Advertisement

ಕರೆಂಟ್‌ ಶಾಕ್‌! ಪ್ರತೀ ಯೂನಿಟ್‌ಗೆ 30 ಪೈಸೆ ದರ ಹೆಚ್ಚಳ : ಎಪ್ರಿಲ್‌ ನಿಂದಲೇ ಪೂರ್ವಾನ್ವಯ

02:13 AM Jun 10, 2021 | Team Udayavani |

ಬೆಂಗಳೂರು : ಕೊರೊನಾ ಹಾವಳಿ ಮತ್ತು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಜನರಿಗೆ ಈಗ ಮತ್ತೂಂದು “ಶಾಕ್‌’! ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಮೆಸ್ಕಾಂ ಸಹಿತ ಎಲ್ಲ ಎಸ್ಕಾಂಗಳ ಬಹುತೇಕ ಎಲ್ಲ ಪ್ರಕಾರದ ಗ್ರಾಹಕರಿಗೆ ಪ್ರತಿ ಯೂನಿಟ್‌ ವಿದ್ಯುತ್‌ಗೆ ಸರಾಸರಿ 30 ಪೈಸೆ ಹೆಚ್ಚಳ ಮಾಡಿದೆ. ಈ ಪರಿಷ್ಕೃತ ದರವು
ಎ. 1ರಿಂದಲೇ ಪೂರ್ವಾನ್ವಯ ಆಗುವಂತೆ ಬುಧವಾರ ಆದೇಶ ಹೊರಡಿಸಿದ್ದು, ಎಪ್ರಿಲ್‌, ಮೇ ತಿಂಗಳ ಪರಿಷ್ಕರಣೆ ಬಾಕಿಯನ್ನು ಯಾವುದೇ ಬಡ್ಡಿ ವಿಧಿಸದೆ ಬರುವ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ವಸೂಲು ಮಾಡುವಂತೆಯೂ ಸೂಚಿಸಿದೆ.
ಇದರೊಂದಿಗೆ ಸರಾಸರಿ ಪ್ರತೀ ಯೂನಿಟ್‌ಗೆ ಶೇ. 3.84 ರಷ್ಟು ಹೆಚ್ಚಳ ಮಾಡಿದಂತಾಗಿದೆ. ಇದರಿಂದ ಬೆಸ್ಕಾಂ ವ್ಯಾಪ್ತಿಯಲ್ಲಿ ನಗರ ಪ್ರದೇಶದ ಗೃಹ ಬಳಕೆದಾರರಿಗೆ ಮಾಸಿಕ 200 ಯೂನಿಟ್‌ ಬಳಕೆಗೆ ಪ್ರಸ್ತುತ 1,172 ರೂ. ಬಿಲ್‌ ಬರುತ್ತಿದ್ದರೆ, ಪರಿಷ್ಕೃತ ದರದ ಪ್ರಕಾರ 1,192 ರೂ. ಬರಲಿದೆ. ಇದರೊಂದಿಗೆ ನಿಗದಿತ ಶುಲ್ಕದಲ್ಲಿ 10ರಿಂದ 20 ರೂ. ವರೆಗೆ ಹೆಚ್ಚಳ ಮಾಡಲಾಗಿದೆ.
ವಿದ್ಯುತ್‌ ಸರಬರಾಜು ಕಂಪೆನಿಗಳು ಶೇ. 17.31ರಷ್ಟು ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಕಳೆದ ಬಾರಿ ಪ್ರತೀ ಯೂನಿಟ್‌ಗೆ 40 ಪೈಸೆ ಏರಿಕೆಗೆ ಆಯೋಗ ಅಸ್ತು ಎಂದಿತ್ತು. ಲಾಕ್‌ಡೌನ್‌ನಿಂದ ಉಂಟಾದ ಆರ್ಥಿಕ ಸಂಕಷ್ಟ ಹಾಗೂ ಪೆಟ್ರೋಲ್‌-ಡೀಸೆಲ್‌, ಅಗತ್ಯ ವಸ್ತು ಗಳ ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ ಹೊರೆ ಬೀಳುತ್ತಿದೆ.

Advertisement

ಎಷ್ಟು ಹೆಚ್ಚಳ?
ಗೃಹ ಬಳಕೆ ಪ್ರವರ್ಗದಲ್ಲಿ ಮೊದಲ ಹಂತವನ್ನು 0-30 ಯೂನಿಟ್‌ಗಳಿಂದ 0-50 ಯೂನಿಟ್‌ಗೆ ಹೆಚ್ಚಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯ ಮಹಾನಗರ ಪಾಲಿಕೆ ಮತ್ತು ಪುರಸಭೆ ಪ್ರದೇಶಗಳಲ್ಲಿ ಗೃಹಬಳಕೆ ಗ್ರಾಹಕರಿಗೆ ಮೊದಲ 50 ಯೂನಿಟ್‌ಗೆ 10 ಪೈಸೆ ಹೆಚ್ಚಳ ಮಾಡಲಾಗಿದ್ದು, ಉಳಿದ ಎಲ್ಲ ಹಂತಗಳಲ್ಲೂ ಇದೇ ಮಾದರಿಯಲ್ಲಿ ತಲಾ 10 ಪೈಸೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಬೆಸ್ಕಾಂ ವ್ಯಾಪ್ತಿಯ ಹೊರತಾದ ಗ್ರಾಮೀಣ ಪ್ರದೇಶದ ಗೃಹಬಳಕೆದಾರರಿಗೂ ಇದೇ ದರ ಅನ್ವಯ ಆಗಲಿದೆ. ಇತರ ಎಸ್ಕಾಂಗಳಲ್ಲೂ ಪ್ರತೀ ಸ್ಲಾéಬ್‌ಗಳಲ್ಲಿ ತಲಾ 10 ಪೈಸೆ ಪರಿಷ್ಕರಣೆ ಮಾಡಲಾಗಿದೆ.

ಮೂರನೇ ಬಾರಿಗೆ ಏರಿಕೆ!
ಕಳೆದ ಒಂದು ವರ್ಷದಲ್ಲಿ ಇದು ಮೂರನೇ ಬಾರಿಗೆ ಆಗುತ್ತಿರುವ ಏರಿಕೆ. ಮೊದಲಿಗೆ ಜೂನ್‌ನಲ್ಲಿಯೇ ಪ್ರತೀ ತ್ತೈಮಾಸಿಕದಲ್ಲಿ ಪರಿಷ್ಕರಿಸಲಾಗುವ ಇಂಧನ ಸರಿದೂಗಿಸುವ ವೆಚ್ಚದಡಿ ಪ್ರತಿ ಯೂನಿಟ್‌ ಗೆ 8ರಿಂದ 13 ಪೈಸೆ ಏರಿಸಲಾಗಿತ್ತು. ಬಳಿಕ ಎಪ್ರಿಲ್‌ ನಲ್ಲಿ ಮಾಡಬೇಕಾಗಿದ್ದ ದರ ಹೆಚ್ಚಳವನ್ನು ನವೆಂಬರ್‌ ನಲ್ಲಿ ಮಾಡಲಾಗಿತ್ತು. ಅಂದರೆ ಆಗ ಪ್ರತೀ ಯೂನಿಟ್‌ಗೆ
40 ಪೈಸೆಗಳಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಮೂರನೇ ಬಾರಿಗೆ ಪ್ರತಿ ಯೂನಿಟ್‌ಗೆ 30 ಪೈಸೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next