Advertisement

ವಿದ್ಯುತ್‌ ದರ ಏರಿಕೆ ನಿರ್ಧಾರ ಕೈಬಿಡಿ

10:20 PM Nov 06, 2020 | sudhir |

ಗದಗ: ವಿದ್ಯುತ್‌ ದರ ಹೆಚ್ಚಳ ನಿರ್ಧಾರ ಕೈಗಾರಿಕೆಗಳಿಗೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ವಿದ್ಯುತ್‌ ದರ ಏರಿಕೆ ನಿರ್ಧಾರವನ್ನು ಕೈಬಿಡಬೇಕೆಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾ ಸಂಸ್ಥೆಯ ಅಧ್ಯಕ್ಷ ಪರಿಕಲ್‌ ಎಂ. ಸುಂದರ್‌ ಒತ್ತಾಯಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕೊರೊನಾದಿಂದ
ಕೈಗಾರಿಕೆಗಳು ಸ್ತಬ್ಧಗೊಂಡಿದ್ದು, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ ಎಂದರು.

Advertisement

ಕೊರೊನಾ ಲಾಕ್‌ಡೌನ್‌ ಬಳಿಕ ಕೇವಲ ಶೇ.40-60 ಕೈಗಾರಿಕೆಗಳು ಆರಂಭವಾಗುತ್ತಿವೆ. ಇನ್ನುಳಿದಂತೆ ಶೇ.30 ರಷ್ಟು ಕೈಗಾರಿಕೆಗಳು ಆರಂಭಗೊಂಡಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯುತ್‌ ದರ ಹೆಚ್ಚಳ ಮಾಡಿದ್ದು, ಸರಿಯಲ್ಲ. ಈ ಬಗ್ಗೆ ಶೀಘ್ರವೇ
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ ಪೈಕಿ ಶೇ.50 ರಷ್ಟು ಮಾತ್ರ ರಾಜ್ಯಕ್ಕೆ ಬಳಕೆಯಾಗುತ್ತಿದೆ. ಇನ್ನುಳಿದ ವಿದ್ಯುತ್‌ ಅನ್ನು ನೆರೆ ರಾಜ್ಯಗಳಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದೆ. ಇದರ ಬದಲಾಗಿ ಅದೇ ದರದಲ್ಲಿ ರಾಜ್ಯದ ಕೈಗಾರಿಕೆಗಳಿಗೆ ನೀಡಿದರೆ
ಇನ್ನಷ್ಟು ಅನುಕೂಲ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿದರು.

ಮೂಲ ಸೌಕರ್ಯಗಳ ಕೊರತೆ ಸೇರಿದಂತೆ ಮತ್ತಿತರೆ ಕಾರಣಗಳಿಂದಾಗಿ ಗದಗ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕೆ ಮತ್ತು
ವಾಣಿಜ್ಯೋದ್ಯಮ ಬೆಳವಣಿಗೆ ಕಂಡಿಲ್ಲ. ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಕೊಪ್ಪಳ ಮತ್ತು ಬಾಗಲಕೋಟ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ. ಆದರೆ, ಕೈಗಾರಿಕಾ ಕ್ಷೇತ್ರದಲ್ಲಿ ಗದಗ ಜಿಲ್ಲೆ ಸಾಕಷ್ಟು ಹಿಂದುಳಿದಿದೆ. ಆಯಿಲ್‌ ಮಿಲ್‌, ರವಾಮಿಲ್‌, ಹತ್ತಿ ಮಿಲ್‌, ಜಿನ್ನಿಂಗ್‌, ನೂಲಿನ ಗಿರಣಿ ಸಹಿತ ಅನೇಕ ಉದ್ಯಮಗಳು ಜಿಲ್ಲೆಯಲ್ಲಿದ್ದವು. ಆದರೆ
ಅವುಗಳಲ್ಲಿ ಬಹುತೇಕ ನಶಿಸುತ್ತಿವೆ. ಹೀಗಾಗಿ, ಹೊಸ ಉದ್ಯಮಗಳ ಸ್ಥಾಪನೆ ಹಾಗೂ ಪುನಶ್ಚೇತನಕ್ಕೆ ಒತ್ತು ನೀಡಬೇಕಿದೆ ಎಂದರು.

ಉದ್ಯಮ ಸ್ಥಾಪನೆಗೆ ಗದಗ ಜಿಲ್ಲೆಗೆ ಕೆಎಸ್‌ಎಫ್‌ಸಿಗೆ ಕೇವಲ 10 ಕೋಟಿ ರೂ. ನೀಡಿದ್ದು, ಇದನ್ನು ಕನಿಷ್ಟ 100 ಕೋಟಿಗೆ ಹೆಚ್ಚಿಸಬೇಕು. ಬೆಟಗೇರಿ ನರಸಾಪೂರ ಕೈಗಾರಿಕಾ ಪ್ರದೇಶದಲ್ಲಿ ಹೊಸ ಉದ್ಯಮ ಆರಂಭಿಸಲು ಬೇಡಿಕೆಯ 600 ಎಕರೆ ಪೈಕಿ ಕೇವಲ 214 ಎಕರೆ ಭೂಸ್ವಾ ಧೀನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಕೂಡ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಶೀಘ್ರದಲ್ಲಿ
ಇದನ್ನು ಕಾರ್ಯರೂಪಕ್ಕೆ ತರಬೇಕು. ಕೈಗಾರಿಕೆಗೆ 67 ಎಚ್‌ಪಿ ವಿದ್ಯುತ್‌ ಸಂಪರ್ಕಕ್ಕೆ ರಾಜ್ಯದಲ್ಲಿ ಎಲ್‌ಟಿ ಸಂಪರ್ಕ ಪಡೆಯಬೇಕು. ಇದನ್ನು ನೆರೆಯ ಮಹಾರಾಷ್ಟ್ರ ಮಾದರಿಯಲ್ಲಿ ಕನಿಷ್ಟ 100 ಎಚ್‌ಪಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

Advertisement

ಜಿಲ್ಲೆಯಲ್ಲಿ ಜಿಟಿಟಿಸಿ ಸೆಂಟರ್‌ ಸ್ಥಾಪನೆ, ವಿಶೇಷ ಆರ್ಥಿಕ ವಲಯ ಸ್ಥಾಪನೆ ಮಾಡುವ ಮೂಲಕ ಈ ಭಾಗ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು. ಇದರೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಎಂಎಸ್‌ ಎಂಇ ವ್ಯಾಪ್ತಿಯ ಉದ್ಯಮಗಳಿಗೆ ಮೂಲ
ಸೌಲಭ್ಯ, ಬಿಸಿಯೂಟ ಕಾರ್ಯಕ್ರಮಕ್ಕೆ ಬೇಕಾದ ಸರಕುಗಳನ್ನು ವ್ಯಾಪಾರಸ್ಥರ ಬದಲಾಗಿ ಸರ್ಕಾರ ನೇರವಾಗಿ ಸಣ್ಣ ಉದ್ಯಮಗಳಿಂದ ಖರೀದಿಸಬೇಕು. ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ನೀಡುವ ಶೇ.4 ರ ಬಡ್ಡಿ ದರದ ಸಾಲ ಇತರೆಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ಸಿಗುವಂತಾಗಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಆನಂದ ಎಲ್‌. ಪೊತ್ನಿಸ್‌, ಹಾವೇರಿ ಜಿಲ್ಲಾ ಚೇಂಬರ್‌ ನಿರ್ದೇಶಕ ಪಿ.ಡಿ.ಶಿರೂರ, ವೀರೇಶ ಕೂಗು, ಆರ್‌.ಬಿ. ದಾನಪ್ಪಗೌಡ್ರ, ಪಿ.ಎಚ್‌. ರಾಜಪುರೋಹಿತ, ಈಶಣ್ಣ ಮುನವಳ್ಳಿ, ಚಂದ್ರು
ಬಾಳಿಹಳ್ಳಿಮಠ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next