Advertisement

ವಿದ್ಯುತ್‌ ಕಣ್ಣಾಮುಚ್ಚಾಲೆ: ಮೆಸ್ಕಾಂಗೆ ಗ್ರಾಮಸ್ಥರಿಂದ ಹಿಡಿಶಾಪ

11:18 PM Jul 16, 2019 | sudhir |

ಕೊಲ್ಲೂರು: ಜಡ್ಕಲ್ ಗ್ರಾ.ಪಂ.ನ ಸಭಾಭವನದಲ್ಲಿ ಜು. 16ರಂದು ನಡೆದ ಗ್ರಾಮ ಸಭೆಯಲ್ಲಿ ಜಡ್ಕಲ್ ಮುದೂರು ವ್ಯಾಪ್ತಿಯಲ್ಲಿ ಮಳೆಗಾಲದ ಆರಂಭದಿಂದ ದಿನಂಪ್ರತಿ ವಿದ್ಯುತ್‌ ಕಣ್ಣಾಮುಚ್ಚಾಲೆಯ ಬಗ್ಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

Advertisement

ಕಳೆದ 2 ತಿಂಗಳುಗಳಿಂದ ವಾರದಲ್ಲಿ ಕೇವಲ ಎರಡು ಮೂರು ಗಂಟೆಗಳ ಕಾಲ ಮಾತ್ರ ಈ ಭಾಗದಲ್ಲಿ ವಿದ್ಯುತ್‌ ಸರಬರಾಜಾಗುತ್ತಿರುವುದು ದೈನಂದಿನ ಜೀವನ ಕ್ರಮದ ಮೇಲೆ ಭಾರೀ ಪರಿಣಾಮ ಬೀರಿದೆ. ಈ ಭಾಗದಲ್ಲಿ 3 ಜನ ಲೈನ್‌ಮ್ಯಾನ್‌ಗಳಿದ್ದರೂ ಕೆಲಸ ಕಾರ್ಯ ಮಾಡುತ್ತಿಲ್ಲ. ರಾತ್ರಿ ವೇಳೆಯಲ್ಲಿ ವಿದ್ಯುತ್‌ ಪೂರೈಕೆಯಾಗದೇ ಅಂಗಡಿ ಮುಂಗಟ್ಟಿನವರು ಕತ್ತಲಲ್ಲಿ ಕೂರ ಬೇಕಾಗಿದೆ. ಲಿಖೀತ ದೂರು ನೀಡಿದರೂ ಮೆಸ್ಕಾಂ ಇಲಾಖೆ ಮೌನವಾಗಿರುವುದು ಖೇದಕರ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡರು.

ಚರ್ಚೆಗೆ ಗ್ರಾಸವಾಗಿದ್ದ ರಾಮಪುರಂ ಎಸ್ಟೇಟ್‌ನ ಪಾರ್ಶ್ವದ ಭಾಗದಲ್ಲಿ ವಾಸವಾಗಿರುವ ನಿವಾಸಿಗಳಿಗೆ ಸಮಸ್ಯೆ ಒಡ್ಡಿರುವ ಮುಚ್ಚಲಾಗಿರುವ ಗೇಟನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಅಲ್ಲಿನ ನಿವಾಸಿಗಳಾದ ಸುಂದರ ಭೋಗಿ ಹಾಗೂ ಸುಧಾಕರ ಭೋಗಿ ಸಭೆಯಲ್ಲಿ ಆಗ್ರಹಿಸಿದ್ದರು. 4.30 ಎಕರೆ ಜಾಗವನ್ನು ಅತಿಕ್ರಮಣ ಮಾಡಿರುವ ಬಗ್ಗೆ ಸಭೆಯಲ್ಲಿ ಆರೋಪಿಸಿ ಕೂಲಂಕಷ‌ ತನಿಖೆ ನಡೆಸುವಂತೆ ಆಗ್ರಹಿಸಿದರು.

ಅಧ್ಯಕ್ಷತೆಯನ್ನು ಜಡ್ಕಲ್ ಗ್ರಾ.ಪಂ. ಅಧ್ಯಕ್ಷ ಅನಂತ ಮೂರ್ತಿ ವಹಿಸಿದ್ದರು. ನೋಡೆಲ್ ಅಧಿಕಾರಿ ಮಮತಾ, ಜಡ್ಕಲ್ ಗ್ರಾ.ಪಂ. ಪಿ.ಡಿ.ಒ. ಪುಷ್ಪಲತಾ, ಗ್ರಾ.ಪಂ. ಸರ್ವ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next