Advertisement

ಬಿರುಗಾಳಿಗೆ ಉರುಳಿದ ವಿದ್ಯುತ್‌ ಕಂಬ-ಮರಗಳು

12:57 PM May 17, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ರವಿವಾರ ಸಂಜೆ ಗುಡುಗು ಮಿಂಚು, ಸಿಡಿಲಿನ ಸಮೇತ ಬಿರುಗಾಳಿ ಬೀಸಿ ಸುರಿದ ಅಕಾಲಿಕ ಮಳೆಯಿಂದ ಅನೇಕ ಗ್ರಾಮಗಳಲ್ಲಿ ವಿದ್ಯುತ್‌ ಕಂಬಗಳು ನೆಲಕ್ಕುರುಳಿದ್ದು, ರಸ್ತೆ ಬದಿಯಲ್ಲಿರುವ ಗಿಡಮರಗಳು ಉರುಳಿದ್ದರಿಂದ ವಾಹನ ಸಂಚಾರಕ್ಕೆ ಜನರು ಪರದಾಡುವಂತೆ ಆಗಿತ್ತು.

Advertisement

ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಪೋಲಕಪಳ್ಳಿ, ಅಣವಾರ, ಕನಕಪುರ, ಸೇರಿ ಬಡಾ ತಾಂಡಾ, ಭಿಕ್ಕುನಾಯಕ ತಾಂಡಾ, ಏತಬಾರಪುರ ತಾಂಡಾ, ಭಿಕ್ಕುನಾಯಕ ತಾಂಡಾ ಇನ್ನಿತರ ಗ್ರಾಮಗಳಲ್ಲಿ ಬಿರುಗಾಳಿ ಬೀಸಿದ ಪರಿಣಾಮವಾಗಿ ಗಿಡ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದ ಪರಿಣಾಮವಾಗಿ ತಾಲೂಕಿನಲ್ಲಿ ಒಟ್ಟು 40 ವಿದ್ಯುತ್‌ ಕಂಬಗಳು ಮುರಿದು ನೆಲಕ್ಕುರುಳಿವೆ. ಒಂದು ಟಿಸಿಯೂ ನೆಲಕ್ಕೆ ಬಿದ್ದಿದೆ. ಒಟ್ಟು 4ಲಕ್ಷ ರೂ.ಗಳಷ್ಟು ಅಕಾಲಿಕ ಮಳೆಯಿಂದ ಹಾನಿ ಸಂಭವಿಸಿದೆ ಎಂದು ಜೆಸ್ಕಾಂ ಉಪ-ವಿಭಾಗದ ಎಇಇ ಉಮೇಶ ಗೋಳಾ ತಿಳಿಸಿದ್ದಾರೆ.

ರವಿವಾರ ಸಂಜೆ ಬೀಸಿದ ಭಾರಿ ಬಿರುಗಾಳಿಯಿಂದ ವಿದ್ಯುತ್‌ ಕಂಬಗಳು ಹಾಗೂ ವಿದ್ಯುತ್‌ ತಂತಿಗಳು ಕಡಿದು ಬಿದ್ದು ಹಾನಿಯಾಗಿರುವುದರಿಂದ ಲೈನ್‌ ಮನ್‌ಗಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಶೀಘ್ರವೇ ವಿದ್ಯುತ್‌ ಪೂರೈಕೆ ಆಗಲಿದೆ ಎಂದು ಜೆಸ್ಕಾಂ ಎಇಇ ತಿಳಿಸಿದ್ದಾರೆ. ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಶಾಂತಕುಮಾರ ರೇವಣಸಿದ್ಧಪ್ಪ ಅವರಿಗೆ ಸೇರಿದ ತೊಗರಿ ಬೇಳೆ ಕಾರ್ಖಾನೆಯ (ದಾಲಮಿಲ್‌) ತಗಡುಗಳು ಗಾಳಿಗೆ ಹಾರಿ ಹೋಗಿವೆ. ಗೋಡೆ ಕುಸಿದು ಬಿದ್ದಿದೆ. ದಾಲ್‌ಮಿಲ್‌ದಲ್ಲಿದ್ದ ತೊಗರಿ ಬ್ಯಾಳಿ ಐದು ಕ್ವಿಂಟಲ್‌ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಒಟ್ಟು 6.35ಲಕ್ಷ ರೂ. ಹಾನಿಯಾಗಿದೆ ಎಂದು ಶಾಂತಕುಮಾರ ಹಸರಗುಂಡಗಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಐನಾಪುರ ಕಂದಾಯ ನಿರೀಕ್ಷಕ ಆರೀಫ ಮತ್ತು ಗ್ರಾಮಲೆಕ್ಕಿಗ ಕಾರ್ತಿಕ ಭೇಟಿ ನೀಡಿ ಪರಿಶೀಲಿಸಿ ಹಾನಿ ಬಗ್ಗೆ ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ. ಪೋಲಕಪಳ್ಳಿ, ಅಣವಾರ, ದೇಗಲಮಡಿ, ಐನೋಳಿ, ಪಟಪಳ್ಳಿ, ಕನಕಪುರ, ಚಿಮ್ಮನಚೋಡ, ಪರದಾರ ಮೋತಕಪಳ್ಳಿ, ಗಂಗನಪಳ್ಳಿ, ಗರಗಪಳ್ಳಿ, ಕರ್ಚಖೇಡ ಗ್ರಾಮಗಳಲ್ಲಿ ಬಾಳೆಗಿಡಗಳು ಹಾನಿಯಾಗಿವೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಕುಮಾರ ತಿಳಿಸಿದ್ದಾರೆ.

ಚಂದಾಪುರ, ಚಿಂಚೋಳಿ, ಕಲಭಾವಿ ತಾಂಡಾ, ಚಿಕ್ಕನಿಂಗದಳ್ಳಿ ತಾಂಡಾ, ಸೋಮಲಿಂಗದಳ್ಳಿ, ಮಿರಿಯಾಣ, ಕಲ್ಲೂರ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next