ಕಾಪು : ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ಶಂಕರಪುರ ಸಮೀಪದ ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಕಂಚಿನಕೆರೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಅರ್ಸಿಕಟ್ಟೆ ಕಂಚಿನಕೆರೆ ಬಳಿ ನಿವಾಸಿ ಜೋಸೆಫ್ ಲೋಬೋ ಅವರ ಪತ್ನಿ ನೀಮಾ ಜೋಸೆಫ್ ಲೋಬೋ ಅವರು ತನ್ನ ಮನೆಯ ಅಂಗಳದಲ್ಲಿ ಇರಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ.
ಮನೆಯವರ ಕಣ್ಣೆದುರೇ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವಂತೆಯೇ ಸಂಪುರ್ಣವಾಗಿ ಸುಟ್ಟು ಕರಕಲಾಗಿ ಹೋಗಿ ಬಿಟ್ಟಿದೆ.
ಬೆಂಕಿಯ ಕೆನ್ನಾಲಗೆಯ ತೀವ್ರತೆಯಿಂದಾಗಿ ಮನೆಯಂಗಳದಲ್ಲಿ ಗೂಡಿನಲ್ಲಿದ್ದ ಏಳು ಪಕ್ಷಿಗಳು ಬೆಂದು ಮೃತಪಟ್ಟಿದ್ದು ಮನೆಯ ಜಗಲಿಯಲ್ಲಿ ಇರಿಸಿದ್ದ ಕೃಷಿ ಯಂತ್ರ, ಪಂಪ್ ಸೆಟ್ ಸಹಿತ ವಿವಿಧ ಉಪಕರಣಗಳಿಗೂ ಹಾನಿಯುಂಟಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದು ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿಯುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಘಟನೆಯಿಂದಾಗಿ ಸುಮಾರು ಮೂರು ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಸೊತ್ತುಗಳು ನಷ್ಟ ಉಂಟಾಗಿದ್ದು ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಣ್ಣ ನೀರಾವರಿ ಇಲಾಖೆಯಿಂದ ದೊಡ್ಡ ಭ್ರಷ್ಟಾಚಾರ… ಸಾರ್ವಜನಿಕರ ಆರೋಪ