ಯಾದಗಿರಿ: ತಾಪಂ ಅಧ್ಯಕ್ಷೆ ಭೀಮವ್ವ ಅಚ್ಚೋಲಾ ತವರಲ್ಲೇ ಕಳೆದೊಂದು ವಾರದಿಂದ ವಿದ್ಯುತ್ ಪರಿವರ್ತಕ ಅಳವಡಿಸದ ಜೆಸ್ಕಾಂ ಅಧಿಕಾರಿಗಳನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ಜವಾಬ್ದಾರಿಯುತ ಜನಪ್ರತಿನಿಧಿ ಮಾತಿಗೆ ಬೆಲೆ ನೀಡದ ನೀವು ಜನಸಾಮಾನ್ಯರಿಗೆ ಯಾವ ರೀತಿ ಸ್ಪಂದಿಸುತ್ತೀರಿ? ಎಂದು ಆಕ್ರೋಶಗೊಂಡರು. ನಗರದ ಜಿಪಂ ಸಂಪನ್ಮೂಲ ಕೇಂದ್ರದಲ್ಲಿ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನನಗೊಬ್ಬನಿಗೆ ಯಾಕೆ ಕೇಳುತ್ತೀರಿ ಎನ್ನುವ ಅಧಿಕಾರಿ ಮಾತಿನಿಂದ ಇನ್ನಷ್ಟು ಕೆರಳಿದರು. ಮಧ್ಯಪ್ರವೇಶಿಸಿದ ತಾಪಂ ಇಒ ಬಸವರಾಜ ಶರಬೈ ಅಚ್ಚೋಲಾ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಮಧ್ಯಾಹ್ನದೊಳಗೆ ಅಳವಡಿಸಿ ಮಾಹಿತಿ ನೀಡುವಂತೆ ಸೂಚಿಸಿದರು. ರಾಮಸಮುದ್ರ ಮತ್ತು ಮುಂಡರಗಿ ಗ್ರಾಮದಲ್ಲಿ ವಿದ್ಯುತ್ ತಂತಿ ಬದಲಾವಣೆ ಮತ್ತು ಕಂಬ ಹೆಚ್ಚಿಸುವಂತೆ ಸದಸ್ಯ ಮಖಬುಲ್ ಪಟೇಲ್ ಅ ಧಿಕಾರಿಗಳನ್ನು ಒತ್ತಾಯಿಸಿದರು. ಕಂಬಗಳು ದೂರ ಇರುವುದರಿಂದ ಗಾಳಿಗೆ ತಂತಿ ತಗುಲಿ ಸ್ಪಾರ್ಕ್ ಆಗುತ್ತಿದ್ದು, ಎಲ್ಲಿ ವಿದ್ಯುತ್ ಸಮಸ್ಯೆಯಾಗಿದೆಯೋ ಅಲ್ಲಿಯೇ ವಿದ್ಯುತ್ ತೆಗೆಯಬೇಕು. ಒಂದೆಡೆ ಸಮಸ್ಯೆಯಿಂದ ಸಾಕಷ್ಟು ಗ್ರಾಮಗಳು ಕತ್ತಲಲ್ಲಿ ಇರುವಂತಾಗಬಾರದು. ಈ ಬಗ್ಗೆ ಕ್ರಮವಹಿಸಲು ಹೇಳಿದರು. ಇದೇ ವೇಳೆ ಯರಗೋಳದಲ್ಲಿ ಹೆಚ್ಚಿನ ಲೈನ್‌ಮನ್ ನೇಮಿಸುವಂತೆ ಸದಸ್ಯ ಸಾಯಬಣ್ಣ ಅ ಧಿಕಾರಿಗಳಿಗೆ ಒತ್ತಾಯಿಸಿದರು.
ತಾಲೂಕಿನ ಯಾವ ಶಾಲೆಗಳಲ್ಲಿ ಶೌಚಾಲಯ, ಕಾಂಪೌಂಡ್‌ಗಳಿಲ್ಲ ಎಂಬ ಕುರಿತು ಪಟ್ಟಿ ಮಾಡಿ ಸಲ್ಲಿಸುವಂತೆ ತಾಪಂ ಅಧಿಕಾರಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಎಸ್‌ಡಿಎಂಸಿ ರಚನೆ ಸಂಬಂಧ ಮೇ ಮೊದಲ ವಾರದಲ್ಲಿ ಸಭೆ ನಡೆಸಿ ಮಾಹಿತಿ ನೀಡುವುದು ಹಾಗೂ ಶಿಕ್ಷಣ ಕಾರ್ಯಪಡೆ ರಚಿಸುವಂತೆ ಸೂಚಿಸಿದರು.
ಜಲ ಜೀವನ ಮಿಷನ್ ಯೋಜನೆಗೆ ಉತ್ತಮ ಗುಣಮಟ್ಟದ ಪೈಪ್ ಬಳಸಲಾಗುತ್ತಿದೆ ಎನ್ನುವುದನ್ನು ಅಧಿಕಾರಿಗಳು ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ನಡೆಯಲು ಕಾಳಜಿವಹಿಸಬೇಕು. ಕೃಷಿ ಇಲಾಖೆಯಿಂದ ರೈತರಿಗೆ ಉತ್ತಮ ಬಿತ್ತನೆ ಬೀಜ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಒತ್ತಾಯಿಸಿದರು. ತಾಲೂಕಿನಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, 81 ಸಾವಿರ ಗುರಿಯಲ್ಲಿ 30,100 ಜನರು ಲಸಿಕೆ ಪಡೆದಿದ್ದಾರೆ. ಮೊದಲ ಬಾರಿಗೆ ಯಾದಗಿರಿಯಲ್ಲಿಯೇ ಗ್ರಾಮ ಮಟ್ಟದಿಂದ ಲಸಿಕೆ ನೀಡಲು ಆರಂಭಿಸಿದ್ದು ಇತರೆ ಜಿಲ್ಲೆಗಳು ನಮ್ಮ ಕ್ರಮವನ್ನೇ ಅನುಸರಿಸಿದೆ ಎಂದು ಆರೋಗ್ಯ
ಇಲಾಖೆ ಹಣಮಂತ್ರರಾಯ ಮಾಹಿತಿ ನೀಡಿ, ಲಸಿಕೆಯ ಕೊರತೆಯಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಈ ವೇಳೆ ಉಪಾಧ್ಯಕ್ಷೆ ಲಲಿತಾ ಠಾಣಗುಂದಿ, ಬಾಷು ರಾಠೊಡ ಸೇರಿದಂತೆ ಸದಸ್ಯರು ಇದ್ದರು.
ಜಲ ಜೀವನ ಮಿಷನ್ ಯೋಜನೆಯಡಿ 50 ಕಾಮಗಾರಿ ಕೈಗೊಳ್ಳಲಾಗಿದ್ದು, ಬೆಟ್ಟದಹಳ್ಳಿ ಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ. 31 ಕಾಮಗಾರಿಗಳ ಕಾರ್ಯಾದೇಶ ನೀಡಲಾಗಿದ್ದು ಟೆಂಡರ್ ಹಂತದಲ್ಲಿದೆ. ಜಿಲ್ಲೆಯು ಜಲಧಾರೆ ಯೋಜನೆಗೆ ಆಯ್ಕೆಯಾಗಿದ್ದು, ನಾರಾಯಣಪುರ ಜಲಾಶಯ ದಿಂದ ಕುಡಿವ ನೀರು ಪೂರೈಕೆ ಆಗಲಿದೆ.
ಆನಂದ, ಗ್ರಾಮೀಣ ಕುಡಿವ
ನೀರು ಸರಬರಾಜು ಅಧಿಕಾರಿ