Advertisement

ವಿದ್ಯುತ್‌ ದರ ಏರಿಕೆ ಪ್ರಸ್ತಾವ: ಸಚಿವರಿಂದ ಇಳಿಕೆ ಸುಳಿವು

09:50 PM Dec 15, 2022 | Team Udayavani |

ಬೆಂಗಳೂರು: ಅತ್ತ ಇಂಧನ ಸಚಿವರು ಹೊಸ ವರ್ಷಕ್ಕೆ ವಿದ್ಯುತ್‌ ದರ ಇಳಿಕೆಯ ಮುನ್ಸೂಚನೆ ನೀಡಿದರೆ, ಇತ್ತ ಅದಕ್ಕೆ ತದ್ವಿರುದ್ಧವೆಂಬಂತೆ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ಎಂದಿನಂತೆ ದರ ಏರಿಕೆಗೆ ಅನುಮತಿ ಕೋರಿವೆ!

Advertisement

ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ಕ್ಕೆ ಎಲ್ಲ ಎಸ್ಕಾಂಗಳು ಈ ಕುರಿತ ಪ್ರಸ್ತಾವನೆ ಸಲ್ಲಿಸಿವೆ. ವಿಶೇಷವೆಂದರೆ ಈ ಬಾರಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌) ಸೇರಿದಂತೆ ಎಸ್ಕಾಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಪಿಂಚಣಿ ಮತ್ತು ಈ ನೌಕರರ ವೇತನ ಪರಿಷ್ಕರಣೆಯ ಬಾಬ್ತು ಕೂಡ ಪ್ರಸ್ತಾವನೆಯಲ್ಲಿ ಸೇರ್ಪಡೆಯಾಗಿದೆ.

ವಿದ್ಯುತ್‌ ಖರೀದಿ ಮತ್ತು ಸರಬರಾಜುಗಳು, ಸೋರಿಕೆ, ಸಬ್ಸಿಡಿ ಒಳಗೊಂಡಂತೆ ವಿವಿಧ ಪ್ರಕಾರದ ವೆಚ್ಚಗಳನ್ನು ಆಧರಿಸಿ ಪರಿಷ್ಕರಣೆಗೆ ಬೇಡಿಕೆ ಸಲ್ಲಿಸಲಾಗಿದೆ.

ಚುನಾವಣೆ ಹಿನ್ನೆಲೆ ತಾತ್ಕಾಲಿಕ ತಡೆ?:

ದರ ಪರಿಷ್ಕರಣೆಯ ಸಾಧಕ-ಬಾಧಕಗಳು, ಅಗತ್ಯಗಳ ಬಗ್ಗೆ ಕೆಇಆರ್‌ಸಿ ಪರಿಶೀಲನೆ ನಡೆಸಿ, ಫೆಬ್ರವರಿಯಲ್ಲಿ ಸಾರ್ವಜನಿಕ ಅಹವಾಲು ಮತ್ತು ವಿಚಾರಣೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಲಿದೆ. ಆದರೆ ಚುನಾವಣೆ ಹೊಸ್ತಿಲಲ್ಲಿರುವುದರಿಂದ ದರ ಪರಿಷ್ಕರಣೆ ಸದ್ಯಕ್ಕೆ ಅನುಮಾನ ಎನ್ನಲಾಗಿದೆ. ಸಾಮಾನ್ಯವಾಗಿ ಹೊಸ ದರ ಎಪ್ರಿಲ್‌ನಿಂದ ಅನ್ವಯ ಆಗುತ್ತದೆ. ಒಂದು ವೇಳೆ ಆ ವೇಳೆಗೆ ಚುನಾವಣ ನೀತಿ ಸಂಹಿತೆ ಜಾರಿಯಾದರೆ ಗ್ರಾಹಕರಿಗೆ ತಾತ್ಕಾಲಿಕ ನೆಮ್ಮದಿ ಸಿಗುವ ಸಾಧ್ಯತೆಗಳಿವೆ. ಅನಂತರ ದರ ಪರಿಷ್ಕರಣೆ ಆದೇಶ ಹೊರಬಿದ್ದರೂ ಅದು ಪೂರ್ವಾನ್ವಯ ಆಗುವಂತೆ ಇರಲಿದೆ.

Advertisement

ಸರಕಾರದಿಂದ ಬಾಕಿ ಇರುವ 3,353.27 ಕೋಟಿ ರೂ. ಪಿಂಚಣಿ ವಂತಿಗೆ ಮೊತ್ತವನ್ನು ದರ ಪರಿಷ್ಕರಣೆಯಿಂದ ಕ್ಲೈಮ್‌ ಮಾಡಿಕೊಳ್ಳುವಂತೆ ಸೂಚಿಸಿದ್ದು, ಇದು ಸಮಾನ ಮೂರು ಕಂತುಗಳಲ್ಲಿ ಹಂಚಿಕೆ ಆಗಲಿದೆ. ತಣ್ಣೀರುಬಾವಿ ವಿದ್ಯುತ್‌ ಖರೀದಿಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಅದರ ಪ್ರಾಯಶ್ಚಿತ್ತವಾಗಿ 1,657 ಕೋಟಿ ರೂ.ಗಳನ್ನು ವಿವಿಧ ಕಂತುಗಳಲ್ಲಿ ಪಾವತಿಸಬೇಕಿರುವುದರಿಂದ ಅದನ್ನೂ ದರ ಪರಿಷ್ಕರಣೆಯಲ್ಲಿ ಸೇರಿಸಲಾಗುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಗ್ರಾಹಕರ ಮೇಲೆ ಮತ್ತೂಂದು ದರ ಏರಿಕೆ ಬರೆ ಬೀಳುವ ಸಾಧ್ಯತೆಗಳು ಹೆಚ್ಚಿವೆ.

ಅ. 1ರಿಂದಷ್ಟೇ “ಇಂಧನ ಹೊಂದಾಣಿಕೆ ಶುಲ್ಕ’ದಡಿ ದರ ಯೂನಿಟ್‌ಗೆ ಗರಿಷ್ಠ 43 ಪೈಸೆಯಿಂದ ಕನಿಷ್ಠ 24 ಪೈಸೆಯಷ್ಟು ಹೆಚ್ಚಳ ಮಾಡಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದಕ್ಕೂ ಹಿಂದೆ 2022ರ ಎ. 1ರಿಂದ ಯೂನಿಟ್‌ಗೆ ಸರಾಸರಿ 35 ಪೈಸೆ ಏರಿಕೆ ಮಾಡಲಾಗಿತ್ತು.

ಎಷ್ಟು ಹೆಚ್ಚಳ ಪ್ರಸ್ತಾವನೆ?:  ಪ್ರತೀ ಯೂನಿಟ್‌ಗೆ ಸರಾಸರಿ 1.20 ರೂ. 1.40 ರೂ.

-ವಿಜಯಕುಮಾರ ಚಂದರಗಿ

 

Advertisement

Udayavani is now on Telegram. Click here to join our channel and stay updated with the latest news.

Next