ಸಕಲೇಶಪುರ: ವಿಧಾನಸಭಾ ಚುನಾವಣೆಯಲ್ಲಿ ಕೂಲಿ ಕಾರ್ಮಿಕರು ಚುನಾವಣೆ ಪ್ರಚಾರಗಳಿಗೆ ಹೋಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಕೂಲಿ ಕಾರ್ಮಿಕರು ದೊರಕದಂತಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಮಂದ ಗತಿಯಲ್ಲಿ ಸಾಗುತ್ತಿರುವುದಲ್ಲದೇ ಇತರ ಕಾರ್ಯ ಚಟುವಟಿಕೆ ಗಳಿಗೂ ಕಾರ್ಮಿಕರ ಅಭಾವ ಉಂಟಾಗಿದೆ.
ಕಳೆದ ಎರಡು ತಿಂಗಳಿನಿಂದ ಕ್ಷೇತ್ರದಲ್ಲಿ ಚುನಾವಣೆ ಕಾವು ಏರಿದ್ದು ಅದರಲ್ಲೂ ಚುನಾವಣೆ ದಿನಾಂಕ ಹತ್ತಿರವಾಗುತ್ತಿರುವ ಹಾಗೆ ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಹೆಚ್ಚಾಗಿದೆ. ಸಾಮಾನ್ಯವಾಗಿ ಫೆಬ್ರವರಿ ಅಂತ್ಯದಲ್ಲಿ ಕಾಫಿ ತೋಟಗಳಲ್ಲಿ ಕಾಫಿ ಕುಯ್ಲು ಮುಗಿಯುವುದು ವಾಡಿಕೆಯಾಗಿದೆ. ಕಾಫಿ ಕುಯ್ಲು ಮುಗಿದ ನಂತರ ಗಿಡಗಳಿಗೆ ಸುಣ್ಣ ಹಾಕುವುದು, ಕೃತಕವಾಗಿ ನೀರು ಸಿಂಪಡಿಸುವುದು, ಮರ ಕಸಿ, ಗಿಡ ಕಸಿಯಂತಹ ಕೆಲಸಗಳು ಇರುತ್ತದೆ. ಆದರೆ, ಈ ಬಾರಿ ಕಳೆದ ಒಂದು ತಿಂಗಳಿನಿಂದ ಚುನಾವಣೆ ಕಾವು ಕ್ಷೇತ್ರದಲ್ಲಿದ್ದು ಕೂಲಿ ಕಾರ್ಮಿಕರು ಚುನಾವಣೆ ಪ್ರಚಾರ ಕಾರ್ಯಕ್ಕೆ ಹೋಗುತ್ತಿದ್ದು ಇದರಿಂದ ಕಾಫಿ ತೋಟಗಳಲ್ಲಿ ಕೃಷಿ ಕಾರ್ಮಿಕರು ಸರಿಯಾಗಿ ಸಿಗುತ್ತಿಲ್ಲ.
ಚುನಾವಣೆ ಪ್ರಚಾರದ ಜೊತೆಗೆ ಮದುವೆ, ಗೃಹ ಪ್ರವೇಶದಂತಹ ಶುಭ ಕಾರ್ಯಗಳು ಹೆಚ್ಚಾಗಿದ್ದು ಇದರಿಂದಾಗಿ ಕೆಲಸ ಮಾಡಲು ಕಾರ್ಮಿಕರು ಅಲಭ್ಯರಾಗುತ್ತಿದ್ದಾರೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ, ವಿವಿಧ ಪಕ್ಷಗಳ ಮುಖಂಡರ ಕ್ಷೇತ್ರಕ್ಕೆ ಆಗಮನದ ವೇಳೆ ಹಣ ಕೊಟ್ಟು ಜನರನ್ನು ಕರೆಸಲಾಗಿದ್ದು, ಬಹುತೇಕ ಕಾರ್ಮಿಕರು 3 ಪಕ್ಷಗಳ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇದೀಗ ಅಂತಿಮ ಹಂತದ ಚುನಾವಣೆ ಪ್ರಚಾರ ಕ್ಷೇತ್ರದಲ್ಲಿ ನಡೆಯುತ್ತಿದೆ. ಇದರಿಂದ ದಿನ ನಿತ್ಯ ಪ್ರಚಾರಕ್ಕೆ ಹೋಗುವರಿಗೆ 300 ರೂ.ಗಳಿಂದ 500 ರೂ.ವರೆಗೆ ಹಣ ದೊರಕುತ್ತಿದೆ.
ಇದರಿಂದಾಗಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರೆ ವಿರಳವಾಗಿದೆ. ಕೇವಲ ಕೂಲಿ ಕಾರ್ಮಿಕರು ಮಾತ್ರವಲ್ಲದೆ ಪ್ಲಂಬರ್, ಮರಗೆಲಸ ಮಾಡುವವರು, ಎಲೆಕ್ಟ್ರಿಷಿಯನ್, ಗಾರೆ, ಪೇಂಟಿಂಗ್ ಸೇರಿದಂತೆ ಇತರ ಕೆಲಸದವರು ಸಹ ಸರಿಯಾಗಿ ದೊರಕುತ್ತಿಲ್ಲ. ಒಟ್ಟಾರೆಯಾಗಿ ಕೂಲಿಕಾರ್ಮಿಕರಿಗೆ ಹಬ್ಬವಾದರೆ ಕಾಫಿ ತೋಟ ಗಳ ಮಾಲಿಕರು ಮಾತ್ರ ಚುನಾವಣೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಚುನಾವಣೆ ಮುಗಿಯಲು ಇನ್ನೂ ನಾಲ್ಕು ದಿನಗಳಿದ್ದು, ಚುನಾವಣೆ ಮುಗಿದರೆ ಸಾಕು ಅಂತ ಕಾಫಿ ತೋಟಗಳ ಮಾಲಿಕರು ಎದುರು ನೋಡುತ್ತಿದ್ದಾರೆ.
ಚುನಾವಣೆ ಹಿನ್ನೆಲೆ ಕಾಫಿ ತೊಟಗಳಿಗೆ ಕೆಲಸ ಮಾಡಲು ಕಾರ್ಮಿಕರು ಸರಿಯಾಗಿ ಬರುತ್ತಿಲ್ಲ. ಇದರಿಂದ ನಿಗದಿತ ವೇಳೆಯಲ್ಲಿ ಕೆಲಸಗಳು ಆಗುತ್ತಿಲ್ಲ. ಚುನಾವಣೆ ಮುಗಿದರೆ ಸಾಕು ಎಂಬ ಪರಿಸ್ಥಿತಿ ನಿರ್ಮಾ ಣವಾಗಿದೆ.
– ಪ್ರಶಾಂತ್, ಕಾಫಿ ತೋಟದ ಮಾಲಿಕ
ಕಳೆದ ಒಂದು ವಾರದಿಂದ ಚುನಾವಣೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಬೆಳಿಗ್ಗೆ 2 ಗಂಟೆ ಹಾಗೂ ಸಂಜೆ 2 ಗಂಟೆ ಪ್ರಚಾರಕ್ಕೆ ಹೋದರೆ 500 ರೂ ಸಿಗುತ್ತಿದೆ. ಹೀಗಾಗಿ ನೆಮ್ಮದಿಲಿ ಪ್ರಚಾರಕ್ಕೆ ಹೋಗುತ್ತಿದ್ದೇನೆ
. – ರಮೇಶ್, ಕೂಲಿ ಕಾರ್ಮಿಕ
– ಸುಧೀರ್ ಎಸ್.ಎಲ್