ಕಲಬುರಗಿ: ದೇಶದ 73ನೇ ಗಣರಾಜ್ಯೋತ್ಸವ ಅಂಗವಾಗಿ ಗುಲ್ಬರ್ಗ ವಿದ್ಯುತ್ ಸರಬರಾಜು ನಿಗಮ (ಜೆಸ್ಕಾಂ)ದ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ತುಕಾರಾಂ ಪಾಂಡ್ವೆ ನಿಗಮದ ಕಚೇರಿಯಲ್ಲಿ ಬುಧವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿ ಅವರು, ನಮ್ಮ ದೇಶದ ಸಂವಿಧಾನವು ವಿವಿಧ ದೇಶಗಳಿಗೆ ಮಾದರಿಯಾಗಿದೆ. ಪ್ರಮುಖವಾಗಿ ಸರ್ವಧರ್ಮ ಸಮಭಾವದ ಪ್ರಜಾ ಸತ್ತಾತ್ಮಕ ಗಣರಾಜ್ಯವಾಗಿದೆ ಎಂದರು.
2021-22 ಆರ್ಥಿಕ ವರ್ಷದಲ್ಲಿ ಬೆಳಕು ಯೋಜನೆಯಡಿ 27,428 ಗ್ರಾಮೀಣ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಗಂಗಾಕಲ್ಯಾಣ ಯೋಜನೆಯಡಿ 3,875 ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. 473 ಶಾಲೆ-ಕಾಲೇಜುಗಳನ್ನು ಒಳಗೊಂಡು ಒಟ್ಟು 1,836 ಅಪಾಯಕಾರಿ ಸ್ಥಳಗಳನ್ನು ಸರಿಪಡಿಸಲಾಗಿದೆ. ಅಲ್ಲದೇ ಈ ವರ್ಷ ಇಡೀ ಜೆಸ್ಕಾಂ ವ್ಯಾಪ್ತಿಯಲ್ಲಿ ಇಲಾಖೆಯ ಯಾವ ನಿರ್ವಹಣಾ ಸಿಬ್ಬಂದಿಗೂ ಮಾರಣಾಂತಿಕ ಅಪಘಾತ ಸಂಭವಿಸಿಲ್ಲ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ವಸೂಲಿ ಸಾಮರ್ಥ್ಯ ಶೇ. 98.76ರಷ್ಟು ಆಗಿದೆ. ಈ ಸಾಧನೆಗಾಗಿ ಶ್ರಮಿಸಿದ ಜೆಸ್ಕಾಂನ ಪವರ್ ಮ್ಯಾನ್ ಹಿಡಿದು ಎಲ್ಲ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಪಾಂಡ್ವೆ ಅವರು, ಎಲ್ಲರೂ ಜೊತೆಗೂಡಿ ಮುಂದಿನ ದಿನಗಳಲ್ಲಿ ವಿದ್ಯುತ್ ಗ್ರಾಹಕರಿಗೆ ಇನ್ನಷ್ಟು ಅತ್ಯುತ್ತಮ ಸೇವೆ ನೀಡಬೇಕು. ಎಲ್ಲ ಕ್ಷೇತ್ರಗಳಲ್ಲಿಯು ಉತ್ತಮ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಪ್ರಸಕ್ತ ವರ್ಷದಲ್ಲಿ ಕಲಬುರಗಿ ನಗರ ವಿಭಾಗವು ವಿದ್ಯುತ್ ಅಪಘಾತ ರಹಿತ ವಿಭಾಗವೆಂದು ಗುರುತಿಸಿ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಬಸವರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಗಣರಾಜ್ಯೋತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ರಂಗೋಲಿ ಹಾಗೂ ರಾಷ್ಟ್ರ ಭಕ್ತಿಗೀತೆ ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದ ನೌಕರರಿಗೆ ಇದೇ ಸಂದರ್ಭಧಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಭಾರಿ ತಾಂತ್ರಿಕ ನಿರ್ದೇಶಕ ಲಕ್ಷ್ಮಣ ಚವ್ಹಾಣ, ಮುಖ್ಯ ಆರ್ಥಿಕ ಅಧಿಕಾರಿ ಅಬ್ದುಲ್ ವಾಜಿದ್, ಮುಖ್ಯ ಇಂಜಿನಿಯರ್ ಗಳಾದ ಆರ್.ಡಿ. ಚಂದ್ರಶೇಖರ, ಪ್ರಧಾನ ವ್ಯವಸ್ಥಾಪಕಿ ಪ್ರಮೀಳಾ ಎಂ.ಕೆ., ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನೌಕರರು ಇದ್ದರು. ಹಿರಿಯ ಆಪ್ತ ಕಾರ್ಯದರ್ಶಿ ಮಹ್ಮದ್ ಮಿನ್ಹಾಜುದ್ದೀನ್ ನಿರೂಪಿಸಿದರು.