ಬೀದರ: ಕಾರಂಜಾ ಜಲಾಶಯ ನಿರ್ಮಾಣಕ್ಕೆ ಭೂಮಿ ಮತ್ತು ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ವೈಜ್ಞಾನಿಕ ಬೆಲೆ ಕೊಡಿಸುವಲ್ಲಿ ರಾಜಕಾರಣಿಗಳು ವಿಫಲರಾದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ವಾರದಿಂದ ನಿರಂತರ ಧರಣಿ ನಡೆಸುತ್ತಿರುವ ಸ್ಥಳದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಂತ್ರಸ್ತರಿಗೆ ನ್ಯಾಯ ನೀಡುವಂತೆ ಒತ್ತಾಯಿಸಿ ಅನೇಕ ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಕಳೆದ ವರ್ಷ 70 ದಿನಗಳ ಕಾಲ ಅಹೋರಾತ್ರಿ ಧರಣಿ ಕೂಡ ನಡೆಸಲಾಗಿತ್ತು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ, ಇಂದಿಗೂ ಸರ್ಕಾರ ಸಂತ್ರಸ್ತರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ಸಂತ್ರಸ್ತರ ಪರ ಕೆಲಸ ಮಾಡುತ್ತಿಲ್ಲ. ಹೀಗಾಗಿ ಬರುವ ಲೋಕಸಭೆ ಚುನಾವಣೆಯಲ್ಲಿ 28 ಗ್ರಾಮಗಳಲ್ಲಿನ 9 ಸಾವಿರ ಕಾರಂಜಾ ಸಂತ್ರಸ್ತರ ಕುಟುಂಬಗಳು ಚುನಾವಣೆ ಬಹಿಷ್ಕರಿಸಿ ಧರಣಿ ಮುಂದುವರಿಸುವುದಾಗಿ ತಿಳಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಸಂತ್ರಸ್ತ ರೈತರ ಬಗ್ಗೆ ನಿರ್ಲಕ್ಷ ತೋರುತ್ತಿದ್ದು, ಸಾಮಾಜಿಕ ಕಳಕಳಿಯಿಲ್ಲದ ಜನಪ್ರತಿನಿಧಿಗಳು ಲೋಕಸಭಾ ಚುನಾವಣೆಗೆ ಅರ್ಹ ಅಲ್ಲ ಎಂದು ಆರೋಪಿಸಿದರು. ಜನಪ್ರತಿನಿಧಿಗಳ ಕಾರ್ಯವೈಫಲ್ಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗುವುದು. ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯದೆ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
ಓಂಕಾರ ಪಾಟೀಲ, ರಾಜಕುಮಾರ ಚಿಲ್ಲರ್ಗಿ, ಅಶೋಕ ಕುಲಕರ್ಣಿ, ಭೀಮರೆಡ್ಡಿ ಔರಾದ, ಶಿವಕುಮಾರ ಸ್ವಾಮಿ ಬಾವಗೆ, ಎಂ.ಡಿ. ರಫಿಯೋದ್ದಿನ್ ರಂಜೋಳಖೇಣಿ, ಸಂಗಮೇಶ ಬಾವಗೆ, ರಾಜಶೇಖರ, ಸೂರ್ಯಕಾಂತ ಡಾಕುಳಗೆ ಸೇರಿದಂತೆ ಇತರರು ಇದ್ದರು.