ರಬಕವಿ-ಬನಹಟ್ಟಿ : ಶಾಲೆಯ ಮಾಳಿಗೆಯಲ್ಲಿ ನಿಂತ ನೀರನ್ನು ಸರಿಸಲು ಹೋದ ವಿದ್ಯಾರ್ಥಿಯೊಬ್ಬ ವಿದ್ಯುತ್ ತಂತಿ ತಗುಲಿ ಕೆಳಗೆ ಬಿದ್ದಿರುವ ಘಟನೆ ಬನಹಟ್ಟಿಯ ಲಕ್ಷ್ಮೀ ನಗರದಲ್ಲಿರುವ ಸರಕಾರಿ ಮಾದರಿ ಶಾಲೆಯ ಶಾಲೆಯಲ್ಲಿ ನಡೆದಿದೆ.
ಆಕಾಶ ಶಿವಪ್ಪ ಮಾಳಿ (12 ) ಮಾಳಿಗೆ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡಿರುವ ವಿದ್ಯಾರ್ಥಿ.
ಕಳೆದ ಎರಡು ಮೂರು ದಿನಗಳಿಂದ ಸುರಿದ ಬಾರಿ ಮಳೆಯಿಂದಾಗಿ ಶಾಲಾ ಕಟ್ಟಡದ ಮೇಲೆ ನೀರು ನಿಂತು ಸೋರುತ್ತಿರುವುದರಿಂದ ವಿದ್ಯಾರ್ಥಿಗಳು ಮಾಳಿಗೆ ಮೇಲೆ ಹತ್ತಿ ಸ್ವಚ್ಛ ಮಾಡುವ ಸಂದರ್ಭದಲ್ಲಿ ಅಲ್ಲಿಯೇ ಹಾಯ್ದು ಹೋಗಿದ್ದ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಮೇಲಿನಿಂದ ಕೆಳಗೆ ಬಿದ್ದು ಮೈತುಂಬಾ ಗಾಯವಾದ ಪರಿಣಾಮ ಬನಹಟ್ಟಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವಿದ್ಯಾರ್ಥಿಗೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಅಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸವದಿ ಭೇಟಿ : ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಾಸಕ ಸಿದ್ದು ಸವದಿ ಸ್ಥಳ ವೀಕ್ಷಿಸಿ ಕೆಇಬಿ ಅಧಿಕಾರಿಗಳನ್ನು ಕರೆಯಿಸಿ ಅಲ್ಲಿನ ಕಂಬ ಹಾಗೂ ಹಾಯ್ದು ಹೋಗಿರುವ ವಿದ್ಯುತ್ ತಂತಿಗನ್ನು ಎತ್ತರಿಸಿ ಅವುಗಳಿಗೆ ಪೈಪ್ ಅಳವಡಸಿ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಹೇಳಿದರು.
ಅದೇ ರೀತಿ ಬನಹಟ್ಟಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯನ್ನು ಶಾಸಕ ಸಿದ್ದು ಸವದಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ವೈದ್ಯರ ಜೊತೆ ವಿದ್ಯಾರ್ಥಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಹಾಗೂ ವಿದ್ಯಾರ್ಥಿ ಕುಟುಂಬದವರಿಗೆ ಆಸ್ಪತ್ರೆ ಖರ್ಚಿಗಾಗಿ ಸಹಾಯ ಮಾಡಿ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ರಮೇಶ ಮಂಡಿ, ಗೋವಿಂದ ಡಾಗಾ, ಶ್ರೀಶೈಲ ಶೀಲವಂತ, ಹೆಸ್ಕಾಂ ಅಧಿಕಾರಿಗಳಾದ ಎಸ್. ಎಂ. ಧಡೂತಿ, ಎಸ್. ಜಿ. ಕಲಕಂಬ ಸೇರಿದಂತೆ ಎಸ್‌ಡಿಎಂಸಿ ಅಧ್ಯಕ್ಷರು, ಶಿಕ್ಷಕರು ಇದ್ದರು.