Advertisement

ವಿದ್ಯುತ್‌ ಅವಘಡ: ಕಾರ್ಮಿಕ ಸಾವು

09:31 PM Mar 10, 2020 | Team Udayavani |

ಚಿಕ್ಕಬಳ್ಳಾಪುರ: ಕ‌ಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕನಿಗೆ ಪಕ್ಕದಲಿಯೇ ಹಾದು ಹೋಗಿದ್ದ ವಿದ್ಯುತ್‌ ತಂತಿಗಳು ತಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ಘಟನೆಯಲ್ಲಿ ಮೃತರಾದ ಕೂಲಿ ಕಾರ್ಮಿಕನನ್ನು ಚಿಕ್ಕಬಳ್ಳಾಪುರ ನಗರದ ಕೋಟೆ ಪ್ರದೇಶದ ನಿವಾಸಿ ಮೆಹಬೂಬ್‌ (32) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಊಟಕ್ಕೆ ತೆರಳುವ ಮುನ್ನ ಈ ಘಟನೆ ನಡೆದಿದ್ದು, ಘಟನೆಗೆ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇರುವುದು ಕಾರಣ ಎನ್ನುವ ಮಾತು ಸ್ಥಳೀಯ ಸಾರ್ವಜನಿಕರಿಂದ ಕೇಳಿ ಬಂತು.

ಘಟನೆ ನಡೆಸಿದ್ದೇಗೆ?: ನಗರದ ಬಾಲಾಜಿ ಟಾಕೀಸ್‌ ರಸ್ತೆಯ ಎನ್‌ಪಿಒ ರಸ್ತೆಯಲ್ಲಿ ಅಂಗಡಿ ಮಳಿಗೆ ಮೇಲೆ ಎರಡನೇ ಹಂತದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವೇಳೆ ಕಟ್ಟಡಕ್ಕೆ ಸುತ್ತಲೂ ಇಡಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮೆಹಬೂಬ್‌ ಪಕ್ಕದಲ್ಲಿಯೇ ಹಾದು ಹೋಗಿದ್ದ ವಿದ್ಯುತ್‌ ತಂತಿಗಳಿಗೆ ತಾಗಿಕೊಂಡಿದ್ದು, ಸ್ಥಳದಲ್ಲಿಯೆ ಅಸುನೀಗಿದ್ದಾನೆ. ಘಟನೆಯನ್ನು ಕೆಲವರು ಕಣ್ಣಾರೆ ನೋಡಿದರೂ ಆತನನ್ನು ರಕ್ಷಿಸಲು ಸಾಧ್ಯವಾಗದ ಕಾರಣ ಸಾರ್ವಜನಿಕರು ಅಸಹಾಯಕರಾಗಿ ರಸ್ತೆಯಲ್ಲಿ ನೋಡಿಕೊಂಡು ನಿಲ್ಲಬೇಕಾಯಿತು.

ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗಿತ್ತು: ಕಟ್ಟಡ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್‌ ತಂತಿಗಳಿಗೆ ಪ್ಲಾಸ್ಟಿಕ್‌ ಹೊದಿಕೆ ಹಾಕಲಾಗಿತ್ತು. ಆದರೂ ಆಕಸ್ಮಿಕವಾಗಿ ತಂತಿ ತಗುಲಿದ್ದು, ಮೆಹಬೂಬ್‌ನನ್ನು ಬಲಿ ಪಡೆದಿದೆ. ಹೈಟೆನ್ಯನ್‌ ತಂತಿ ಆಗಿದ್ದರಿಂದ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಅಲ್ಲಿಂದ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಇದೇ ವೇಳೆ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಮೃತರ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು.

ಮಾಲೀಕನ ವಿರುದ್ಧ ದೂರು: ಕಟ್ಟಡ ನಿರ್ಮಾಣ ಕಾರ್ಯದ ವೇಳೆ ವಿದ್ಯುತ್‌ ಅವಘಡಕ್ಕೆ ಕೂಲಿ ಕಾರ್ಮಿಕ ಬಲಿಯಾದ ಹಿನ್ನೆಲೆಯಲ್ಲಿ ನಗರ ಠಾಣೆ ಪೊಲೀಸರು ಅಂಗಡಿ ಮಳಿಗೆ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸೂಕ್ತ ಸುರಕ್ಷತೆ ಕೈಗೊಳ್ಳುವಲ್ಲಿ ವಿಫ‌ಲರಾದ ಕಾರಣ ಮಾಲೀಕ ಬಾಬು ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ ಸುದರ್ಶನ್‌ ಉದಯವಾಣಿಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next