ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಭರದಿಂದ ಸಿದ್ದತೆ ನಡೆಸುತ್ತಿದ್ದು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಪಕ್ಷದ ಹಿರಿಯ ನಾಯಕರು ಬೆಂಗಳೂರಿನಲ್ಲಿ ಗುರುವಾರ ತಡರಾತ್ರಿ ಸಭೆ ನಡೆಸಿರುವುದು ಅವರ ಆಪ್ತವಲಯದ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ, ಇದು ಪಕ್ಷದೊಳಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್, ಸ್ಥಳೀಯ ಸಂಸ್ಥೆಯಲ್ಲಿ ದೋಸ್ತಿ ಪಕ್ಷ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿರುವುದರಿಂದ ಬಿಜೆಪಿ ಹಾಗೂ ಜೆಡಿಎಸ್‌ಗಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಪಕ್ಷದ ನಾಯಕರು ಯೋಜನೆ ರೂಪಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್, ಸಚಿವರಾದ ಡಿ.ಕೆ. ಶಿವಕುಮಾರ್, ಆರ್.ವಿ.ದೇಶಪಾಂಡೆ ಹಾಗೂ ನಗರದ ಕೆಲವು ಶಾಸಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್, ಹಿರಿಯ ಶಾಸಕರಾದ ರಾಮಲಿಂಗಾ ರೆಡ್ಡಿ, ಎಂ.ಬಿ. ಪಾಟೀಲ್ ಅವರಿಗೂ ಸಭೆಗೆ ಅಹ್ವಾನ ನೀಡಲಾಗಿತ್ತು. ಆದರೆ, ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಸಭೆ ನಡೆಸಿರುವುದರಿಂದ ಅವರು ಸಭೆಯಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.
ಸಿದ್ದರಾಮಯ್ಯನವರು ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತಂತೆ ಪಕ್ಷದ ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯಲು ಸ್ವ ಕ್ಷೇತ್ರ ಬಾದಾಮಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ಉಳಿದ ನಾಯಕರು ಸಭೆ ನಡೆಸಿರುವುದು ಸಿದ್ದರಾಮಯ್ಯ ಆಪ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಅಲ್ಲದೆ, ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಪನ್ಮೂಲ ಕ್ರೋಢೀಕರಣದ ಕುರಿತಂತೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ. ನಗರದ ಕೆಲವು ಶಾಸಕರು ಮೊದಲು ಸಂಪುಟ ವಿಸ್ತರಣೆ ಮಾಡುವಂತೆ ಪಕ್ಷದ ನಾಯಕರಿಗೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.