ಕಲಬುರಗಿ: ಗುಲಬರ್ಗಾ ವಿದ್ಯುತ್ಛಕ್ತಿ ಸರಬರಾಜು ಕಂಪನಿಯಿಂದ ಬೆಳಕು ಯೋಜನೆಯಡಿ 26,919 ಗ್ರಾಮೀಣ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ ಪಾಂಡ್ವೆ ತಿಳಿಸಿದರು.
ಸೋಮವಾರ ಸಂಸ್ಥೆ ಆವರಣದಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಸಭಿಕರನ್ನು ಉದ್ದೇಶಿಸಿ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 6,437 ವಿಫಲವಾದ ಪರಿವರ್ತಕಗಳನ್ನು 24 ಗಂಟೆಯೊಳಗೆ ಬದಲಾಯಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ 947 ಕೃಷಿ ಪಂಪ್ ಸೆಟ್‌ಗಳಿಗೆ ಮತ್ತು 130 ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
20 ವರ್ಷಗಳ ಜೆಸ್ಕಾಂ ಇತಿಹಾಸದಲ್ಲಿ ಈ ವರ್ಷ ದಾಖಲೆ ಪ್ರಮಾಣದಲ್ಲಿ ಕಂದಾಯ ವಸೂಲಾತಿ ಶೇ.100ರಷ್ಟು ತಲುಪಿದೆ. 2003ನೇ ಸಾಲಿನಲ್ಲಿ 16.78 ಲಕ್ಷ ವಿದ್ಯುತ್ ಗ್ರಾಹಕರಿಂದ 364.72 ಕೋಟಿ ರೂ. ಕಂದಾಯ ವಸೂಲಿ ಮಾಡಲಾಗಿತ್ತು. ಇದು ವಸೂಲಿ ಸಾಮರ್ಥ್ಯದ ಶೇ.72.98ರಷ್ಟು ಮಾತ್ರವಾಗಿತ್ತು. ಇದೀಗ 2022ನೇ ಸಾಲಿನಲ್ಲಿ 34.57 ಲಕ್ಷ ಗ್ರಾಹಕರಿಂದ 5,835.61 ಕೋಟಿ ರೂ. ಕಂದಾಯ ವಸೂಲಿ ಮಾಡಿ ಸಾಮರ್ಥ್ಯಶೇ.100.31ಕ್ಕೆ ಹೆಚ್ಚಿಸಿದೆ. ಇದಕ್ಕೆ ನಿಗಮದ ನೌಕರರು ಮತ್ತು ಅಧಿಕಾರಿ ವರ್ಗವೇ ಕಾರಣವಾಗಿದೆ. ಇವರ ಕಠಿಣ ಪರಿಶ್ರಮದಿಂದಲೆ ಬೇಡಿಕೆಗಿಂತ 18 ಕೋಟಿ ರೂ. ಹೆಚ್ಚಿನ ಕಂದಾಯ ವಸೂಲಿ ಮಾಡಲು ಸಾಧ್ಯವಾಯಿತು ಎಂದು ಸಿಬ್ಬಂದಿ ಸೇವೆ ರಾಹುಲ ಪಾಂಡ್ವೆ ಕೊಂಡಾಡಿದರು.
ನಿಗಮದಲ್ಲಿ ಅಪ್ರತಿಮ ಸೇವೆಗೈದ ಅತ್ಯುತ್ತಮ ಶಾಖೆ, ಅತ್ಯುತ್ತಮ ಉಪ-ವಿಭಾಗ ಮತ್ತು ಅತ್ಯುತ್ತಮ ವಿಭಾಗ ಎಂದು ಗುರುತಿಸಿ ಆಯಾ ವಿಭಾಗದಲ್ಲಿನ ಅಕಾರಿಯಿಂದ ಕಿರಿಯ ಪವರಮ್ಯಾನ್ ವರೆಗೆ ಪ್ರತಿಯೊಬ್ಬರಿಗೂ ಪ್ರಶಂಸನಾ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ನೌಕರರ ಮಕ್ಕಳಿಂದ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿ, ಇಲ್ಲಿ ಉತ್ತಮ ಚಿತ್ರಕಲೆ ಬಿಡಿಸಿದ ಮಕ್ಕಳಿಗೂ ಪ್ರಶಂಸಾ ಪತ್ರ ನೀಡಿ ಹುರಿದುಂಬಿಸಲಾಯಿತು.
ಜೆಸ್ಕಾಂ ನಿರ್ದೇಶಕ ಬಿ. ಸೋಮಶೇಖರ್, ಮುಖ್ಯ ಆರ್ಥಿಕ ಅಧಿಕಾರಿ ಅಬ್ದುಲ್ ವಾಜಿದ್, ಪ್ರಧಾನ ವ್ಯವಸ್ಥಾಪಕಿ ಪ್ರಮಿಳಾ ಎಂ.ಕೆ, ವಿಜಿಲೆನ್ಸ್ ಎಸ್.ಪಿ. ಸವಿತಾ ಹೂಗಾರ ಸೇರಿದಂತೆ ನಿಗಮದ ಅಧಿಕಾರಿ-ಸಿಬ್ಬಂದಿ ಭಾಗವಹಿಸಿದ್ದರು.