Advertisement

ಚುನಾವಣೆ ನೆಪ: ಬಸವ ಉತ್ಸವ ರದ್ದು ಸಾಧ್ಯತೆ

12:03 PM Jan 13, 2018 | |

ಬೀದರ: ಪ್ರಕೃತಿ ವಿಕೋಪ, ರಾಜಕೀಯ ಡೊಂಬರಾಟದಿಂದ ಕಳೆದೆರಡು ವರ್ಷಗಳಿಂದ ಬಸವ ಉತ್ಸವಕ್ಕೆ ತಣ್ಣೀರೆರುಚ್ಚುತ್ತ ಬಂದಿರುವ ರಾಜ್ಯ ಸರ್ಕಾರ ಈ ವರ್ಷ ವಿಧಾನಸಭೆ ಚುನಾವಣೆ ನೆಪವೊಡ್ಡಿ ಉತ್ಸವವನ್ನು ರದ್ದುಗೊಳಿಸುವ ಸಾಧ್ಯತೆ ದಟ್ಟವಾಗಿವೆ. ಶರಣರ ವಚನ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ನೆಲದ ಗತ ವೈಭವವನ್ನು ಪ್ರತಿಬಿಂಬಿಸಲು ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ 2009ರಿಂದ ಐತಿಹಾಸಿಕ ಬಸವ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ವಿವಿಧ ಕಾರಣಗಳಿಂದ ಕೈ ಬಿಡುತ್ತಲೇ ಬರಲಾಗುತ್ತಿದೆ. 

Advertisement

10 ವರ್ಷಗಳಲ್ಲಿ ಕೇವಲ ನಾಲ್ಕೈದು ಬಾರಿ ಮಾತ್ರ ಉತ್ಸವ ಆಚರಣೆ ಮಾಡಿರುವುದು ವಿಪರ್ಯಾಸ ಸಂಗತಿ. ಇದು ಕಲ್ಯಾಣ ನಾಡಿನ ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಬಸವ ಉತ್ಸವ ಇತರ ಉತ್ಸವಗಳಂತೆ ಬರೀ ಜಾತ್ರೆ ಅಥವಾ ಸಂಭ್ರಮಕ್ಕಾಗಿ ಮಾಡುವ ಆಚರಣೆಯಲ್ಲ, ಶರಣ ಸಂಸ್ಕೃತಿಯ ಪ್ರತೀಕ. ಬಸವಾದಿ ಶರಣರು ಸಾರಿದ ಸಮಾನತೆ, ಭಾವೈಕ್ಯತೆಯ ತತ್ವ ಪ್ರಚಾರ, ಪ್ರಸಾರದ ಉದ್ದೇಶ ಹೊಂದಿದೆ. ಪ್ರತಿ ವರ್ಷ ಉತ್ಸವ ಆಚರಣೆ ಮಾಡಬೇಕಾಗಿತ್ತು. ಆದರೂ ಒಮ್ಮೆ ಭೀಕರ ಬರ, ಮತ್ತೂಂದು ವರ್ಷ ಅತಿವೃಷ್ಟಿಯಿಂದ ರದ್ದುಗೊಳಿಸಿದರೆ ಮತ್ತೂಮ್ಮೆ ರಾಜಕೀಯ ನಾಯಕರ ದೊಂಬರಾಟಕ್ಕೆ ಬಸವ ಉತ್ಸವ ಬಲಿಯಾಗುತ್ತ ಬಂದಿದೆ. 

ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಕರಾವಳಿ ಉತ್ಸವ ಮತ್ತು ಕಿತ್ತೂರು ಉತ್ಸವದಂತೆ ಬೀದರ ಉತ್ಸವ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಅತಿವೃಷ್ಟಿ- ಅನಾವೃಷ್ಟಿ ಏನೇ ಇದ್ದರೂ ಈ ಉತ್ಸವಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ಸರ್ಕಾರ ಬಸವ ಉತ್ಸವದ ವಿಷಯದಲ್ಲಿ ಮಾತ್ರ ನಿರ್ಲಕ್ಷ್ಯ ತೋರಿಸುತ್ತಿದೆ. ಅತಿವೃಷ್ಟಿ ಎಂದಾಕ್ಷಣ ಮಾನವೀಯತೆ ವಿಜೃಂಭಿಸಬೇಕೆ ಹೊರತು ವಿವಾದಗಳು ಮುತ್ತಿಕೊಳ್ಳುತ್ತಿರುವುದು ಅರ್ಥಹೀನ. ಈ ಹಿಂದೆ 2014 ಮತ್ತು 2015ರಲ್ಲಿ ಕೊನೆಯ ಉತ್ಸವ ಆಚರಣೆ ನಡೆಸಲಾಗಿತ್ತು. ಈ ವರ್ಷ ಬಸವಾನುಯಾಯಿಗಳು ಮತ್ತು ಸಂಘ ಸಂಸ್ಥೆಗಳ ಒತ್ತಾಯದ ಮೇರೆಗೆ ಜಿಲ್ಲಾಡಳಿತ ಫೆ. 2ರಿಂದ ಮೂರು ದಿನಗಳ ಕಾಲ ಬಸವ ಉತ್ಸವ ಆಯೋಜಿಸಲು ನಿರ್ಧಾರ ಕೈಗೊಂಡಿತ್ತು. ಜ.1ರಂದು ಬಸವಕಲ್ಯಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ
ನಡೆದ ಸ್ವಾಮೀಜಿಗಳು, ಶಾಸಕರು ಮತ್ತು ಮುಖಂಡರ ಸಭೆಯಲ್ಲಿ ಅದ್ದೂರಿ, ಅರ್ಥಪೂರ್ಣವಾಗಿ ಆಚರಿಸಲು
ನಿರ್ಣಯಿಸಲಾಗಿತ್ತು. ಅದರಂತೆ ಜಿಲ್ಲಾಡಳಿತ ಮೊದಲ ಹಂತದ ಸಿದ್ಧತೆಗಳನ್ನು ಸಹ ಆರಂಭಿಸಿತ್ತು.

ಆದರೆ, ಬಸವ ಉತ್ಸವವನ್ನು ಈ ವರ್ಷವೂ ಕೈ ಬಿಡುವ ಲಕ್ಷಣಗಳು ಕಾಣಿಸಿಗುತ್ತಿವೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಯಾವುದೇ ಉತ್ಸವಗಳನ್ನು ಆಚರಿಸದಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು ಜಿಲ್ಲಾಡಳಿತ ಸಬೂಬು ನೀಡುತ್ತಿದೆ. ವಿಧಾನಸಭೆ ಚುನಾವಣೆ ನಡೆಯುವುದು ಮೇ ತಿಂಗಳಲ್ಲಿ, ಉತ್ಸವಕ್ಕೆ ದಿನಾಂಕ ಘೋಷಿಸಿರುವುದು ಫೆಬ್ರವರಿ ಮೊದಲ ವಾರದಲ್ಲಿ. ಚುನಾವಣೆ ಸಿದ್ಧತೆಗೆ ಸಮಯ ಬೇಕಾಗಿರುವುದು ನಿಜವಾದರೂ ಅದರೊಳಗೆ ಬಸವ ಉತ್ಸವವನ್ನು ಆಚರಿಸಲು ಯಾವುದೇ ತೊಡಕು ಎದುರಾಗದು ಎಂಬುದು ಬಸವ ಭಕ್ತರ ಅಭಿಪ್ರಾಯ.
 
ಜಿಲ್ಲಾಡಳಿತ ಉತ್ಸವದ ಸಿದ್ಧತೆಗಳನ್ನು ನಿಲ್ಲಿಸಿರುವುದು ಉತ್ಸವ ಆಚರಣೆ ರದ್ದುಗೊಳ್ಳುವುದು ಸ್ಪಷ್ಟವಾಗುತ್ತಿದೆ. ಇದು ನಿಜವೇ ಆದಲ್ಲಿ ಸರ್ಕಾರ ಬಸವ ನಿಷ್ಠರ ಕೆಂಗಣ್ಣಿಗೆ ಗುರಿಯಾಗುವುದಂತೂ ಸತ್ಯ. ಪ್ರತಿ ವರ್ಷ ಕಡ್ಡಾಯವಾಗಿ ಆಚರಿಸುವ ಕುರಿತು ಇತ್ತೀಚಿಗಷ್ಟೇ ಸಿಎಂ ಸಿದ್ದರಾಮಯ್ಯ ನೀಡಿದ್ದ ಭರವಸೆ ಹುಸಿಯಾಗಿದೆ. ಜಿಲ್ಲಾಡಳಿತ ಈ ಕುರಿತಂತೆ ಶೀಘ್ರದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡು ಜನರಿಗೆ ಸ್ಪಷ್ಟ ನಿರ್ಣಯ, ಅಭಿಪ್ರಾಯ ತಿಳಿಸಬೇಕಾಗಿದೆ.

 ಉತ್ಸವ ಸಂಭ್ರಮವಲ್ಲ
ಬಸವ ಉತ್ಸವ ಎಂದರೆ ಸಂಭ್ರಮಾಚರಣೆ, ವೈಭವ ಅಲ್ಲ. ಅದು ಜನರ ಉತ್ಸವ, ಶರಣ ತತ್ವಗಳನ್ನು ಮುಟ್ಟಿಸುವ ವೇದಿಕೆ. ಬೇರೆ ಯಾವುದೇ ಉತ್ಸವಗ ಆಚರಣೆಗೆಗಳಿಗೆ ಚುನಾವಣೆ, ಅತಿವೃಷ್ಟಿ ಅಡ್ಡಿಯಾಗುವುದಿಲ್ಲ. ಆದರೆ,
ಬಸವ ಉತ್ಸವಕ್ಕೆ ಇದರ ನೆಪವೊಡ್ಡುತ್ತ ರದ್ದುಗೊಳಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ವರ್ಷ ಉತ್ಸವ ಆಚರಿಸಬೇಕು.
-ಸುರೇಶ ಚನಶೆಟ್ಟಿ, ಯುವ ಬಸವ ಕೇಂದ್ರ

Advertisement

ಜನರ ಆಶಯಕ್ಕೆ ಸ್ಪಂದಿಸಲಿ 
ಬಸವ ಉತ್ಸವ ಪ್ರತಿ ವರ್ಷ ಆಚರಣೆ ಆಗಬೇಕೆಂಬುದು ಈ ಭಾಗದ ಜನರ ಆಶಯ. ಯಾವುದೇ ಕಾರಣಕ್ಕೂ
ಮುಂದೂಡುವುದು ಅಥವಾ ರದ್ದುಗೊಳಿಸುವುದು ಸರಿಯಲ್ಲ. ಚುನಾವಣೆ ಸಮೀಪಿಸುತ್ತಿದ್ದರೂ ಅಗತ್ಯ ಪ್ರಮಾಣದಲ್ಲಿ ಆಚರಣೆ ಮಾಡಬೇಕು. ಬಸವ ಭಕ್ತರ ಅಪೇಕ್ಷೆಯನ್ನು ಸರ್ಕಾರ, ಜಿಲ್ಲಾಡಳಿತ ಈಡೇರಿಸಬೇಕು.
-ಅಕ್ಕ ಅನ್ನಪೂರ್ಣತಾಯಿ, ಬೀದರ

ಉತ್ಸವ ರದ್ದು ಸೂಕ್ತವಲ್ಲ
ಎರಡು ವರ್ಷಗಳಿಂದ ವಿವಿಧ ಕಾರಣಕ್ಕಾಗಿ ಬಸವ ಉತ್ಸವವನ್ನು ರದ್ದುಗೊಳಿಸುತ್ತ ಬರಲಾಗಿದೆ. ಈ ವರ್ಷ ಆಚರಣೆಗೆ ದಿನಾಂಕ ಘೋಷಣೆ ಮಾಡಿ ಈಗ ಚುನಾವಣೆ ಸಿದ್ಧತೆಯ ನೆಪವೊಡ್ಡಿ ಉತ್ಸವ ರದ್ದುಗೊಳಿಸುವುದು ಸೂಕ್ತವಲ್ಲ. ಬಸವಣ್ಣನವರ ಸಮಾನತೆ ಸಂದೇಶ ಸಾರುವುದೇ ಉತ್ಸವದ ಉದ್ದೇಶ. ಈ ಕುರಿತು ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕು. 
-ಡಾ| ಬಸವಲಿಂಗ ಪಟ್ಟದ್ದೇವರು, ಭಾಲ್ಕಿ 

ಸಚಿವರೊಂದಿಗೆ ಚರ್ಚಿಸಿ ತೀರ್ಮಾನ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಯಾವುದೇ ಉತ್ಸವಗಳನ್ನು ಆಚರಿಸದಂತೆ ಸರ್ಕಾರ ಸೂಚಿದೆ. ಈಗಾಗಲೇ ಬೀದರ ಉತ್ಸವ ಆಚರಣೆಗೆ ನಿರ್ಣಯಿಸಿ, ದಿನಾಂಕ ಘೋಷಿಸಲಾಗಿದೆ. ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಶೀಘ್ರ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. 
 -ಡಾ| ಎಚ್‌.ಆರ್‌ ಮಹಾದೇವ, ಜಿಲ್ಲಾಧಿಕಾರಿ

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next