ಬಳ್ಳಾರಿ: ನಗರದ ವಿವಿಧ ಬಡಾವಣೆ, ಪ್ರಮುಖ ರಸ್ತೆ ಬದಿಗಳಲ್ಲಿ ಅಳವಡಿಸಲಾಗಿರುವ ವಿದ್ಯುತ್ ಪರಿವರ್ತಕಗಳು ಕೈಗೆಟುಕುವಂತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಇದರಿಂದ ಪಾದಚಾರಿಗಳು ಅಂಗೈಯಲ್ಲಿ ಜೀವ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹಳೆ ಬಸ್ ನಿಲ್ದಾಣದ ಅಂಡರ್ ಬ್ರಿಡ್ಜ್ ಬಳಿ, ಮಿಲ್ಲರ್ ಪೇಟೆ, ಕಮ್ಮಿಂಗ್ ರಸ್ತೆ, ಕಣೇಕಲ್ ಬಸ್ ನಿಲ್ದಾಣ ಸೇರಿ ನಗರದ ವಿವಿಧ ಕಾಲೋನಿ, ರಸ್ತೆಗಳ ಬದಿಯಲ್ಲಿ ಜೆಸ್ಕಾಂ ಹಲವು ವರ್ಷಗಳ ಹಿಂದೆ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿದೆ. ದಶಕದ ಹಿಂದೆ ಅಳವಡಿಸಿದ್ದ ಈ ವಿದ್ಯುತ್ ಪರಿವರ್ತಕಗಳು ಆಗ ಎತ್ತರದಲ್ಲಿದ್ದರೂ, ಆಗಾಗ ನವೀಕರಣಗೊಳ್ಳುತ್ತಿರುವ ರಸ್ತೆಗಳು ಎತ್ತರವಾಗುತ್ತಿದ್ದಂತೆ ವಿದ್ಯುತ್ ಪರಿವರ್ತಕಗಳು ಕೈಗೆಟುವಂತಾಗಿವೆ. ಇದರಿಂದ ಅಪಘಾತಕ್ಕೆ ಆಹ್ವಾನ ನೀಡುವಂತಾಗಿದೆ. ಮೇಲಾಗಿ ವಿದ್ಯುತ್ ಪರಿವರ್ತಕ ಸುತ್ತಲೂ ನಿರ್ಮಿಸಲಾಗಿದ್ದ ತಂತಿಬೇಲಿ, ಗೇಟ್‌ಗಳು ಕಿತ್ತುಹೋಗಿವೆ. ಇದರಿಂದ ನಿತ್ಯ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ವಿವಿಧ ಕಾಲೋನಿಗಳಲ್ಲಿ ವಿದ್ಯುತ್ ಕಂಬಗಳಲ್ಲಿ ತಂತಿಗಳು ಜೋತು ಬಿದ್ದಿದ್ದು, ಅಪಾಯಕ್ಕೆ ಮುನ್ಸೂಚನೆ ನೀಡುತ್ತಿವೆ. ಚಿಕ್ಕ-ಚಿಕ್ಕ ಮಕ್ಕಳು ಈ ಕಂಬದ ಸುತ್ತಲು ಆಟವಾಡುತ್ತಿರುತ್ತಾರೆ.
ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟಬುತ್ತಿ. ರಸ್ತೆ ಪಕ್ಕದಲ್ಲಿನ ಪರಿವರ್ತಕಗಳಿಂದ ಸಂಚರಿಸುವ ವಾಹನ ಸವಾರರು ಭಯದಿಂದ ಓಡಾಡುವಂತಾಗಿದೆ. ರಸ್ತೆ ಬದಿಯ ಫುಟ್‌ಫಾತ್ ಪಕ್ಕದಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿದ್ದು, ಪಕ್ಕದಲ್ಲಿಯೇ ಸಣ್ಣ ಪುಟ್ಟ ಚಿಲ್ಲರೆ ವ್ಯಾಪಾರ ಅಂಗಡಿಗಳನ್ನು ಸ್ಥಾಪಿಸಲಾಗಿದೆ.
ಇದರಿಂದ ವಿದ್ಯತ್ ಪರಿವರ್ತಕಗಳಲ್ಲಿ ಆಗಾಗ ಉಂಟಾಗುವ ಬೆಂಕಿ ಕಿಡಿಯಿಂದ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ. ಪರಿವರ್ತಕ ಅಳವಡಿಸಿದ ಸ್ಥಳದಲ್ಲಿಯೇ ಆಕಳು, ಹಂದಿ, ನಾಯಿಗಳು ತಮ್ಮ ವಾಸ ಸ್ಥಾನವನ್ನಾಗಿಸಿಕೊಂಡಿದ್ದು, ಅನೇಕ ಬಾರಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಉದಾಹರಣೆಗಳು ಸಹ ಸಾಕಷ್ಟು ನಡೆದಿವೆ. ಬಹುತೇಕ ಕಡೆಗಳಲ್ಲಿ ನಿರ್ಮಿಸಿದ ಟಿಸಿ, ದುರಸ್ತಿಯಲ್ಲಿರುವ ವಿದ್ಯುತ್ ಕಂಬಗಳಿಂದ ಇಂದಲ್ಲಾ ನಾಳೆ ಅಪಾಯ ಗ್ಯಾರಂಟಿ. ನಗರದ ಬಹುತೇಕ ಕಡೆಗಳಲ್ಲಿ ನಿರ್ಮಿಸಿದ ವಿದ್ಯುತ್ ಪರಿವರ್ತಕ ಸ್ಥಳಗಳನ್ನು ಸುತ್ತಲಿನ ನಿವಾಸಿಗಳು ಕಸ ಸಂಗ್ರಹಣದ ತೊಟ್ಟಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಪೇಪರ್, ಪ್ಲಾಸ್ಟಿಕ್‌ಗಳನ್ನು ಟ್ರಾನ್ಸ್ ಫಾರ್ಮರ್ ಇರುವ ಕಡೆಗಳಲ್ಲಿ ಹಾಕುತ್ತಿದ್ದು, ವಿದ್ಯುತ್ ತಂತಿಯಿಂದ ಕೆಲವೊಮ್ಮೆ ಉಂಟಾಗುವ ಕಿಡಿಗೆ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆಗಳು ಸಹ ಹೆಚ್ಚಿವೆ. ವಿಪರ್ಯಾಸವೆಂದರೆ ಅಲ್ಲಿಯೇ ಜನತೆ ತಮ್ಮ ದಿನಬಳಕೆ ಮಾಡಿದ ನೀರನ್ನು ಸಹ ಹಾಕುತ್ತಿರುವುದು ವಿಪರ್ಯಾಸ. ಇದಕ್ಕೆ ಕಾರಣ ಪರಿವರ್ತಕ ಸುತ್ತಲೂ ರಕ್ಷಣೆ ಗೋಡೆ, ತಂತಿ ಬೇಲೆ ಅಳವಡಿಸದಿರುವುದೇ ಆಗಿದೆ. ನಗರದ ವಿವಿಧ ಕಾಲೋನಿಗಳಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳಿಗೆ ಮನೆ, ವ್ಯಾಪಾರ ಮಳಿಗೆ, ಟಿವಿ ಕೇಬಲ್ ಸೇರಿ ವಿವಿಧ ವೈರ್‌ಗಳನ್ನು ಕಂಬ ಕಾಣಸಿಗದಷ್ಟು ಜೋತು ಬಿಡಲಾಗಿದೆ. ಇದರಿಂದ ಅಪಾಯಕ್ಕೆ ಮುನ್ಸೂಚನೆ ನೀಡಿವೆ. ಅಲ್ಲದೆ, ಮಳೆ, ಗಾಳಿ ಸಂದರ್ಭದಲ್ಲಿ ಕಂಬದಲ್ಲಿನ ವೈರ್‌ಗಳು ಒಂದೊಕ್ಕೊಂದು ತಾಕಿ ವಿದ್ಯುತ್ ಶಾರ್ಟ್ ಆಗುವ ಸಂಭವವಿದೆ. ಕೆಲವೊಮ್ಮ ಬಾರಿ ಶಾರ್ಟ್ ಸರ್ಕ್ನೂಟ್ ಆಗಿ ಅಗ್ನಿ ಅವಘಡಗಳು ಸಹ ನಡೆದಿವೆ. ಆದರೆ ಈ ಬಗ್ಗೆ ಮಾತ್ರ ಜೆಸ್ಕಾಂ ಅಧಿಕಾರಿಗಳು ಕಂಡು ಕಾಣದಂತಿರುವುದು ದುರದೃಷ್ಟಕರ ಸಂಗತಿ.
ವೆಂಕೋಬಿ ಸಂಗನಕಲ್ಲು