ಬೆಂಗಳೂರು: ವಿದ್ಯುತ್ ದರ ಪ್ರತಿ ಯೂನಿಟ್ ಗೆ ಸರಾಸರಿ 35 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ ) ಸೋಮವಾರ ಆದೇಶ ಹೊರಡಿಸಿದೆ.
ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳಿಗೂ (ಎಸ್ಕಾಂ) ಸರಾಸರಿ ದರ ಹೆಚ್ಚಳ ಮಾಡಿ ಹಂಗಾಮಿ ಅಧ್ಯಕ್ಷ ಮಂಜುನಾಥ್ ಸೋಮವಾರ ಆದೇಶ ಹೊರಡಿಸಿದರು.
ಎಲ್ಲ ಎಸ್ಕಾಂಗಳೂ ಸರಾಸರಿ 1.85 ರೂ. ಹೆಚ್ಚಳಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದವು. ಏಪ್ರಿಲ್ 1 ರಿಂದಲೇ ಪ್ರಸ್ತಾವಿತ ದರ ಜಾರಿಯಾಗಲಿದೆ.
2022-23 ರಲ್ಲಿ ಉಂಟಾಗುವ ಆದಾಯ ಕೊರತೆಯ ಮೊತ್ತ ರೂ .2159.48 ಕೋಟಿಗಳನ್ನು ಮರುಪಡೆಯಲು ದರ ಹೆಚ್ಚಳ ಅವಶ್ಯಕವಾಗಿದ್ದು, 2020-21 ರ ಕೊರತೆಯ ಮೊತ್ತ ರೂ .1700.49 ಕೋಟಿಗಳನ್ನು ಒಳಗೊಂಡಿರುತ್ತದೆ ಎಂದು ವಿದ್ಯುಚ್ಛಕ್ತಿದರ ಏರಿಕೆಗೆ ಕಾರಣಗಳನ್ನು ನೀಡಲಾಗಿದೆ.
ಕಂಪನಿಗಳ ಕ್ರೋಢೀಕೃತ ಆದಾಯ ಕೊರತೆಯು ರೂ .3143.16 ಕೋಟಿ ರೂ, 2020-21ರ ನಿವ್ವಳ ಕೊರತೆಯು ರೂ .1700.49 ಕೋಟಿಗಳಾಗಿರುತ್ತದೆ . ಸದರಿ ಮೊತ್ತವನ್ನು ಆರ್ಥಿಕ ವರ್ಷ 2022-23 ರ ವಾರ್ಷಿಕ ಕಂದಾಯ ಬೇಡಿಕೆ ( ARR ) ಯಲ್ಲಿ ಮರುಪಡೆಯಲು ಗಣನೆಗೆ ತೆಗೆದುಕೊಳ್ಳಲಾಗಿರುತ್ತದೆ ಎಂದು ಕೆಇಆರ್ ಸಿ ಹೇಳಿದೆ.
ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳದ ಹೊರೆಯನ್ನು ತಪ್ಪಿಸಲು ಆಯೋಗವು ರೂ 1442.70 ಕೋಟಿಗಳ ನಿಯಂತ್ರಕ ಸ್ವತ್ತನ್ನು ರಚಿಸಿ , ಪರಿಷ್ಕೃತ ದರವನ್ನು ದಿನಾಂಕ 01.11.2020 ರಿಂದ ಅನ್ವಯಗೊಳಿಸಿರುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ವಿದ್ಯುಚ್ಛಕ್ತಿಯ ಮಾರಾಟವು 7228.65MU ಗಳಷ್ಟು ಗಣನೀಯವಾಗಿ ಇಳಿಕೆಯಾಗಿರುತ್ತದೆ . ಇದರ ಪರಿಣಾಮವಾಗಿ ಅನುಮೋದಿಸಿದ್ದ ಮೊತ್ತಕ್ಕಿಂತ ರೂ .6182.84 ಕೋಟಿಗಳಷ್ಟು ಆದಾಯದ ಕೊರತೆಯುಂಟಾಗಿದೆ ಎಂದು ಕೆಇಆರ್ ಸಿ ಹೇಳಿದೆ.