Advertisement

ಎಲೆಕ್ಟ್ರಿಕ್‌ ಕಾರುಗಳು

10:06 AM Mar 14, 2020 | mahesh |

ಇಂಧನಕ್ಕೆ ಪರ್ಯಾಯವಾಗಿ ಎಲ್ಲರೂ ಎಲೆಕ್ಟ್ರಿಕ್‌ ಕಾರುಗಳತ್ತ ಮುಖಮಾಡುತ್ತಿದ್ದಾರೆ. ಸರಕಾರವೂ ಇದಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕಳೆದ 2019-20ರ ಕೇಂದ್ರ ಬಜೆಟ್‌ನಲ್ಲಿ 1.5 ಲಕ್ಷ ರೂ. ತೆರಿಗೆ ವಿನಾಯಿತಿ, ಜಿಎಸ್‌ಟಿ ಇಳಿಸಲಾಗಿತ್ತು. ಇಂದಿಗೂ ಎಲೆಕ್ಟ್ರಾನಿಕ್‌ ಕಾರುಗಳಿಗೆ ಜಿಎಸ್‌ಟಿ ವಿನಾಯಿತಿ ಇದೆ‌. ಈ ವರ್ಷ ಅತೀ ಹೆಚ್ಚು ವಿದ್ಯುತ್‌ಚಾಲಿತ ಕಾರುಗಳು ಮಾರಾಟವಾಗುವ ಸಾಧ್ಯತೆ ಇದೆ. ಆಟೊಮೊಬೈಲ್‌ ಕಂಪೆ‌ನಿಗಳು ಈಗಾಗಲೇ ವಿದ್ಯುತ್‌ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿವೆ. ಪೆಟ್ರೋಲ್‌-ಡೀಸೆಲ್‌ ಮೇಲಿನ ಅವಲಂಬನೆಯನ್ನು ತಗ್ಗಿಸುವ, ಹೊಗೆಯುಗುಳದ ಪರಿಸರ ಸ್ನೇಹಿ ವಿದ್ಯುತ್‌ಚಾಲಿತ‌ ವಾಹನಗಳ ಜಮಾನ ಆರಂಭವಾಗುತ್ತಿದೆ. ಇತ್ತೀಚಿನ ಬೆಳವಣಿಗೆಗಳು ಇದನ್ನು ಪುಷ್ಟೀಕರಿಸುತ್ತಿವೆ. ದೇಶಿ ಹಾಗೂ ವಿದೇಶಿ ಕಾರು ಉತ್ಪಾದಕ ಕಂಪೆನಿಗಳು ಎಲೆಕ್ಟ್ರಿಕ್‌ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿವೆ. ದೇಶೀಯ ಕಂಪೆನಿಗಳಾದ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್‌ ಮುಂತಾದ ಸಂಸ್ಥೆಗಳು ವಿದ್ಯುತ್‌ಚಾಲಿತ ಕಾರುಗಳ ಮಾರಾಟ, ಉತ್ಪಾದನೆಗೆ ತೊಡಗಿಸಿಕೊಳ್ಳುತ್ತಿವೆ. ಹುಂಡೈ, ಆಡಿ ಮೊದಲಾದ ಸಾಗರೋತ್ತರ ಕಂಪೆ‌ನಿಗಳೂ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳನ್ನು ಬಿಡುಗಡೆಗೊಳಿಸುತ್ತಿವೆ. ಭಾರತ ಈಗಾಗಲೇ ಪ್ರಮುಖ ಕಾರು ಮಾರುಕಟ್ಟೆಯಾಗಿ ಬದಲಾಗಿದೆ. ಇಲ್ಲಿ ಭಾರತದಲ್ಲಿ ಲಭ್ಯವಿರುವ 15-20 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್‌ ಕಾರುಗಳ ಕುರಿತು ಮಾಹಿತಿ ನೀಡಲಾಗಿದೆ.

Advertisement

ಟಾಟಾ ನೆಕ್ಸಾನ್‌ ಇವಿ
ಟಾಟಾ ಮೋಟಾರ್ಸ್‌ ತನ್ನ ಎರಡನೇ ಎಲೆಕ್ಟ್ರಿಕ್‌ ಕಾರು ಟಾಟಾ ನೆಕ್ಸಾನ್‌ ಇವಿಯನ್ನು ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ 13.99 ಲಕ್ಷ ರೂ.ಗಳಿಂದ 15.99 ಲಕ್ಷ ರೂ. ಇದೆ. 5 ಜನ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಇದ್ದು, 127 ಬಿಎಚ್‌ಪಿ ಸಾಮರ್ಥ್ಯ ಹೊಂದಿದೆ. ನೆಕ್ಸಾನ್‌ ಇವಿ ಒಟ್ಟು 3 ಆವೃತ್ತಿಯಲ್ಲಿ ಲಭ್ಯವಿದ್ದು, ಎಕ್ಸ್‌ಎಂ, ಎಕ್ಸ್‌ಝೆಡ್‌ ಪ್ಲಸ್‌ ಮತ್ತು ಎಕ್ಸ್‌ಝೆಡ್‌ ಪ್ಲಸ್‌ ಲಕ್ಸ್‌ ಆವೃತ್ತಿ
ಯಲ್ಲಿ ಕೊಂಡುಕೊಳ್ಳಬಹುದು.

ಮಾರುತಿ ಸುಜುಕಿ ವ್ಯಾಗನ್‌ ಆಟ್‌ ಇವಿ
ಮಾರುತಿ ಸುಜುಕಿ ತನ್ನ ಎಲೆಕ್ಟ್ರಿಕ್‌ ಕಾರು ವ್ಯಾಗನ್‌ ಆರ್‌ಇವಿಯನ್ನು ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆ 7 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಲ್ಲಿ ಇದೆರಬಹುದು. ಸಿಂಗಲ್‌ ಚಾರ್ಜಿನಲ್ಲಿಯೇ 200 ಕಿ.ಮೀ. ತನಕ ಕಾರು ಚಲಿಸುವ ಸಾಧ್ಯತೆ ಇದೆ. ಇದು ಮಾರುತಿ ಸುಜುಕಿ ಬಿಡುಗಡೆ ಮಾಡಿದ ಬೇಡಿಕೆಯುಳ್ಳ ಉತ್ತಮ ಕಾರು ಇದಾಗಿದೆ.

ಎಂಜಿ ಝೆಡ್‌ಎಸ್‌ ಇವಿ
ಎಂಜಿ ಮೋಟಾರ್‌ ಝೆಡ್‌ಎಸ್‌ ಇವಿ ಕಾರನ್ನು ಬಿಡುಗಡೆಗೊಳಿಸಿದೆ. ಸುಮಾರು 20 ಲಕ್ಷ ರೂ.ನ ಆಸುಪಾಸಿನಲ್ಲಿ ಕಾರುಗಳು ಲಭ್ಯವಿವೆೆ. 140.8 ಬಿಎಚ್‌ಪಿ ಸಾಮರ್ಥ್ಯದಲ್ಲಿ ಇದು ಲಭ್ಯ ಇದೆ. ಇತರ ಕಾರುಗಳಂತೆ 5 ಮಂದಿ ಕುಳಿತುಕೊಳ್ಳಬಹುದಾದ ಆಸನ ಸೌಲಭ್ಯಗಳಿವೆ. ಇದನ್ನು ಒಮ್ಮೆ ಚಾರ್ಜ್‌ ಮಾಡಿದರೆ ಸುಮಾರು 340 ಕಿ.ಮೀ. ಓಡುವ ಸಾಮರ್ಥ್ಯ ಇದೆ. ಇದರ ಬ್ಯಾಟರಿ ಶೇ. 80 ಚಾರ್ಜ್‌ ಆಗಲು ಇದು 50 ನಿಮಿಷ ತೆಗೆದುಕೊಳ್ಳುತ್ತದೆ.

ಹುಂಡೈನಿಂದ ಎಲೆಕ್ಟ್ರಿಕ್‌ ಎಸ್ಯುವಿ
ದಕ್ಷಿಣ ಕೊರಿಯಾ ಮೂಲದ ಕಾರು ಉತ್ಪಾದಕ ಹುಂಡೈ ಭಾರತದಲ್ಲಿ 2019ರ ಜುಲೈ 9ರಂದು ತನ್ನ ನೂತನ ಎಲೆಕ್ಟ್ರಿಕ್‌ ಎಸ್ಯುವಿ “ಹುಂಡೈ ಕೊನಾ’ವನ್ನು ಬಿಡುಗಡೆಗೊಳಿಸಿದೆ. ಈ ಎಸ್ಯುವಿ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. 39ಕೆಡಬ್ಲ್ಯುಎಚ್‌ ಮತ್ತು 64 ಕೆಡಬ್ಲ್ಯುಎಚ್‌ ಬ್ಯಾಟರಿ ಪ್ಯಾಕ್‌ನೊಂದಿಗೆ ಇದು ದೊರೆಯಲಿದೆ. ಆಟೊಮೋಟಿವ್‌ ರಿಸರ್ಚ್‌ ಅಸೋಸಿಯೇಶನ್‌ ಆಫ್ ಇಂಡಿಯಾ (ಎಆರ್‌ಎಐ) ಪ್ರಕಾರ ಹುಂಡೈನ ಕೋನಾ ಎಸ್ಯುವಿ ಬ್ಯಾಟರಿಯ ಒಂದೇ ಫ‌ುಲ್‌ ಚಾರ್ಜ್‌ನಲ್ಲಿ 452 ಕಿ.ಮೀ. ಸಂಚರಿಸಬಲ್ಲುದು. ಹಾಗೂ ಗರಿಷ್ಠ 167 ಕಿ.ಮೀ. ವೇಗದಲ್ಲಿ ಚಲಿಸಬಲ್ಲುದು. ಸಾಮಾನ್ಯವಾಗಿ ಈ ಎಸ್ಯುವಿಯನ್ನು 7-8 ಗಂಟೆಗಳಲ್ಲಿ ಪೂರ್ಣವಾಗಿ ರೀಚಾರ್ಜ್‌ ಮಾಡಿಸಬಹುದು. ಹುಂಡೈನ ಆಯ್ದ ಡಿಸಿ ಫಾಸ್ಟ್‌ ಚಾರ್ಜಿಂಗ್‌ ಸ್ಟೇಶನ್‌ಗಳಲ್ಲಿ 50 ನಿಮಿಷಗಳಲ್ಲಿಯೇ ರೀಚಾರ್ಜ್‌ ಸಾಧ್ಯ ಎಂದು ಕಂಪೆನಿ ತಿಳಿಸಿದೆ. ಈ ಕಾರಿನ ದರ 20 ಲಕ್ಷ ರೂ. ಮೇಲಿದೆ.

Advertisement

ಮಹೀಂದ್ರ ಇ2ಒ ಪ್ಲಸ್‌
ಮಹೀಂದ್ರ ಆಕರ್ಷಕ ಮಹೀಂದ್ರ ಇ2ಒ ಪ್ಲಸ್‌ ಕಾರನ್ನು ಪರಿಚಯಿಸಿದೆ. 4 ಆಸನಗಳನ್ನು ಒಳಗೊಂಡ ಈ ಎಲೆಕ್ಟ್ರಿಕ್‌ ಕಾರನ್ನು ಒಮ್ಮೆ ಚಾರ್ಜ್‌ ಮಾಡಿದರೆ 110 ಕಿ.ಮೀ. ಓಡುತ್ತದೆ. 25.4ಬಿಎಚ್‌ಪಿ ಸಾಮರ್ಥ್ಯ ಹೊಂದಿದ್ದು, ಇದರ ಬೆಲೆ 7.74 ಲಕ್ಷದ ಆಸುಪಾಸಿನಲ್ಲಿದೆ. 2 ವಿಧಗಳು ಮತ್ತು 4 ಆವೃತ್ತಿಗಳಲ್ಲಿ ಕಾರುಗಳ ಲಭ್ಯವಿವೆ.

ಮಹೀಂದ್ರ ಇ ವೆರಿಟೊ
ಮಹೀಂದ್ರ ಈ ಹಿಂದೆ ಪರಿಚಯಿಸಿದ್ದ ಮಹೀಂದ್ರ ಇ ವೆರಿಟೊ ಕಾರು 10ರಿಂದ 10.49 ಲಕ್ಷ ರೂ.ಗೆ ದೊರೆಯುತ್ತದೆ. 5 ಮಂದಿ ಕುಳಿತುಕೊಳ್ಳಬಹುದಾಗಿದೆ.ಒಮ್ಮೆ ಚಾರ್ಜ್‌ ಮಾಡಿದರೆ 110 ಕಿ.ಮೀ. ಓಡುವ ಸಾಮರ್ಥ್ಯ ಹೊಂದಿದ್ದು, ಗಂಟೆಗೆ ಗರಿಷ್ಠ 86 ಕಿ.ಮೀ. ವೇಗದಲ್ಲಿ ಚಾಲನೆ ಮಾಡಬಹುದಾಗಿದೆ. ಒಮ್ಮೆ ಬ್ಯಾಟರಿ ಪೂರ್ಣ ಚಾರ್ಜ್‌ಗೊಳ್ಳಲು 8 ಗಂಟೆಗಳು ಬೇಕಾಗುತ್ತದೆ. ಆದರೆ ಕ್ವಿಕ್‌ ಚಾರ್ಜ್‌ ಸೌಲಭ್ಯವಿದ್ದರೆ 1.45 ಗಂಟೆಯಲ್ಲಿ ಚಾರ್ಜ್‌ ಮಾಡಬಹುದು.

ಪೆಟ್ರೋಲ್‌-ಡೀಸೆಲ್‌ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್‌ ವಾಹನ ಪರಿಸರ ಸ್ನೇಹಿ. ಭಾರತದಲ್ಲಿ ತೈಲ ತಗ್ಗಿಸಲು ಹಾಗೂ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ವಿದ್ಯುತ್‌ ಚಾಲಿತ ವಾಹನಗಳ ವ್ಯಾಪಕ ಬಳಕೆಯ ಅಗತ್ಯ ಇದೆ. ಇಲ್ಲಿ ಕಾರುಗಳ ಕುರಿತು ಮಾಹಿತಿಗಳನ್ನು ಮಾತ್ರ ನೀಡಲಾಗಿದ್ದು, ಹೆಚ್ಚಿನ ಮಾಹಿತಿ ಮತ್ತು ನಿಖರ ದರಗಳಿಗಾಗಿ ನಿಮ್ಮ ಭಾಗದ ಕಾರು ತಯಾರಕಾ ಸಂಸ್ಥೆ/ಶೋರೂಂಗಳನ್ನು ಸಂಪರ್ಕಿಸಿ.

ಮಾಹಿತಿ:  ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next