ಹೈದರಾಬಾದ್:ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಕ್ಕೆ ಬೆಂಕಿಹೊತ್ತಿಕೊಂಡಿರುವ ಘಟನೆ ನಡೆದಿದ್ದು ವರದಿಯಾಗಿತ್ತು. ಇದೀಗ ಅದಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು, ಹೈದರಾಬಾದ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗೆ ಚಾರ್ಜ್ ಮಾಡಲು ಪ್ಲಗ್ ಹಾಕಿದ ಸಂದರ್ಭದಲ್ಲಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡು ಒಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಕೃಷ್ಣಾ ನದಿ ತೆಪ್ಪ ದುರಂತ: ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರು ಶವವಾಗಿ ಪತ್ತೆ
ಹೈದರಾಬಾದ್ ನ ನಿಜಾಮಾಬಾದ್ ಜಿಲ್ಲೆಯ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, 80 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಪ್ಯೂರ್ ಇಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿಹೊತ್ತುಕೊಂಡು ಸ್ಫೋಟಗೊಂಡಿದ್ದು, ಇದು ಮೂರನೇಯ ಘಟನೆಯಾಗಿದೆ. ಈವರೆಗೆ ಒಂದು ಓಲಾ, ಒಕಿನಾವಾದ ಎರಡು, ಪ್ಯೂರ್ ಇವಿಯ ಮೂರು ಹಾಗೂ 20 ಜಿತೇಂದ್ರ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೆಂಕಿಹೊತ್ತಿಕೊಂಡು ಸ್ಫೋಟಗೊಂಡಿರುವ ಪ್ರಕರಣ ನಡೆದಿತ್ತು ಎಂದು ವರದಿ ವಿವರಿಸಿದೆ.
ಏಪ್ರಿಲ್ 20ರಂದು ಈ ಘಟನೆ ನಡೆದಿದ್ದು, ಎಲೆಕ್ಟ್ರಿಕ್ ವಾಹನದಲ್ಲಿರುವ ಬ್ಯಾಟರಿಯನ್ನು ತೆಗೆದು, ಮನೆಯ ಕೋಣೆಯಲ್ಲಿಟ್ಟು ಚಾರ್ಜ್ ಮಾಡಲು ಹೊರಟಿದ್ದರು. ಆಗ ಸ್ವಿಚ್ ಆನ್ ಮಾಡಿದ ತಕ್ಷಣವೇ ಸ್ಕೂಟರ್ ಸ್ಫೋಟಗೊಂಡಿತ್ತು. ಇದರ ಪರಿಣಾಮ ಕೋಣೆಯಲ್ಲಿ ಮಲಗಿದ್ದ ಮೂವರು ಗಾಯಗೊಂಡಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ನಿಜಾಮಾಬಾದ್ ನಗರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಪುತ್ರ ನೀಡಿರುವ ದೂರಿನ ಆಧಾರದ ಮೇಲೆ, ಎಲೆಕ್ಟ್ರಕ್ ವೆಹಿಕಲ್ ಗಳ ಕಂಪನಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.