ವಡಗೇರಾ: ಪಟ್ಟಣದ ಮುಖ್ಯದ್ವಾರದಿಂದ ಸರಕಾರಿ ಉನ್ನತ ಪ್ರಾಥಮಿಕ ಶಾಲೆಯವರೆಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ರಸ್ತೆ ನಡುವೆ ಇರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಇರುವುದರಿಂದ ಸುಗಮ
ಸಂಚಾರಕ್ಕೆ ಸಂಕಟವಾಗಿದೆ.
ಸಿಸಿ ರಸ್ತೆ ಕಾಮಗಾರಿ ಆರಂಭವಾಗುವ ಮುಂಚೆ ಗುತ್ತಿಗೆದಾರರು ಜೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸಲು ಮನವಿ ಮಾಡಿಕೊಂಡಿದ್ದರು. ಜೆಸ್ಕಾಂ ಇಲಾಖೆ ಅಧಿಕಾರಿಗಳು ರಸ್ತೆ ಕಾಮಗಾರಿ ಆರಂಭವಾಗುವ ಮುಂಚೆ ವಿದ್ಯುತ್ ಕಂಬ ತೆರವುಗೊಳಿಸಲಾಗುವದು ಎಂದು ಹೇಳಿದ್ದರು.
ಆದರೆ ರಸ್ತೆ ಕಾಮಗಾರಿ ಆರಂಭವಾಗಿ ಕಾಮಗಾರಿ ಮುಗಿದರೂ ಸಹ ರಸ್ತೆಯಲ್ಲಿರುವ ವಿದ್ಯುತ್ ಕಂಬ ತೆರವುಗೊಳಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಪಟ್ಟಣದ ಮುಖ್ಯದ್ವಾರದಿಂದ ಸರಕಾರಿ ಪ್ರಾಥಮಿಕ ಶಾಲೆಯವರೆಗೆ ಇರುವ ಸಿಸಿ ರಸ್ತೆಯ ಮೇಲೆ ಎರಡು ವಾಹನಗಳು ಮುಖಾಮುಖೀ ಸಂಚರಿಸಲು ಆಗುವುದಿಲ್ಲ. ಏಕೆಂದರೆ ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬ ಇರುವುದರಿಂದ ಒಂದು ವಾಹನ ಹಿಂದಕ್ಕೆ ಚಲಿಸುವುದು ಅನಿವಾರ್ಯ ಇದೆ. ಹೀಗಾಗಿ ಸುಗಮ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ವಾಹನ ಚಾಲಕರು ದೂರಿದ್ದಾರೆ. ಕಾರಣ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ
ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು, ವಾಹನ ಚಾಲಕರು ಆಗ್ರಹಿಸಿದ್ದಾರೆ.
ಈಗಾಗಲೇ ಜೆಸ್ಕಾಂ ಅಧಿಕಾರಿಗಳಿಗೆ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಪತ್ರ ಬರೆಯಲಾಗಿದೆ. ಆದರೆ ಕಂಬಗಳು ತೆರವುಗೊಂಡಿಲ್ಲ. ಮತ್ತೂಮ್ಮೆ ಪತ್ರ ಬರೆದು ಸಮಸ್ಯೆ ವಿವರಿಸಲಾಗುವುದು.
ಪಿ.ಬಿ. ಚವ್ಹಾಣ, ಜೆಇ ಲೊಕೋಪಯೋಗಿ ಇಲಾಖೆ
ನಾನು ವರ್ಗಾವಣೆಯಾಗಿ ಬಂದು ಎರಡು ದಿನಗಳಾಗಿವೆ. ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಸಂಪೂರ್ಣ
ಮಾಹಿತಿ ಪಡೆದು ವಿದ್ಯುತ್ ಕಂಬ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಆನಂದ, ಜೆಇ ಜೆಸ್ಕಾಂ ಇಲಾಖೆ
ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬ ಇರುವುದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿದೆ. ಇಲಾಖೆ
ಅಧಿಕಾರಿಗಳು ವಿದ್ಯತ್ ಕಂಬಗಳನ್ನು ಶೀಘ್ರದಲ್ಲಿ ತೆರವುಗೊಳಿಸಬೇಕು.
ಬಸವರಾಜ ಸೊನ್ನದ, ಮದ್ಯಮಾರಾಟ ಸಂಯಮ ಮಂಡಳಿ ನಿರ್ದೇಶಕ
ನಾಮದೇವ ವಾಟ್ಕರ