Advertisement

ಚಿಕ್ಕಬಳ್ಳಾಪುರ ನಗರಸಭೆಗೆ ಫೆ.9ಕ್ಕೆ ಚುನಾವಣೆ

09:12 PM Jan 14, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಕಳೆದ ವರ್ಷ ಡಿ.5 ರಂದು ನಡೆದಿದ್ದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಿಂದಾಗಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೀಗ, ಅವಧಿ ಮುಗಿದಿದ್ದ ಸ್ಥಳೀಯ ನಗರಸಭೆಯ 31 ವಾರ್ಡ್‌ಗಳಿಗೆ ಫೆ.9ಕ್ಕೆ ಚುನಾವಣೆ ನಿಗದಿಗೊಳಿಸಿ ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದು ಕ್ಷೇತ್ರದ ರಾಜಕೀಯ ಪಕ್ಷಗಳಲ್ಲಿ ಚುನಾವಣಾ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.

Advertisement

ರಾಜ್ಯ ಚುನಾವಣಾ ಆಯೋಗವು ಚಿಕ್ಕಬಳ್ಳಾಪುರ ನಗರಸಭೆ ಒಳಗೊಂಡಂತೆ ರಾಜ್ಯದ ಒಟ್ಟು 4 ನಗರಸಭೆ ಹಾಗೂ ತಲಾ ಒಂದೊಂದು ಪುರಸಭೆ ಹಾಗೂ ಪಪಂಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಮೂಲಕ ಸಾರ್ವತ್ರಿಕ ಚುನಾವಣೆ ನಡೆಸಲು ಆದೇಶಿಸಿದ್ದು, ಅದರಂತೆ ಚಿಕ್ಕಬಳ್ಳಾಪುರ ನಗರಸಭೆಗೆ ಜ.21 ರಂದು ಜಿಲ್ಲಾಧಿಕಾರಿಗಳು ಆಧಿಸೂಚನೆ ಹೊರಡಿಸಲಿದ್ದು, 21 ರಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಉಮೇದುವಾರಿಕೆಗೆ ಜ.28ಕ್ಕೆ ಕೊನೆ ದಿನವಾಗಿದೆ.

ಚುನಾವಣಾ ವೇಳಾಪಟ್ಟಿ: ಜ.21 ರಂದು ಚುನಾವಣೆಗೆ ಜಿಲ್ಲಾಧಿಕಾರಿಗಳೂ ಅಧಿಕೃತವಾಗಿ ಆಧಿಸೂಚನೆ ಹೊರಡಿಸಲಿದ್ದಾರೆ. ಜ.21ರಿಂದ 28ರವರೆಗೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಬಹುದು. ಜ.29 ರಂದು ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜ.31 ರಂದು ಉಮೇದುವಾರಿಕೆ ವಾಪಸ್ಸು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮತದಾನ ಫೆ.9 ರಂದು ನಡೆಯಲಿದ್ದು, ಮರು ಮತದಾನ ಅವಶ್ಯಕತೆ ಇದ್ದಲ್ಲಿ ಫೆ.10 ರಂದು ನಡೆಯಲಿದೆ. ಮತ ಎಣಿಕೆ ಕಾರ್ಯ ಫೆ.11 ರಂದು ತಾಲೂಕು ಕೇಂದ್ರದಲ್ಲಿ ನಡೆಯಲಿದೆ.

ಈಗಾಗಲೇ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಲಾಗಿರುವ ಮತದಾರರ ಪಟ್ಟಿಯಂತೆ ಚುನಾವಣೆ ನಡೆಸಲು ಆಯೋಗ ಸೂಚಿಸಿದೆ. ಜೊತೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವ ಆಯೋಗ, ಸಂಬಂಧಪಟ್ಟಂತೆ ಎಲ್ಲಾ ಅಗತ್ಯ ಮಾಹಿತಿ, ಸುತ್ತೋಲೆ, ನಿರ್ದೇಶನ ಪ್ರತಿಗಳನ್ನು ಒದಗಿಸುವಂತೆ ಸೂಚಿಸಿದೆ.

ಅಭ್ಯರ್ಥಿ ಭಾವಚಿತ್ರ, ನೋಟಾಗೆ ಅವಕಾಶ: ಸ್ಥಳೀಯ ನಗರಸಭೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಇವಿಎಂ ಮತ ತಂತ್ರಗಳನ್ನು ಬಳಕೆ ಮಾಡಲಿದ್ದು, ಅಭ್ಯರ್ಥಿಗಳ ಇತ್ತೀಚಿನ ಭಾವಚಿತ್ರ ಸಹ ಪ್ರಕಟಿಸಲಿದೆ. ಜೊತೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶ ನೀಡಿರುವ ಆಯೋಗ ಇವಿಎಂ ಮತ ಯಂತ್ರದಲ್ಲಿ ನೋಟಾಗೂ ಅವಕಾಶ ಕಲ್ಪಿಸಲಿದೆ. ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸದಾಚಾರ ಉಲ್ಲಂಘಟನೆಯಾಗದಂತೆ ನೋಡಿಕೊಳ್ಳಬೇಕೆಂದು ಆಯೋಗ ಸ್ಪಷ್ಟ ಸೂಚನೆ ಕೊಟ್ಟಿದೆ.

Advertisement

ತಕ್ಷಣದಿಂದ ನೀತಿ ಸಂಹಿತೆ ಜಾರಿ: ಚಿಕ್ಕಬಳ್ಳಾಪುರ ನಗರಸಭೆಯ ಒಟ್ಟು 31 ವಾರ್ಡ್‌ಗಳಿಗೆ ರಾಜ್ಯ ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿ ಘೋಷಿಸಿದ್ದು, ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬ‌ರಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎನ್‌.ಆರ್‌.ನಾಗರಾಜು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ. ಜ.14 ರಿಂದ ಚುನಾವಣೆ ಮುಗಿಯಲಿರುವ ಫೆ.11ರವರೆಗೂ ಸ್ಥಳೀಯ ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಸದಾಚಾರ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಮುಖ್ಯಾಂಶಗಳು
* ಜ.21ಕ್ಕೆ ಡೀಸಿ ಅಧಿಸೂಚನೆ ಪ್ರಕಟ
* ಜ.28 ನಾಮಪತ್ರ ಸಲ್ಲಿಕೆಗೆ ಕೊನೆ
* ಜ.29ಕ್ಕೆ ನಾಮಪತ್ರಗಳ ಪರಿಶೀಲನೆ
* ಜ.31ನಾಮಪತ್ರ ಹಿಂಪಡೆಯಲು ಕೊನೆ
* ಫೆ.9ಕ್ಕೆ ಮತದಾನ ಪ್ರಕ್ರಿಯೆ
* ಫೆ.10ಕ್ಕೆ ಅವಶ್ಯಕತೆ ಇದ್ದರೆ ಮರು ಮತದಾನ
* ಫೆ.11ಕ್ಕೆ ಚುನಾವಣೆ ಫ‌ಲಿತಾಂಶ ಪ್ರಕಟ
* ಜ.14ರಿಂದಲೇ ನೀತಿ ಸಂಹಿತೆ ಜಾರಿ

ಆದಾಯ ಮೂಲ, ಆಸ್ತಿ, ಸ್ವ ವಿವರ ಸಲ್ಲಿಕೆ ಕಡ್ಡಾಯ: ಸ್ಥಳೀಯ ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮತದಾರನಿಗೆ ಅಭ್ಯರ್ಥಿಯ ಪೂರ್ವಪರಗಳನ್ನು ತಿಳಿದುಕೊಳ್ಳಲು ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಾಮಪತ್ರದೊಂದಿಗೆ ತನ್ನ ಹಿನ್ನೆಲೆ, ಚರಾಸ್ತಿ, ಸ್ಥಿರಾಸ್ತಿಗಳ ವಿವರಗಳು, ಸ್ವ ವಿವರ, ವಿದ್ಯಾರ್ಹತೆ, ಆದಾಯದ ಮೂಲಗಳನ್ನು ಪರಿಷ್ಕೃತ ನಮೂನೆಯಲ್ಲಿ (ಘೋಷಣಾ ಪತ್ರ) ನೀಡುವುದು ಕಡ್ಡಾಯವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ -2020ರ ಸಂಬಂಧ ಚಿಕ್ಕಬಳ್ಳಾಪುರ ನಗರಸಭೆಯ 31 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದ್ದು, ಅದರನ್ವಯ ಜ.14ರಿಂದ ಫೆ.11 ರ ವರೆಗೂ ಸದಾಚಾರ ಸಂಹಿತೆಯ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರುತ್ತದೆ. ಉಲ್ಲಂಘನೆ ಆಗದಂತೆ ನಗರಸಭೆ ಆಯುಕ್ತರಿಗೆ, ತಾಲೂಕು ತಹಶೀಲ್ದಾರ್‌ಗೆ ಸೂಚಿಸಲಾಗಿದೆ.
-ಆರತಿ, ಅಪರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next