ಅಜೆಕಾರು: ಕಾರ್ಕಳ ಪುರಸಭೆ ವ್ಯಾಪ್ತಿಯ ಭಾರತ್ ಬೀಡಿ ಕಾಲನಿಯಲ್ಲಿ ಮೆಸ್ಕಾಂ ಇಲಾಖೆಯವರು ನೀರು ಹರಿಯುವ ಚರಂಡಿಯ ನಡುವೆ ವಿದ್ಯುತ್ ಕಂಬ ಅಳವಡಿಸಿದ್ದು, ಇದೀಗ ಸ್ಥಳಿಯರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಕಾಲನಿಯಲ್ಲಿ ಹಳೆ ವಿದ್ಯುತ್ ಕಂಬದ ಹತ್ತಿರ ಕಟ್ಟಡ ನಿರ್ಮಾಣಗೊಂಡಿದೆ. ಆ ಕಟ್ಟಡಕ್ಕೆ ವಿದ್ಯುತ್ ಕಂಬ ತೀರ ಹತ್ತಿರದಲ್ಲಿದ್ದು ಅಪಾಯ ಸಂಭಂವಿಸುವ ಸಾಧ್ಯತೆಗಳನ್ನು ಮನಗಂಡ ಮೆಸ್ಕಾಂ ಇಲಾಖೆಯವರು ಈಗ ಹೊಸ ಕಂಬವನ್ನು ಅಳವಡಿಸಿದ್ದಾರೆ.
ಆದರೆ ಹೊಸ ಕಂಬವನ್ನು ಮಳೆಗಾಲದಲ್ಲಿ ಮಳೆ ನೀರು ಹರಿಯುವ ಚರಂಡಿಯ ನಡುವೆ ಅಳವಡಿಸಿರುವುದರಿಂದ ಆ ಪರಿಸರದ ಮನೆಗಳ ಒಳಗೆ ಮಳೆ ನೀರು ನುಗ್ಗುವ ಸಂಭವ ಹೆಚ್ಚಾಗಿದೆ.
ಮುಂದಿನ ದಿನಗಳಲ್ಲಿ ಸ್ಥಳಿಯರಿಗೆ ಸಮಸ್ಯೆಗಳನ್ನು ತಂದೊಡ್ಡುವ ಸಂಭಾವ್ಯ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಆದ್ದರಿಂದ ಈ ಕೂಡಲೇ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ವಿದ್ಯುತ್ ಕಂಬವನ್ನು ಚರಂಡಿಯಿಂದ ತೆಗೆದು ಬೇರೆಡೆ ಹಾಕುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.