲ್ಲ ಪರಿಹಾರ

12:22 PM Mar 25, 2018 | Team Udayavani |

ಸುಳ್ಯ : ಇಲ್ಲಿನ 33 ಕೆವಿ ಸಬ್‌ ಸ್ಟೇಷನ್‌ಗೆ ಪುತ್ತೂರು-ಸುಳ್ಯ ಪ್ರಸರಣ ಮಾರ್ಗದಲ್ಲಿ ಅಳವಡಿಸಿದ ಹಳೆ ತಂತಿ ಬದಲಾಯಿಸಿದ ತತ್‌ಕ್ಷಣ ತಾಲೂಕಿನ ವಿದ್ಯುತ್‌ ಸಮಸ್ಯೆ ಬಗೆಹರಿಸಲು ಸಾಧ್ಯವೇ ಇಲ್ಲ. 110 ಕೆವಿ ಸಬ್‌ಸ್ಟೇಷನ್‌ ಅಥವಾ ಆಯ್ದ ಕಡೆಗಳಲ್ಲಿ ಹೆಚ್ಚುವರಿ 33 ಕೆವಿ ಸಬ್‌ ಸ್ಟೇಷನ್‌ ನಿರ್ಮಿಸುವುದರಿಂದ ಮಾತ್ರ ಪರಿಹಾರ ಸಿಗಬಹುದು ಅನ್ನುತ್ತಿದೆ ಈಗಿನ ಚಿತ್ರಣ.

Advertisement

ಹೊಸ ಲೈನ್‌ ಅಳವಡಿಸಿದರೆ ವಿದ್ಯುತ್‌ ಸೋರಿಕೆ ಕಡಿಮೆಯಾಗಿ, ವೋಲ್ಟೇಜ್‌ ಸ್ವಲ್ಪ ಸುಧಾರಿಸಬಹುದಷ್ಟೇ. ಪದೇ-ಪದೇ ಟ್ರಿಪ್‌ ಆಗುವ ಸಮಸ್ಯೆಗೆ ಮುಕ್ತಿ ಸಿಗದು. ಕಾರಣ, ತಾಲೂಕಿಗೆ ಬೇಕಾದಷ್ಟು ವಿದ್ಯುತ್‌ ವಿತರಿಸಲು ಅಗತ್ಯವಿರುವ ಧಾರಣ ಸಾಮರ್ಥ್ಯದ ಕೊರತೆ ಇದೆ ಅನ್ನುತ್ತಿದೆ ಇಲಾಖಾ ಮಾಹಿತಿ.

ಲೈನ್‌ ಬದಲಾವಣೆ
ಪುತ್ತೂರು-ಕುಂಬ್ರ-ಜಾಲ್ಸೂರು ಮಾರ್ಗವಾಗಿ ಹಾದು ಹೋಗಿರುವ 33 ಕೆವಿ ಲೈನ್‌ನ ವಿದ್ಯುತ್‌ ತಂತಿಗಳು 50 ವರ್ಷಕ್ಕಿಂತಲೂ ಹಳೆಯವು. 1965ರಲ್ಲಿ ಈ ತಂತಿ ಅಳವಡಿಸಲಾಗಿತ್ತು. ತಂತಿ ತುಕ್ಕು ಹಿಡಿದ ಕಾರಣ, ವಿದ್ಯುತ್‌ ಸೋರಿಕೆ ಆಗಿ ನಷ್ಟ ಉಂಟಾಗುತ್ತಿದೆ. 6 ಕೋಟಿ ರೂ. ವೆಚ್ಚದಲ್ಲಿ ಹೊಸ ತಂತಿ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಎರಡು ವರ್ಷ ಸಂದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಕುಂಬ್ರದಿಂದ- ಕೌಡಿಚ್ಚಾರು, ಬೋಳುಬೈಲಿನಿಂದ- ಸುಳ್ಯ ತನಕ ಹಳೆ ತಂತಿ ಬದಲಾಯಿಸಲಾಗಿದೆ. ಕೌಡಿಚ್ಚಾರಿನಿಂದ-ಬೋಳುಬೈಲು ತನಕ 15 ಕಿ.ಮೀ. ದೂರ ತಂತಿ ಬದಲಾವಣೆ ಮತ್ತು 500 ಕಂಬ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆ ಕನಿಷ್ಠ ಎರಡು ತಿಂಗಳು ಬೇಕು. ಕಾಮಗಾರಿ ಪೂರ್ಣಗೊಂಡ ಅನಂತರ ಸೋರಿ ಹೋಗುವ ವಿದ್ಯುತ್‌ ನಷ್ಟ ತಪ್ಪಲಿದೆ.

18.5 ಮೆ.ವ್ಯಾ. ಬೇಡಿಕೆ
ತಾಲೂಕಿನ ಬಳಕೆದಾರರ ಲೆಕ್ಕಾಚಾರದ ಪ್ರಕಾರ, ಸುಳ್ಯಕ್ಕೆ ಅಗತ್ಯವಿರುವ ವಿದ್ಯುತ್‌ ಪ್ರಮಾಣ 18.5 ಮೆ.ವ್ಯಾ. ಹೊಸ ಐಪಿ ಸೆಕ್ಟರ್‌ ಅಳವಡಿಸಿದ ಪರಿಣಾಮ 2.5 ಮೆ.ವ್ಯಾಟ್‌ ಹೆಚ್ಚಳ ಸಂಗ್ರಹದ ಸಾಮರ್ಥ್ಯದಿಂದ ಈಗ 10.5 ಮೆ.ವ್ಯಾಟ್‌ ಲಭ್ಯವಿದೆ. ಹೊಸ ತಂತಿ ಅಳವಡಿಸಿದ ಅನಂತರ 1 ಮೆ.ವ್ಯಾ ಹೆಚ್ಚಳಗೊಂಡು, ಒಟ್ಟು 11.5 ಮೆ.ವ್ಯಾಟ್‌ ಪೂರೈಸುವಷ್ಟು ಸಾಮರ್ಥ್ಯ ದೊರೆಯಬಹುದು. ಉಳಿದ 7.5 ಮೆ.ವ್ಯಾಟ್‌ ಕೊರತೆಗೆ ಪರಿಹಾರ ಕಂಡುಕೊಳ್ಳಲು ಪರ್ಯಾಯ ದಾರಿ ಹುಡಕಬೇಕಷ್ಟೆ.

Advertisement

110 ಕೆವಿ ಅಥವಾ 33 ಕೆವಿ ಸಬ್‌ಸ್ಟೇಷನ್‌
ಸುಳ್ಯದ ವಿದ್ಯುತ್‌ ಸಮಸ್ಯೆಗೆ ಶಾಶ್ವತ ಪರಿಹಾರ 110 ಕೆ.ವಿ ಸಬ್‌ಸ್ಟೇಷನ್‌ ನಿರ್ಮಾಣ. ಅದು ನನಸಾಗಲು ಕನಿಷ್ಠ ಅಂದರೂ ಎರಡು ವರ್ಷ ಬೇಕು. ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಆಕ್ಷೇಪಣೆ ಅರ್ಜಿ ತೆರವಿಗೆ ಜನಪ್ರತಿನಿಧಿಗಳು ಮನವೊಲಿಸುವ ಪ್ರಯತ್ನಕ್ಕೆ ಮುಂದಾದರೆ ಅನುಷ್ಠಾನಕ್ಕೆ ವೇಗ ತರಬಹುದು. 110 ಕೆ.ವಿ ಸಬ್‌ಸ್ಟೇಷನ್‌ ಹೊರತುಪಡಿಸಿ ಇನ್ನೊಂದು ಅವಕಾಶ ಇದೆ. ಅದೆನೆಂದರೆ ಈಗಿರುವ 33 ಕೆ.ವಿ ಸಬ್‌ ಸ್ಟೇಷನ್‌ ಹೊರೆ ಕಡಿಮೆ ಮಾಡುವುದು. ಹೆಚ್ಚುವರಿಯಾಗಿ ಕಾವು, ಮಾಡಾವು, ಸಂಪಾಜೆ ರಾಜಾರಾಂಪುರದಲ್ಲಿ 33 ಕೆವಿ ಸಬ್‌ಸ್ಟೇಷನ್‌ ನಿರ್ಮಿಸುವುದು. ಇದರಿಂದ ಸುಳ್ಯ 33 ಕೆವಿ ವ್ಯಾಪ್ತಿ ಇಳಿಮುಖಕೊಂಡು, ನಿರ್ದಿಷ್ಟ ಪ್ರದೇಶಗಳಿಗೆ ಸಮರ್ಪಕ ವಿದ್ಯುತ್‌ ಹರಿಸಲು ಸಾಧ್ಯವಿದೆ. ಪ್ರಸ್ತುತ ಕಾವು, ಅರಂತೋಡುಗಳಿಗೆ ಸುಳ್ಯ 33 ಕೆವಿ ಸಬ್‌ಸ್ಟೇಷನ್‌ನಿಂದ ವಿದ್ಯುತ್‌ ಪೂರೈಕೆ ಆಗುತ್ತಿದೆ. ಅಲ್ಲೆಲ್ಲಾ ಸಬ್‌ಸ್ಟೇಷನ್‌ ನಿರ್ಮಿಸಿದರೆ, ಟ್ರಿಪ್‌ ಆಗುವ ಪ್ರಮೇಯ ಕಡಿಮೆ ಆಗಲಿದೆ.

ಪ್ರಗತಿಯಲ್ಲಿದೆ
ಹಳೆ ಲೈನ್‌ ಬದಲಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಪ್ರಸರಣ ಮಾರ್ಗದಲ್ಲಿ ಹೊಸದಾಗಿ 500 ಕಂಬ ಅಳವಡಿಸಬೇಕಿದೆ. ಹೊಸ ತಂತಿ ಅಳವಡಿಸುವುದರಿಂದ ಸೋರಿಕೆ ತಪ್ಪಿ, ವಿದ್ಯುತ್‌ ನಷ್ಟ ತಡೆಗಟ್ಟಲು ಸಾಧ್ಯವಿದೆ.
– ಸುಪ್ರೀತ್‌
ಪ್ರಭಾರ ಎಡಬ್ಲ್ಯು, ಮೆಸ್ಕಾಂ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next