Advertisement

ವಿದ್ಯುತ್‌ ಬಿಲ್‌ ಪಾವತಿ ವಿನಾಯಿತಿಗೆ ಮೀನುಗಾರಿಕೆ ಸಚಿವರಲ್ಲಿ ಮನವಿ

05:32 PM Apr 22, 2020 | sudhir |

ಮಲ್ಪೆ: ಕಡಲತಡಿಯ ಪ್ರಮುಖ ಉದ್ಯಮ ಮೀನುಗಾರಿಕೆ ಕೋವಿಡ್ ನಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದ್ದು, ಇದರಿಂದ ಮೀನು ಗಾರಿಕೆಯನ್ನೇ ಆಶ್ರಯಿಸಿರುವ ಎಲ್ಲ ಮಂಜುಗಡ್ಡೆ ಸ್ಥಾವರಗಳು ಕೂಡ ನೆಲ ಕಚ್ಚಿವೆ.

Advertisement

ಕರಾವಳಿಯಾದ್ಯಂತ ಮೀನುಗಾರಿಕೆ ಇಲ್ಲದೆ ಮೂರು ಜಿಲ್ಲೆಯಲ್ಲಿನ ಮಂಜುಗಡ್ಡೆ ಘಟಕಗಳು ಮುಚ್ಚಿದ್ದು ಸದ್ಯ ಕೋಟ್ಯಂತರ ರೂಪಾಯಿ ದುಡ್ಡು ಹಾಕಿರುವ ಐಸ್‌ಪ್ಲಾಂಟ್‌ ಮಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.
ಕರ್ನಾಟಕ ಕರಾವಳಿಯಲ್ಲಿ ಒಟ್ಟು 200 ರಷ್ಟು ಮಂಜುಗಡ್ಡೆ ತಯಾರಿಕಾ ಘಟಕಗಳಿವೆ, ಅದರಲ್ಲಿ ಅತೀ ಹೆಚ್ಚು ಇರುವುದು ಉಡುಪಿ ಜಿಲ್ಲೆಯಲ್ಲಿ. ಇಲ್ಲಿ 90 ಐಸ್‌ಪ್ಲಾಂಟ್‌ಗಳಿದ್ದರೆ ದಕ್ಷಿಣ ಕನ್ನಡದಲ್ಲಿ 70, ಉತ್ತರ ಕನ್ನಡದಲ್ಲಿ 40 ಪ್ಲಾಂಟ್‌ಗಳಿವೆ.

ವಿದ್ಯುತ್‌ ಬಿಲ್‌ ಬಾಕಿ
ಈ ಬಾರಿ ಆರಂಭದಿಂದಲೂ ಚಂಡಮಾರುತ, ಮೀನಿನ ಕ್ಷಾಮ ಪ್ರಾಕೃತಿಕ ವೈಪರೀತ್ಯಗಳಿಂದಾಗಿ ನಿರಂತರವಾಗಿ ಮೀನುಗಾರಿಕೆಯೇ ನಡೆಸಲಾಗದೇ ಹಲವಾರು ಬೋಟುಗಳು ಬಂದರಿನಲ್ಲೇ ಲಂಗರು ಹಾಕುವ ಪರಿಸ್ಥಿತಿ ಎದುರಾಗಿತ್ತು. ಮೀನುಗಾರಿಕೆ ಕುಂಠಿತವಾದ್ದರಿಂದ ಬೋಟ್‌ಗಳಿಗೆ ಮಂಜುಗಡ್ಡೆ ಪೂರೈಕೆಯಾಗದೆ ಶೇ. 99 ಐಸ್‌ಪ್ಲಾಂಟ್‌ ಮಾಲಕರು ನಷ್ಟವನ್ನು ಅನುಭವಿಸಿದ್ದಾರೆ. ಪ್ರಸ್ತುತ 6ರಿಂದ 10ಲಕ್ಷ ರೂ. ವಿದ್ಯುತ್‌ ಬಿಲ್‌ ಬಾಕಿಯಾಗಿದ್ದು ಪಾವತಿಸಲು ಸಾಧ್ಯವಾಗದೇ ಒದ್ದಾಟ ನಡೆಸುತ್ತಿದ್ದಾರೆ. ಪ್ರಸ್ತುತ ಸ್ಥಾವರವನ್ನು ಬಂದ್‌ ಇಟ್ಟರೂ ತಿಂಗಳ ಮಿನಿಮಮ್‌ ಬಿಲ್‌ 30ರಿಂದ 40ಸಾವಿರ ರೂಪಾಯಿ ಭರಿಸಬೇಕಾಗಿ ಬರುತ್ತದೆ.

ಕಾರ್ಮಿಕರು ಸ್ಥಾವರದಲ್ಲೇ ಲಾಕ್‌ಡೌನ್‌
ಪ್ರತಿಯೊಂದು ಮಂಜುಗಡ್ಡೆ ಸ್ಥಾವರಗಳಲ್ಲಿ 10ರಿಂದ 15 ಮಂದಿ ಕಾರ್ಮಿಕರು ಇದ್ದಾರೆ. ಪ್ರಸ್ತುತ ಶೇ.90ರಷ್ಟು ಸ್ಥಾವರಗಳಲ್ಲಿ ಇರುವುದು ಅಸ್ಸಾಂ ರಾಜ್ಯದ ಕಾರ್ಮಿಕರು. ಲಾಕ್‌ಡೌನ್‌ ನಿಂದಾಗಿ ಅವರನ್ನು ಊರಿಗೆ ಕಳುಹಿಸಲು ಸರಿಯಾದ ವ್ಯವಸ್ಥೆ ಇಲ್ಲದೆ ಪ್ಲಾಂಟಿನಲ್ಲೇ ಉಳಿಸಿಕೊಳ್ಳಲಾಗಿದೆ. ಪ್ರತಿನಿತ್ಯ ಅವರಿಗೆ ಬೇಕಾದ ಎರಡು ಹೊತ್ತಿನ ಊಟ ಹಾಗೂ ಇನ್ನಿತರ ವ್ಯವಸ್ಥೆಯನ್ನು ಪ್ಲಾಂಟ್‌ ಮಾಲಕರೇ ನೀಡುತ್ತಿರುವುದು ಮತ್ತಷ್ಟು ಹೊರೆಯಾಗಿದೆ. ಮಂಜುಗಡ್ಡೆ ಸ್ಥಾವರ ಇನ್ನು ಕನಿಷ್ಠ 5 ತಿಂಗಳು ಮುಚ್ಚ ಬೇಕಾಗುವುದರಿಂದ ತಯಾರಿಕಾ ಘಟಕದ ಎಲ್ಲ ಮೆಷನರಿಗಳು, ಕ್ಯಾನ್‌ಗಳು ಉಪ್ಪು ನೀರಿನ ಅಂಶದಿಂದಾಗಿ ತುಕ್ಕು ಹಿಡಿದು ಸಂಪೂರ್ಣ ಹಾನಿಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಲ್ಪೆ ಮಂಜುಗಡ್ಡೆ ಮಾಲಕರ ಸಂಘದ ಉಪಾಧ್ಯಕ್ಷ ಹರೀಶ್‌ ಶ್ರೀಯಾನ್‌ ಅವರು.

ಬಾಕಿ ಹಣ ಕೇಳುವಂತಿಲ್ಲ
ಈ ಬಾರಿ ಮೀನಿನ ಕ್ಷಾಮದಿಂದ ಹೆಚ್ಚಿನ ಪ್ಲಾಂಟ್‌ಗಳಿಗೆ ವ್ಯವಹಾರಗಳು ನಡೆಸಲು ಸಾಧ್ಯವಾಗದೇ ಕೆಲವು ತಿಂಗಳ ಮೊದಲೇ ಸ್ಥಗಿತಗೊಳಿಸಬೇಕಾದ ಪ್ರಸಂಗ ಎದುರಾಗಿತ್ತು. ಮೀನುಗಾರಿಕೆ ನಷ್ಟದಿಂದಾಗಿ ಬೋಟ್‌ ಮಾಲಕರಿಂದಲೂ ಹಣ ಬಾಕಿ ಉಳಿದಿದ್ದು, ಈಗಿನ ಪರಿಸ್ಥಿತಿಯಲ್ಲಿ ಅವರಿಂದ ಬಾಕಿ ಮೊತ್ತವನ್ನು ಕೇಳುವ ಹಾಗಿಲ್ಲ.
– ರಾಜೇಂದ್ರ ಸುವರ್ಣ, ಅಧ್ಯಕ್ಷರು
ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲಕರ ಸಂಘ

Advertisement

ಬಡ್ಡಿ ಮನ್ನಾ ಮಾಡಿ
ಮಾರ್ಚ್‌ನಿಂದ ಜುಲೈವರೆಗಿನ 5 ತಿಂಗಳ ಮಿನಿಮಮ್‌ ಬಿಲ್‌ ಮತ್ತು ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು. ಬಾಕಿ ಇರುವ ವಿದ್ಯುತ್‌ ಬಿಲ್‌ ಪಾವತಿಗೆ ಕನಿಷ್ಠ 4 ಕಂತುಗಳನ್ನು ನೀಡುವಂತೆ ಈಗಾಗಲೇ ಮೀನುಗಾರಿಕೆ ಸಚಿವರಲ್ಲಿ ಮನವಿ ಮಾಡಿದ್ದೇವೆ. ಲಾಕ್‌ಡೌನ್‌ ಮುಗಿದ ಬಳಿಕ ಇಲಾಖೆಯ ಮೂಲಕ ಪರ್ಯಾಯ ವ್ಯವಸ್ಥೆಗೆ ಪ್ರಯತ್ನ ಮಾಡುವ ಭರವಸೆ ಸಚಿವರು ನೀಡಿದ್ದಾರೆ.
– ಉದಯ ಕುಮಾರ್‌, ಪ್ರ. ಕಾರ್ಯದರ್ಶಿ,
ಕರ್ನಾಟಕ ಕರಾವಳಿ ಮಂಜುಗಡ್ಡೆ ಮತ್ತು ಶೈತ್ಯಾಗಾರ ಮಾಲಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next