Advertisement

ಎಲೆಕ್ಟ್ರಿಕ್‌ ಬಸ್‌ ಸಬ್ಸಿಡಿ: ಇಕ್ಕಟ್ಟಿಗೆ ಸಿಲುಕಿದ ಬಿಎಂಟಿಸಿ

10:12 AM May 27, 2019 | Suhan S |

ಬೆಂಗಳೂರು: ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸುವ ಸಂಬಂಧ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ ‘ಫೇಮ್‌-2’ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಆದರೆ, ಈ ಯೋಜನೆ ಅಡಿ ಸಬ್ಸಿಡಿ ಪಡೆಯುವ ಸಂಬಂಧ ಪ್ರಸ್ತಾವನೆ ಸಲ್ಲಿಸುವ ವಿಷಯದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಇಕ್ಕಟ್ಟಿಗೆ ಸಿಲುಕಿದೆ.

Advertisement

ಏಕೆಂದರೆ, ‘ಫೇಮ್‌-2’ರಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಅವಕಾಶ ಇಲ್ಲ. ಗುತ್ತಿಗೆ ರೂಪದಲ್ಲಿ ಪಡೆದ ವಾಹನಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಹಾಗೊಂದು ವೇಳೆ ಪ್ರಸ್ತಾವನೆ ಸಲ್ಲಿಸಿದರೆ, ಅದು ಮೊದಲಿನಿಂದಲೂ ಗುತ್ತಿಗೆ ರೂಪದಲ್ಲಿ ಬಸ್‌ಗಳನ್ನು ಪಡೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಸಾರಿಗೆ ಸಚಿವರ ಆಶಯಕ್ಕೆ ವಿರುದ್ಧವಾಗುತ್ತದೆ. ಹಾಗಂತ ಯೋಜನೆಯಿಂದ ದೂರ ಉಳಿದರೆ, ಅನಾಯಾಸವಾಗಿ ಕೋಟ್ಯಂತರ ರೂ. ಸಬ್ಸಿಡಿ ಕೈತಪ್ಪುತ್ತದೆ. ಜತೆಗೆ ಎಲೆಕ್ಟ್ರಿಕ್‌ ಬಸ್‌ಗಳ ಭಾಗ್ಯ ಕೂಡ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕಾರಿಗಳು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

‘ಫೇಮ್‌’ ಮೊದಲ ಹಂತದಲ್ಲಿ 80 ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲು ಕೇಂದ್ರ ಒಪ್ಪಿಗೆ ಸೂಚಿಸಿತ್ತು. ಮುಂಗಡವಾಗಿ ಹಣ ಕೂಡ ಬಿಡುಗಡೆ ಮಾಡಿತ್ತು. ಆದರೆ, ಖರೀದಿ ಅಥವಾ ಗುತ್ತಿಗೆ ಗುದ್ದಾಟದಲ್ಲಿಯೇ ಅದು ಬಳಕೆ ಆಗಲಿಲ್ಲ. ಕೊಟ್ಟ ಅನುದಾನ ಬಳಸಿಕೊಳ್ಳದ ಬಿಎಂಟಿಸಿಗೆ ಬಡ್ಡಿಸಹಿತ ಹಿಂಪಾವತಿಸುವಂತೆ ಕೇಂದ್ರ ಸರ್ಕಾರ ತಾಕೀತು ಕೂಡ ಮಾಡಿದೆ. ಈಗ ಆ ಹಣವನ್ನು ಉಳಿಸಿಕೊಳ್ಳುವ ಕಸರತ್ತು ನಡೆದಿದೆ. ಈ ಮಧ್ಯೆಯೇ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಎಲೆಕ್ಟ್ರಿಕ್‌ ಬಸ್‌ಗಳಿಗಾಗಿ ಸಬ್ಸಿಡಿ ನೀಡಲು ಎರಡನೇ ಹಂತದಲ್ಲಿ ಈ ಯೋಜನೆ ಜಾರಿಗೆ ಬರುತ್ತಿದೆ.

‘ಫೇಮ್‌-2’ರಡಿ ಮುಂದಿನ ಎರಡು-ಮೂರು ವರ್ಷಗಳಲ್ಲಿ ಒಟ್ಟಾರೆ 3,500 ಕೋಟಿ ರೂ. ವೆಚ್ಚದಲ್ಲಿ ಏಳು ಸಾವಿರ ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲು ಉದ್ದೇಶಿಸಲಾಗಿದೆ. ಈ ಮೊದಲು ಶೇ. 60ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಖರೀದಿ ಅಥವಾ ಗುತ್ತಿಗೆ ರೂಪದಲ್ಲಿ ಪಡೆಯಲು ಆಯ್ಕೆಗಳಿದ್ದವು. ಆದರೆ, ಎರಡನೇ ಹಂತದಲ್ಲಿ ಸಬ್ಸಿಡಿ ಮೊತ್ತಕ್ಕೆ ಕತ್ತರಿ ಹಾಕಿದ್ದು, ಗರಿಷ್ಠ 50 ಲಕ್ಷದವರೆಗೆ ಮಾತ್ರ ನೀಡಲಾಗುತ್ತಿದೆ. ಜತೆಗೆ ಗುತ್ತಿಗೆ ರೂಪದಲ್ಲೇ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ. ಪ್ರಸ್ತಾವನೆ ಸಲ್ಲಿಸಲು ಜುಲೈವರೆಗೆ ಅವಕಾಶ ಇದೆ.

100 ಬಸ್‌ಗಳ ಖರೀದಿಗೆ ಸಿದ್ಧತೆ?: ‘ಗೊಂದಲದ ನಡುವೆಯೇ ಬಿಎಂಟಿಸಿಯು ‘ಫೇಮ್‌-2’ಗೆ ಮೊದಲದ ಹಂತದಲ್ಲಿ ಸುಮಾರು 100ರಿಂದ 150 ಎಲೆಕ್ಟ್ರಿಕ್‌ ಬಸ್‌ಗಳಿಗೆ ಸಬ್ಸಿಡಿಗಾಗಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದೆ. ಮಾರ್ಗಸೂಚಿಗಳು ಬಂದ ನಂತರ ನಾವು ಪ್ರಸ್ತಾವನೆ ಸಲ್ಲಿಸುತ್ತೇವೆ. ಆಮೇಲೆ ‘ಫೇಮ್‌-2′ ತಂಡ ಶೀಘ್ರದಲ್ಲೇ ಭೇಟಿ ನೀಡಲಿದೆ. ಒಟ್ಟಾರೆ ವಾರದಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.

Advertisement

‘ಬರುವ ನಿರ್ದೇಶಕರ ಮಂಡಳಿ ಸಭೆಯಲ್ಲಿ ಇದು ಚರ್ಚೆಗೆ ಬರಲಿದೆ. ಖರೀದಿಗೆ ಇದರಲ್ಲಿ ಅವಕಾಶ ಇಲ್ಲ ಎನ್ನುವುದನ್ನೂ ಸಭೆ ಗಮನಕ್ಕೆ ತರಲಾಗುವುದು. ಅಲ್ಲದೆ, ಸಾರಿಗೆ ಸಚಿವರು ಮತ್ತು ಅಧ್ಯಕ್ಷರೊಂದಿಗೂ ಚರ್ಚೆ ನಡೆಸಿ, ನಂತರ ತೀರ್ಮಾನಿಸಲಾಗುವುದು. ಸದ್ಯಕ್ಕೆ ಎಷ್ಟು ಬಸ್‌ಗಳ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂಬುದು ಇನ್ನೂ ತೀರ್ಮಾನ ಆಗಿಲ್ಲ. ಇದನ್ನು ಸಚಿವರು ಅಥವಾ ಅಧ್ಯಕ್ಷರೇ ತಿಳಿಸಲಿದ್ದಾರೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ. ಪ್ರಸಾದ್‌ ‘ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಫೇಮ್‌-1ರ ಕತೆ:

ಫೇಮ್‌ ಇಂಡಿಯಾ ಯೋಜನೆ ಅಡಿ 80 ಬಸ್‌ಗಳನ್ನು ರಸ್ತೆಗಿಳಿಸಲು ಕೇಂದ್ರವು ಬಸ್‌ಗಳ ಪೂರೈಕೆಗೆ 14.95 ಕೋಟಿ ಹಾಗೂ ಚಾರ್ಜಿಂಗ್‌ ಸ್ಟೇಷನ್‌ ಸೇರಿದಂತೆ ಪೂರಕ ಸೌಲಭ್ಯಗಳನ್ನು ಕಲ್ಪಿಸಲು 3.73 ಕೋಟಿ ಒಳಗೊಂಡಂತೆ ಒಟ್ಟಾರೆ ಸುಮಾರು 18.68 ಕೋಟಿ ರೂ. ನೀಡಿತ್ತು. ಈವರೆಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಬೇಕೇ ಅಥವಾ ಗುತ್ತಿಗೆ ರೂಪದಲ್ಲಿ ಪಡೆದು ಸೇವೆ ಕಲ್ಪಿಸಬೇಕೇ ಎನ್ನುವುದೇ ಅಂತಿಮವಾಗಿಲ್ಲ. ಇದರಿಂದ ರಾಜ್ಯದಲ್ಲಿ ಯೋಜನೆ ಕಗ್ಗಂಟಾಗಿದೆ. 2015ರ ಏಪ್ರಿಲ್ನಲ್ಲಿ ‘ಫೇಮ್‌’ ಯೋಜನೆ ಆರಂಭವಾಯಿತು. 795 ಕೋಟಿ ಮೊತ್ತದಲ್ಲಿ 500 ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಆದರೆ, ಈ ಪೈಕಿ ಇದುವರೆಗೆ ವಿವಿಧ ಮಹಾನಗರಗಳಲ್ಲಿ 200 ಬಸ್‌ಗಳು ಮಾತ್ರ ಕಾರ್ಯಾಚರಣೆ ಆರಂಭಿಸಿವೆ.
Advertisement

Udayavani is now on Telegram. Click here to join our channel and stay updated with the latest news.

Next